ಕಳೆದ ತಿಂಗಳು ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಶಮಾರ್ ಜೋಸೆಫ್‌ 7 ವಿಕೆಟ್‌ ಕಬಳಿಸಿ ತಂಡ 8 ರನ್‌ಗಳ ರೋಚಕ ಗೆಲುವು ಸಾಧಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು. ಬ್ಯಾಟಿಂಗ್‌ ವೇಳೆ ಕಾಲು ಬೆರಳು ಮುರಿದರೂ ಲೆಕ್ಕಿಸದೆ ಗಂಟೆಗೆ 140-145 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ ಕಾಂಗರೂ ಬ್ಯಾಟರ್‌ಗಳನ್ನು ನಡುಗಿಸಿದ್ದರು.

ನವದೆಹಲಿ(ಫೆ.11): ಇತ್ತೀಚೆಗೆ ಆಸ್ಟ್ರೇಲಿಯಾ ನೆಲದಲ್ಲಿ ವಿಂಡೀಸ್‌ 27 ವರ್ಷ ಬಳಿಕ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ನೆರವಾಗಿದ್ದ ವೇಗಿ ಶಮಾರ್‌ ಜೋಸೆಫ್‌ 2024ರ ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್‌ ಪರ ಆಡಲಿದ್ದಾರೆ. 3 ಕೋಟಿ ರು.ಗೆ ಅವರು ಲಖನೌಗೆ ಸೇರ್ಪಡೆಗೊಂಡಿರುವುದಾಗಿ ಶನಿವಾರ ಐಪಿಎಲ್‌ ಆಡಳಿತ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ. ಇಂಗ್ಲೆಂಡ್‌ ವೇಗಿ ಮಾರ್ಕ್‌ ವುಡ್‌ ಬದಲು ಶಮಾರ್‌ ಜೋಸೆಫ್‌ ತಂಡ ಸೇರಿದ್ದಾರೆ.

ಕಳೆದ ತಿಂಗಳು ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಶಮಾರ್ ಜೋಸೆಫ್‌ 7 ವಿಕೆಟ್‌ ಕಬಳಿಸಿ ತಂಡ 8 ರನ್‌ಗಳ ರೋಚಕ ಗೆಲುವು ಸಾಧಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು. ಬ್ಯಾಟಿಂಗ್‌ ವೇಳೆ ಕಾಲು ಬೆರಳು ಮುರಿದರೂ ಲೆಕ್ಕಿಸದೆ ಗಂಟೆಗೆ 140-145 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ ಕಾಂಗರೂ ಬ್ಯಾಟರ್‌ಗಳನ್ನು ನಡುಗಿಸಿದ್ದರು.

Ranji Trophy: ಕರ್ನಾಟಕದ ದಾಳಿಗೆ ತಮಿಳುನಾಡು ತತ್ತರ!

ಮಾರ್ಕ್‌ವುಡ್ ಐಪಿಎಲ್‌ನಿಂದ ಔಟ್: ಇನ್ನು ಇಂಗ್ಲೆಂಡ್ ತಂಡದ ಮಾರಕ ವೇಗಿ ಮಾರ್ಕ್‌ ವುಡ್ ಮುಂಬರುವ ಮಹತ್ವದ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ವರ್ಕ್‌ಲೋಡ್ ನಿಭಾಯಿಸುವ ಉದ್ದೇಶದಿಂದ ಮುಂಬರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇಂಗ್ಲೆಂಡ್ ತಂಡವು ಜೂನ್‌ನಲ್ಲಿ ಮಹತ್ವದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಇದಾದ ಬಳಿಕ ತವರಿನಲ್ಲಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಎದುರು ಟೆಸ್ಟ್‌ ಸರಣಿಯನ್ನಾಡಲಿದೆ. ಇನ್ನು ಇತ್ತೀಚೆಗಷ್ಟೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಮಾರಕ ವೇಗಿ ಜೋಫ್ರಾ ಆರ್ಚರ್ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ತಡೆ ನೀಡಿತ್ತು. ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿರುವ ಜೋಫ್ರಾ ಆರ್ಚರ್ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.

2022ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 7.50 ಕೋಟಿ ರುಪಾಯಿ ನೀಡಿ ಮಾರ್ಕ್‌ ವುಡ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಮೊಣಕೈ ಗಾಯದ ಸಮಸ್ಯೆಯಿಂದಾಗಿ 2022ರ ಐಪಿಎಲ್ ಟೂರ್ನಿಯಲ್ಲಿ ಮಾರ್ಕ್‌ ವುಡ್‌ ಕಣಕ್ಕಿಳಿದಿರಲಿಲ್ಲ. ಇನ್ನು 2023ರ ಐಪಿಎಲ್ ಟೂರ್ನಿಯಲ್ಲಿ ಮಾರ್ಕ್‌ ವುಡ್ ಲಖನೌ ತಂಡದ ಪರ ಕೇವಲ 4 ಪಂದ್ಯಗಳನ್ನಾಡಿ 11 ವಿಕೆಟ್ ಕಬಳಿಸಿ ಮಿಂಚಿದ್ದರು. 

ಹಣ್ಣು, ಬಾಟಲಿಯನ್ನು ಬಾಲ್‌ ಮಾಡಿ ಆಡುತ್ತಿದ್ದ ಶಮಾರ್‌!

ವಿಂಡೀಸ್‌ನ ಶಮಾರ್‌ ಜೋಸೆಫ್‌ರ ಕ್ರಿಕೆಟ್‌ ಪಯಣ ಯಾವ ಸಿನಿಮಾ ಕಥೆಗೂ ಕಡಿಮೆಯೇನಲ್ಲ. ಕಾಡಲ್ಲಿ ಮರ ಕಡಿಯುವೊಂದೇ ವೃತ್ತಿ ಮಾಡಿಕೊಂಡಿರುವ, ಕೇವಲ 400 ಜನಸಂಖ್ಯೆಯುಳ್ಳ ಕೆರಿಬಿಯನ್‌ನ ಹಳ್ಳಿಯೊಂದರ ಪ್ರತಿಭೆಯಾಗಿರುವ ಶಮಾರ್‌, 2021ರ ವರೆಗೂ ಬಾರ್ಬಿಸ್‌ ಎಂಬಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಶಮಾರ್‌ರ ಗ್ರಾಮಕ್ಕೆ ತೆರಳಬೇಕಿದ್ದರೆ 2 ಗಂಟೆ ಬೋಟ್‌ನಲ್ಲಿ ಸಂಚರಿಸಬೇಕಿದ್ದು, 2018ರ ವರೆಗೂ ಅವರ ಊರಿನಲ್ಲಿ ಮೊಬೈಲ್, ಇಂಟರ್ನೆಟ್‌ ಸೇವೆ ಇರಲಿಲ್ಲ. ಪ್ಲಾಸ್ಟಿಕ್‌ ಬಾಟಲ್‌, ಹಣ್ಣುಗಳನ್ನೇ ಎಸೆದು ಬೌಲಿಂಗ್‌ ಮಾಡುತ್ತಿದ್ದ ಶಮಾರ್‌, ಕಳೆದ ವರ್ಷದವರೆಗೂ ವೃತ್ತಿಪರ ಕ್ರಿಕೆಟರೇ ಆಗಿರಲಿಲ್ಲ ಎನ್ನುವುದು ಹಲವರಿಗೆ ಗೊತ್ತಿಲ್ಲ.

ಜಸ್ಪ್ರೀತ್ ಬುಮ್ರಾ ನೆಟ್‌ವರ್ತ್‌: ಸಂಬಳ, ಸಂಪತ್ತಿನ ಇಂಟ್ರೆಸ್ಟಿಂಗ್ ಮಾಹಿತಿ..!

ಯಾವುದೇ ವೃತ್ತಿಪರ ಕ್ರಿಕೆಟ್‌ ಆಟದೆ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗೆ ಆಯ್ಕೆಯಾದ ಬಳಿಕ ಶಮಾರ್‌ರ ಬದುಕಿನ ದಿಕ್ಕೇ ಬದಲಾಗಿದೆ. ಊರಲ್ಲಿ ಕೆಲಸದ ವೇಳೆ ತಮ್ಮ ಮೇಲೆ ಮರ ಬೀಳುವುದರಿಂದ ಅಲ್ಪದರಲ್ಲೇ ಪಾರಾಗಿ, ಸಾವಿನಿಂದ ಬಚಾವಾಗಿದ್ದ ಶಮಾರ್‌ ಸದ್ಯ ವಿಂಡೀಸ್‌ ಕ್ರಿಕೆಟ್‌ ತಂಡದ ಹೀರೋ. ಸದ್ಯದಲ್ಲೇ ಅವರು ಐಪಿಎಲ್‌ನಲ್ಲೂ ಹೀರೋ ಆಗಿ ಮಿನುಗಬೇಕು ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಮಹದಾಸೆ.