Asianet Suvarna News Asianet Suvarna News

IPL 2024 ಸೂರ್ಯ-ಕಿಶನ್ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ, ಫಾಫ್ ಪಡೆಗೆ ಹೀನಾಯ ಸೋಲು..!

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಗೆಲ್ಲಲು ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆರಂಭಿಕರಾದ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಕಿಶನ್ ಕೇವಲ 23 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು.

IPL 2024 Mumbai Indians Thrash RCB by 7 Wickets with 27 balls to spare kvn
Author
First Published Apr 11, 2024, 11:31 PM IST

ಮುಂಬೈ(ಏ.11): ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ವಿಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲಲು 197 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು ಇನ್ನೂ 27 ಎಸೆತ ಬಾಕಿ ಇರುವಂತೆಯೇ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಕಂಡರೆ, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ 4ನೇ ಸೋಲು ಅನುಭವಿಸಿದೆ.   

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಗೆಲ್ಲಲು ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆರಂಭಿಕರಾದ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಕಿಶನ್ ಕೇವಲ 23 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಮೊದಲ ಆರು ಓವರ್‌ನಲ್ಲಿ ಈ ಜೋಡಿ 72 ರನ್ ಕಲೆಹಾಕಿತು. ಆ ಬಳಿಕ ಇಶಾನ್ ಕಿಶನ್ ಮತ್ತಷ್ಟು ಆಕ್ರಮಣಕಾರಿ ಆಟವಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 8.5 ಓವರ್‌ಗಳಲ್ಲಿ 101 ರನ್‌ಗಳ ಜತೆಯಾಟವಾಡಿತು. ಇಶಾನ್ ಕಿಶನ್ ಕೇವಲ 34 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್ ಸಹಿತ 69 ರನ್ ಬಾರಿಸಿ ಆಕಾಶ್‌ದೀಪ್‌ಗೆ ವಿಕೆಟ್ ಒಪ್ಪಿಸಿದರು. 

ಇನ್ನು ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅದರಲ್ಲೂ 11ನೇ ಓವರ್ ಬೌಲಿಂಗ್ ಮಾಡಿದ ಆಕಾಶ್‌ದೀಪ್ ಓವರ್‌ನಲ್ಲಿ ಸೂರ್ಯ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 24 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮಾಜಿ ನಾಯಕ ರೋಹಿತ್ ಶರ್ಮಾ 24 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 38 ರನ್ ಬಾರಿಸಿ ವಿಲ್ ಜ್ಯಾಕ್ಸ್‌ಗೆ ವಿಕೆಟ್ ಒಪ್ಪಿಸಿದರು

ಆರ್ಭಟಿಸಿದ ಸೂರ್ಯ: ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಪಂದ್ಯವನ್ನಾಡಿದ ಸೂರ್ಯ, ಮೈಚಳಿಬಿಟ್ಟು ಬ್ಯಾಟ್ ಬೀಸಿ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು. ಸೂರ್ಯ ಕೇವಲ 19 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 52 ರನ್ ಸಿಡಿಸಿ ಮುಂಬೈ ಗೆಲುವನ್ನು ಸುಲಭವಾಗಿಸಿದರು. ಅಂತಿಮವಾಗಿ ವೈಶಾಕ್ ವಿಜಯ್‌ಕುಮಾರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

ಇನ್ನು ಕೊನೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ 6 ಎಸೆತಗಳಲ್ಲಿ ಅಜೇಯ 21 ಹಾಗೂ ತಿಲಕ್ ವರ್ಮಾ 10 ಎಸೆತಗಳಲ್ಲಿ ಅಜೇಯ 16 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Follow Us:
Download App:
  • android
  • ios