ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿಗೆಲುವಿನ ಬೆನ್ನಲ್ಲೇ ಟೀಕಾಕಾರರಿಗೆ ಎಚ್ಚರಿಕೆ ನೀಡಿದ ವಿರಾಟ್ ಕೊಹ್ಲಿಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ ವಿರಾಟ್ ಕೊಹ್ಲಿ

ಬೆಂಗಳೂರು(ಏ.03): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮುಂಬೈ ಎದುರು 8 ವಿಕೆಟ್‌ ಜಯ ಸಾಧಿಸುವ ಮೂಲಕ ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ತವರಿನ ಮೈದಾನದಲ್ಲಿ ಅದ್ದೂರಿ ಪ್ರದರ್ಶನ ತೋರಿದ ಆರ್‌ಸಿಬಿ ತಂಡವು, ತಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ವೇಳೆ ಪಂದ್ಯ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಮುಂಬೈ ಇಂಡಿಯನ್ಸ್ ತಂಡವು ನೀಡಿದ್ದ 172 ರನ್‌ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ 148 ರನ್‌ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿ ಕೊಟ್ಟರು. ಫಾಫ್ ಡು ಪ್ಲೆಸಿಸ್‌ 43 ಎಸೆತಗಳನ್ನು ಎದುರಿಸಿ 73 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 49 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 82 ರನ್ ಬಾರಿಸುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆರ್‌ಸಿಬಿ ತಂಡವು ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ ಸುಲಭ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

IPL ಟೂರ್ನಿಯಲ್ಲಿ ಭಾರತದ ಯಾವೊಬ್ಬ ಬ್ಯಾಟರ್‌ ಮಾಡಲಾಗದ ಸಾಧನೆ ಬರೆದ RCB ಹುಲಿ ವಿರಾಟ್ ಕೊಹ್ಲಿ

ಮುಂಬೈ ಎದುರು ಪಂದ್ಯ ಗೆದ್ದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, "ಇದೊಂದು ಅದ್ಭುತ ಗೆಲುವು. ಸಾಕಷ್ಟು ವರ್ಷಗಳ ಬಳಿಕ ನಾವು ತವರಿನಲ್ಲಿ ಪಂದ್ಯವನ್ನಾಡುತ್ತಿದ್ದೇವೆ. ಎದುರಾಳಿ ತಂಡದ ಬ್ಯಾಟರ್‌ಗಳು, ಅದರಲ್ಲೂ ತಿಲಕ್ ವರ್ಮಾ ಚೆನ್ನಾಗಿಯೇ ಬ್ಯಾಟ್ ಮಾಡಿದರು. ಇನ್ನು ಗುರಿ ಬೆನ್ನತ್ತಿದ ನಮಗೆ ನಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟಿದ್ದೆವು. ಫಾಫ್ ಮೊದಲಿಗೆ ಸ್ಪೋಟಕ ಆಟವಾಡಿದರು, ಆ ನಂತರ ನಾನೂ ಅವರನ್ನು ಕೂಡಿಕೊಂಡೆ. ಇಂದು ಮೂಡಿ ಬಂದ ಪ್ರದರ್ಶನದ ಬಗ್ಗೆ ನನಗೆ ಖುಷಿ ಇದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಳೆದ 15 ಆವೃತ್ತಿಯಲ್ಲಿ ಪಾಲ್ಗೊಂಡರೂ ಕಪ್‌ ಗೆಲ್ಲಲು ಯಶಸ್ವಿಯಾಗಿಲ್ಲ ಎಂದು ಹಲವು ಮಂದಿ ಟೀಕಿಸುತ್ತಿರುತ್ತಾರೆ. ಅಂತಹವರಿಗೆ ವಿರಾಟ್ ಕೊಹ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. " ಮುಂಬೈ ಇಂಡಿಯನ್ಸ್‌ 5 ಬಾರಿ ಟ್ರೋಫಿ ಗೆದ್ದಿದೆ, ಚೆನ್ನೈ ಸೂಪರ್ ಕಿಂಗ್ಸ್‌ 4 ಬಾರಿ ಟ್ರೋಫಿ ಜಯಿಸಿದೆ. ಇನ್ನು ನಾವು ನಾವು ಅತಿಹೆಚ್ಚು ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿದ್ದೇವೆ. ನಾವು ಐಪಿಎಲ್‌ ಟೂರ್ನಿಯಲ್ಲಿ ಯಾವಾಗಲೂ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದೇವೆ. ಯಾವಾಗಲೂ ನಾವು ಗುರಿಯತ್ತ ನಮ್ಮ ಗಮನ ಹೊಂದಿರಬೇಕು ಹಾಗೂ ಸಮತೋಲಿತ ತಂಡವನ್ನು ಹೊಂದಿರಬೇಕು. ನಾವು ಇದೇ ಲಯವನ್ನು ಮುಂದುವರೆಸಿಕೊಂಡು ಹೋಗಬೇಕು ಹಾಗೂ ನಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿಕೊಳ್ಳಬೇಕು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಳೆದ ಮೂರು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಪ್ಲೇ ಆಫ್‌ ಹಂತ ಪ್ರವೇಶಿಸಿದೆ. ಆದರೆ ಕಪ್‌ ಗೆಲ್ಲಲು ವಿಫಲವಾಗುತ್ತಲೇ ಬಂದಿದೆ. ಈ ಬಾರಿ ಕೂಡಾ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಆರ್‌ಸಿಬಿ ತಂಡವು ಫೈನಲ್ ಪ್ರವೇಶಿಸಿ ಕಪ್‌ ಗೆಲ್ಲಲು ಯಶಸ್ವಿಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.