IPL 2023: ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ವರುಣ್ ಚಕ್ರವರ್ತಿ, ವೆಂಕಿ ಅಯ್ಯರ್
ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ ಕೆಕೆಆರ್ ತಾರೆಯರು
ಬಹುಕಾಲದ ಕನಸು ನನಸಾಗಿಸಿಕೊಂಡ ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ
ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಂಡಿರುವ ಕೆಕೆಆರ್
ಚನ್ನೈ(ಮೇ.16): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಹತ್ತಿರದಲ್ಲಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನತ್ತ ಮುಗಿಬೀಳುವುದು ಸರ್ವೇಸಾಮಾನ್ಯ. ಇದರ ನಡುವೆ ಕ್ರಿಕೆಟಿಗರು ಕೂಡಾ ನಮ್ಮ ನೆಚ್ಚಿನ ಆಟಗಾರರನ್ನು ಸಿನಿಮಾ ತಾರೆಯರನ್ನು ಭೇಟಿಯಾಗಲು ಈ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ವೇದಿಕೆಯಾಗಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇಬ್ಬರು ತಾರಾ ಆಟಗಾರರು ತಮ್ಮ ಸಿನಿ ಆರಾಧ್ಯ ದೈವ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.
ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ತಮ್ಮ ನೆಚ್ಚಿನ ನಟ ರಜನಿಕಾಂತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರರಾದ ವೆಂಕಟೇಶ್ ಅಯ್ಯರ್ ಹಾಗೂ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ತಲೈವಾರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತಂತೆ ಬರೆದುಕೊಂಡಿರುವ ವರುಣ್ ಚಕ್ರವರ್ತಿ, ಪ್ರತಿ ರಾತ್ರಿ ಆಕಾಶದಲ್ಲಿ ನಾವು ಲಕ್ಷಾಂತರ ನಕ್ಷತ್ರಗಳನ್ನು ನೋಡುತ್ತೇವೆ. ಜೀವನದಲ್ಲಿ ಒಮ್ಮೆ ಮಾತ್ರ ಇಂತಹ ಸೂಪರ್‌ಸ್ಟಾರ್ ಭೇಟಿಯಾಗುವ ಭಾಗ್ಯ ಸಿಕ್ಕಿದೆ. ನಿಮ್ಮ ಜತೆ ಮಾತನಾಡಿದ್ದು ನಿಜಕ್ಕೂ ನಮ್ಮ ಕುಟುಂಬದ ಜತೆ ಮಾತನಾಡಿದಂತಿತ್ತು. ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್ ಬುಕ್ ನೀಡಿದ್ದಕ್ಕೆ ಧನ್ಯವಾದಗಳು ಎಂದು ಚಕ್ರವರ್ತಿ ಬರೆದುಕೊಂಡಿದ್ದಾರೆ.
ಇನ್ನು ಕೆಕೆಆರ್ ಸ್ಪೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್, "ತಲೈವಾನ ದರ್ಶನವಾಗಿ ನನ್ನ ಹೃದಯ ಹಾಗೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ. ನನ್ನ ಬಾಲ್ಯದ ಕನಸಾದ ನಿಮ್ಮನ್ನು ಭೇಟಿಯಾಗಬೇಕೆನ್ನುವ ಕನಸು ಕೊನೆಗೂ ನನಸಾಗಿದೆ. ಎಂತಹ ಅದ್ಭುತ ಅನುಭವ. ನಿಮ್ಮ ಜತೆ ಮಾತನಾಡುವಾಗ ನಾವು ಸಾಕಷ್ಟು ವರ್ಷಗಳಿಂದಲೂ ತುಂಬಾ ಪರಿಚಿತರೇನೋ ಎನ್ನುವಂತಿತ್ತು ಎಂದು ವೆಂಕಿ ಬರೆದುಕೊಂಡಿದ್ದಾರೆ.
'ನಾನು ಕೊನೆಯುಸಿರೆಳೆಯುವ ಮುನ್ನ ಈ 2 ಕ್ಷಣಗಳನ್ನು ನೋಡಬೇಕು'; ಕೊನೆಯಾಸೆ ಬಿಚ್ಚಿಟ್ಟ ಸುನಿಲ್ ಗವಾಸ್ಕರ್
ಈ ಇಬ್ಬರು ಆಟಗಾರರು ಮೇ 14ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ನಡೆದ ಮರುದಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದರು. ಆ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡವು 6 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.