'ನಾನು ಕೊನೆಯುಸಿರೆಳೆಯುವ ಮುನ್ನ ಈ 2 ಕ್ಷಣಗಳನ್ನು ನೋಡಬೇಕು'; ಕೊನೆಯಾಸೆ ಬಿಚ್ಚಿಟ್ಟ ಸುನಿಲ್ ಗವಾಸ್ಕರ್
ತಮ್ಮ ಕೊನೆಯಾಸೆ ಬಿಚ್ಚಿಟ್ಟ ಗವಾಸ್ಕರ್
ಧೋನಿ ಆಟೋಗ್ರಾಫ್ ಪಡೆದುಕೊಂಡ ದಿಗ್ಗಜ
ಚೆನ್ನೈ(ಮೇ.16): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಕ್ರಿಕೆಟ್ ದಿಗ್ಗಜ ಎಂ ಎಸ್ ಧೋನಿಯವರ ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಭಾರತದ ಇಡೀ ಕ್ರಿಕೆಟ್ ವಲಯ ಒಂದು ರೀತಿ ಭಾವನಾತ್ಮಕ ಸನ್ನಿವೇಶಕ್ಕೆ ಒಳಗಾಗುತ್ತಿದೆ. ಧೋನಿ ತವರಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಕಣಕ್ಕಿಳಿದಾಗ ಇಡೀ ಕ್ರಿಕೆಟ್ ಅಭಿಮಾನಿಗಳ ಹೃದಯಬಡಿತ ಪ್ರತಿನಿಮಿಷಕ್ಕೆ ಹೆಚ್ಚಾಗುತ್ತಿತ್ತು. ಯಾಕೆಂದರೆ ಧೋನಿ ಎಲ್ಲಿ ತಮ್ಮ ನಿವೃತ್ತಿ ಘೋಷಿಸಿಬಿಡುತ್ತಾರೋ ಎನ್ನುವಂತಹ ಆತಂಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.
ಇನ್ನು ಭಾರತದ ಮತ್ತೋರ್ವ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡಾ, ಚೆನ್ನೈನ ಚೆಪಾಕ್ ಮೈದಾನದಲ್ಲಿ ಧೋನಿ ಬಳಿ ಹೋಗಿ ತಾವು ಧರಿಸಿದ್ದ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದರು. ಇದು ಕೂಡಾ ಒಂದು ರೀತಿ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ಇನ್ನು ಇದೇ ವೇಳೆ ಧೋನಿ ಬಳಿ ಆಟಗ್ರಾಫ್ ಹಾಕಿಸಿಕೊಂಡ ಕ್ಷಣದ ಬಗ್ಗೆ ಹಾಗೂ ತಮ್ಮ ಕೊನೆಯ ಆಸೆಯ ಬಗ್ಗೆ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ತುಟಿಬಿಚ್ಚಿದ್ದಾರೆ.
ಚೆನ್ನೈನಲ್ಲಿ ಧೋನಿಗೆ ಲ್ಯಾಫ್ ಆಫ್ ಆನರ್ ನೀಡುತ್ತಿರುವ ವಿಚಾರ ತಿಳಿದು, ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ತೀರ್ಮಾನಿಸಿದೆ. ಈ ಕಾರಣಕ್ಕಾಗಿಯೇ ನಾನು ಒಡೋಡಿ ಧೋನಿ ಬಳಿ ಹೋಗಿ ಅವರ ಆಟೋಗ್ರಾಫ್ ಪಡೆದುಕೊಂಡೆ. ಇದು ಚೆಪಾಕ್‌ನಲ್ಲಿ ಅವರು ಆಡುವ ಕೊನೆಯ ತವರಿನ ಪಂದ್ಯ. ಒಂದುವೇಳೆ ಚೆನ್ನೈ ಪ್ಲೇ ಆಫ್‌ಗೇರಿದರೆ ಮತ್ತೆ ಇಲ್ಲಿ ಕ್ವಾಲಿಫೈಯರ್ ಆಡುವ ಸಾಧ್ಯತೆಯಿದೆ. ಆದರೆ ನಾನು ಈ ಕ್ಷಣವನ್ನೇ ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ತೀರ್ಮಾನಿಸಿ ಆಟೋಗ್ರಾಫ್ ಪಡೆದುಕೊಂಡೆ. ಕ್ಯಾಮರಾಮನ್‌ನ ವಿಭಾಗದ ಯಾರೋ ಒಬ್ಬರು ನನಗೆ ಮಾರ್ಕರ್ ಪೆನ್ ನೀಡಿದರು. ಹೀಗಾಗಿ ಆ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ನಾನು ಧೋನಿ ಬಳಿ ಹೋಗಿ ನನ್ನ ಶರ್ಟ್ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿಕೊಂಡೆ. ಅವರ ಜತೆ ಮಾತನಾಡಿದ್ದು ಚೆನ್ನಾಗಿತ್ತು. ನನಗೆ ಅದೊಂದು ಭಾವನಾತ್ಮಕ ಕ್ಷಣವಾಗಿತ್ತು. ಯಾಕೆಂದರೆ ಅವರು ಭಾರತ ಕ್ರಿಕೆಟ್‌ಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ ಎಂದು ಸುನಿಲ್ ಗವಾಸ್ಕರ್, ಆ ಭಾವನಾತ್ಮಕ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ಇನ್ನು ತಾವು ಕೊನೆಯುಸಿರೆಳೆಯುವ ಮುನ್ನ ತಮ್ಮ ಕೊನೆಯ ಆಸೆಯನ್ನು ಸುನಿಲ್ ಗವಾಸ್ಕರ್ ಬಿಚ್ಚಿಟ್ಟಿದ್ದಾರೆ. "ನಾನು ಕೊನೆಯುಸಿರೆಳೆಯುವ ಮುನ್ನ 1983ರ ಏಕದಿನ ವಿಶ್ವಕಪ್ ಅನ್ನು ಕಪಿಲ್ ದೇವ್ ಎತ್ತಿ ಹಿಡಿಯುತ್ತಿರುವುದು ಹಾಗೂ ಮಹೇಂದ್ರ ಸಿಂಗ್ ಧೋನಿ 2011ರ ಏಕದಿನ ವಿಶ್ವಕಪ್‌ನ ಫೈನಲ್ ಕೊನೆಯ ಸಿಕ್ಸರ್ ಬಾರಿಸುವುದನ್ನು ನೋಡಿ ತಾವು ಕಣ್ಮುಚ್ಚಬೇಕು ಎಂದು ತಮ್ಮ ಎರಡು ಕೊನೆಯ ಆಸೆಯನ್ನು ಹೊರಹಾಕಿದ್ದಾರೆ.