ಕೋಲ್ಕತಾದಲ್ಲಿ ವಿಶೇಷ ಚೇತನ ಅಭಿಮಾನಿಯನ್ನು ಭೇಟಿ ಮಾಡಿದ ಶಾರುಖ್ ಖಾನ್ಆರ್‌ಸಿಬಿ-ಕೆಕೆಆರ್ ನಡುವಿನ ಪಂದ್ಯದ ವೇಳೆಯಲ್ಲಿ ಅಪ್ಪಟ ಅಭಿಮಾನಿ ಭೇಟಿ ಮಾಡಿದ ಕಿಂಗ್ ಖಾನ್ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಾರುಖ್ ಖಾನ್ ನಡೆ
ಕೋಲ್ಕತಾ(ಏ.08): ಕೋಲ್ಕತಾ ನೈಟ್ ರೈಡರ್ಸ್ ತಂಡವು ಬರೋಬ್ಬರಿ 3 ವರ್ಷಗಳ ಬಳಿಕ ಕೊನೆಗೂ ತನ್ನ ತವರಿನ ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಐಪಿಎಲ್ ಪಂದ್ಯವನ್ನಾಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ನಡೆದ ಪಂದ್ಯದಲ್ಲಿ ನಿತೀಶ್ ರಾಣಾ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು 81 ರನ್ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಕೆಕೆಆರ್ ತಂಡವು ಗೆಲುವು ದಾಖಲಿಸಿದ್ದರ ಜತೆಗೆ ಸ್ಟೇಡಿಯಂನಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಉಪಸ್ಥಿತರಿದ್ದದ್ದು ಅಭಿಮಾನಿಗಳ ಪಾಲಿಗೆ ಸಿಹಿಯಾದ ಕೇಕ್ ಮೇಲೆ ಚೆರಿ ಇಟ್ಟಂತಾಗಿತ್ತು.
ಇನ್ನು ಇದೇ ವೇಳೆ ದಿಗ್ಗಜ ನಟ ಶಾರುಖ್ ಖಾನ್, ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ತಮ್ಮ ಅಪ್ಪಟ ವಿಶೇಷ ಚೇತನ ಅಭಿಮಾನಿಯಾದ ಹರ್ಸುಲ್ ಅವರನ್ನು ಭೇಟಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕೆಕೆಆರ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಿಂಗ್ ಖಾನ್ ತಮ್ಮ ಅಭಿಮಾನಿಯಾದ ಹರ್ಸುಲ್ ಗೋಯೆಂಕಾ ಅವರನ್ನು ಭೇಟಿ ಮಾಡಿ ಅವರ ಹಣೆಗೆ ಮುತ್ತಿಟ್ಟರು. ಶಾರುಖ್ ಖಾನ್ ಅವರ ಈ ನಡೆ ನೆಟ್ಟಿಗರ ಹೃದಯ ಗೆದ್ದಿದೆ ಎಂದು ಬರೆದು ಪೋಸ್ಟ್ ಮಾಡಿದೆ.
ಈ ಮೊದಲು ಶಾರುಖ್ ಖಾನ್ 2018ರಲ್ಲಿ ಕೂಡಾ ಇದೇ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹರ್ಸುಲ್ ಗೋಯೆಂಕಾ ಅವರನ್ನು ಭೇಟಿ ಮಾಡಿದ್ದರು. ಆಗಿನ ವಿಡಿಯೋ ಹಾಗೂ ಈಗಿನ ವಿಡಿಯೋವನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಲಿ ಸಾಕಷ್ಟು ವೈರಲ್ ಆಗಿದ್ದು, ಹಲವು ನೆಟ್ಟಿಗರು ಶಾರುಖ್ ಖಾನ್ ಅವರ ಸರಳ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಓರ್ವ ನೆಟ್ಟಿಗ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೋರ್ವ ನೆಟ್ಟಿಗ ಶಾರುಖ್ ಖಾನ್ ಅವರನ್ನು ಇಷ್ಟ ಪಡಲು ಮತ್ತೊಂದು ಕಾರಣ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.
ಕಪ್ಪು ಬಣ್ಣದ ಹೂಡಿ ಹಾಗೂ ಕಪ್ಪು ಪ್ಯಾಂಟ್ ತೊಟ್ಟು ಬಂದಿದ್ದ ಶಾರುಖ್ ಖಾನ್, ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಲಿಲ್ಲ. ಪಂದ್ಯ ಮುಗಿಯುತ್ತಿದ್ದಂತೆಯೇ, ಮೈದಾನಕ್ಕೆ ಧಾವಿಸಿದ ಶಾರುಖ್, ಎಲ್ಲರ ಜತೆ ಪ್ರೀತಿಯಿಂದ ಮಾತನಾಡಿ ಗಮನ ಸೆಳೆದರು.
ಇನ್ನು ಆರ್‌ಸಿಬಿ ಎದುರು ಕೆಕೆಆರ್ ತಂಡವು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಶಾರುಖ್ ಖಾನ್, ಮೈದಾನಕ್ಕಿಳಿದು ವಿರಾಟ್ ಕೊಹ್ಲಿಯತ್ತ ಓಡಿಬಂದು ಬಿಗಿದಪ್ಪಿಕೊಂಡು, ಅವರ ಕೆನ್ನೆಯನ್ನು ಸವರಿದರು. ಇದಾದ ಬಳಿಕ ಪಠಾಣ್ ಸಿನಿಮಾದ ಹಾಡಿನ ಸ್ಟೆಪ್ಸ್ ಹೇಳಿಕೊಟ್ಟರು. ಈ ವಿಡಿಯೋ ಕೂಡಾ ವೈರಲ್ ಆಗಿದೆ.
