16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಆರ್‌ಸಿಬಿ ಪಾಲಿಗೆ ಮೊದಲ ಪಂದ್ಯಬಲಿಷ್ಠ ಮುಂಬೈ ಇಂಡಿಯನ್ಸ್ ಚಾಲೆಂಜ್ ಎದುರಿಸಲು ಸಜ್ಜಾದ ಆರ್‌ಸಿಬಿಆರ್‌ಸಿಬಿ ತಂಡವು ತವರಿನಲ್ಲಿ ಶುಭಾರಂಭದ ನಿರೀಕ್ಷೆ
ಬೆಂಗಳೂರು(ಏ.02): ಹಲವು ತಾರಾ ಆಟಗಾರರು, ಅಪಾರ ಪ್ರಮಾಣದ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆಯ ಹೊರತಾಗಿಯೂ ಈವರೆಗೆ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಚೊಚ್ಚಲ ಕಪ್ ಗೆಲ್ಲಲು ಪಣತೊಟ್ಟಿದ್ದು, ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯವನ್ನು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿರುವ ಆರ್‌ಸಿಬಿ ತನ್ನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡುವ ನಿರೀಕ್ಷೆಯಲ್ಲಿದೆ.
2020ರಿಂದ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿದ್ದು, 3 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದೇ ಲಯವನ್ನು ಮುಂದುವರಿಸಲು ಫಾಫ್ ಡು ಪ್ಲೆಸಿಸ್ ಪಡೆ ಕಾಯುತ್ತಿದ್ದರೆ, 5 ಬಾರಿ ಚಾಂಪಿಯನ್ ಮುಂಬೈ ಗೆಲುವಿನ ಮೂಲಕ ಟೂರ್ನಿಗೆ ಕಾಲಿಡಲು ಕಾಯುತ್ತಿದೆ.
ರಜತ್ ಪಾಟೀದಾರ್, ಜೋಶ್ ಹೇಜಲ್‌ವುಡ್ ಗೈರು: ಆರ್‌ಸಿಬಿ ಈ ಬಾರಿ ಉತ್ತಮ ತಂಡ ಕಟ್ಟಿದ್ದರೂ ಕೆಲ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರಜತ್ ಪಾಟೀದಾರ್, ವೇಗಿ ಜೋಶ್ ಹೇಜಲ್‌ವುಡ್ ಬಹುತೇಕ ಪಂದ್ಯಗಳಿಗೆ ಗೈರಾಗಲಿದ್ದಾರೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಆಡಲು ಕ್ರಿಕೆಟ್ ಆಸ್ಪ್ರೇಲಿಯಾ ಅನುಮತಿ ನೀಡಿದ್ದು, ಭಾನುವಾರ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಪ್ರಧಾನ ಕೋಚ್ ಸಂಜಯ್ ಬಾಂಗರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು. ಹೇಜಲ್‌ವುಡ್ ಸ್ಥಾನವನ್ನು ರೀಸ್ ಟಾಪ್ಲಿ ತುಂಬಲಿದ್ದು, ಪಾಟೀದಾರ್ ಬದಲು ಆರ್‌ಸಿಬಿ ಯಾರನ್ನು ಆಡಿಸಲಿದೆ ಎನ್ನುವ ಗುಟ್ಟನ್ನು ಬಾಂಗರ್ ಬಿಟ್ಟುಕೊಡಲಿಲ್ಲ. ಕರ್ನಾಟಕದ ಆಲ್ರೌಂಡರ್ ಮನೋಜ್ ಭಾಂಡ್ಗೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್‌ನ ಫಿನ್ ಆ್ಯಲೆನ್ ಹಾಗೂ ಮೈಕಲ್ ಬ್ರೇಸ್‌ವೆಲ್ ಎಷ್ಟು ಪರಿಣಾಮಕಾರಿಯಾಗಲಿದ್ದಾರೆ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ.
ರೋಹಿತ್ ಫಿಟ್: ಮತ್ತೊಂದೆಡೆ ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಕಳೆದ ಬಾರಿಯ ವೈಫಲ್ಯದಿಂದ ಹೊರಬರಲು ಕಾಯುತ್ತಿದೆ. 2022ರಲ್ಲಿ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದಿದ್ದು, ಈ ಬಾರಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ನಾಯಕ ರೋಹಿತ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪಂದ್ಯದಲ್ಲಿ ಆಡಲಿದ್ದಾರೆ. ತಂಡಕ್ಕೆ ಸೂರ್ಯಕುಮಾರ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟನ್ ಸ್ಟಬ್ಸ್ ಹಾಗೂ ಟಿಮ್ ಡೇವಿಡ್ರಂತಹ ಸ್ಫೋಟಕ ಬ್ಯಾಟರ್ಗಳ ಬಲವಿದೆ. ಇತ್ತೀಚೆಗಿನ ದಿನಗಳಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನಸೆಳೆದ ಗ್ರೀನ್ ತಂಡದ ಟ್ರಂಪ್ ಕಾರ್ಡ್ ಆಗಬಹುದು. ಬುಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ಪಡೆ ಮುನ್ನಡೆಸಲಿರುವ ಜೋಫ್ರಾ ಆರ್ಚರ್ ಮೇಲೆ ಭಾರೀ ಒತ್ತಡವಿದೆ.
ಈ ಸಲ ಕಪ್ ನಹಿ, ಪಂದ್ಯಕ್ಕೂ ಮೊದಲೇ ಡುಪ್ಲಿಸಿಸ್ ಹೇಳಿಕೆಗೆ ಅಭಿಮಾನಿಗಳು ಶಾಕ್, ನಕ್ಕು ನೀರಾದ ಕೊಹ್ಲಿ!
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 30 ಪಂದ್ಯಗಳ ಪೈಕಿ 17 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗೆಲುವು ದಾಖಲಿಸಿದ್ದರೆ, 13 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ಕೇಕೆ ಹಾಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಶಾಬಾಜ್ ಅಹಮ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್, ಮಿಚೆಲ್ ಬ್ರೇಸ್‌ವೆಲ್, ಮನೋಜ್ ಭಾಂಡ್ಗೆ, ಹರ್ಷಲ್ ಪಟೇಲ್, ರೀಸ್ ಟಾಪ್ಲಿ, ಮೊಹಮ್ಮದ್ ಸಿರಾಜ್.
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ರಮಣ್ದೀಪ್, ಜೋಪ್ರಾ ಆರ್ಚರ್, ಶೊಕೀನ್, ಜೇಸನ್ ಬೆಹ್ರನ್ಡ್ರಾಫ್, ಪೀಯೂಷ್ ಚಾವ್ಲಾ.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಇಲ್ಲಿ ಚೇಸಿಂಗ್ ಮಾಡುವ ತಂಡ ಹೆಚ್ಚಿನ ಲಾಭ ಗಳಿಸಿದ ಉದಾಹರಣೆಗಳಿದ್ದು, ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಭಿಮಾನಿಗಳು ಉತ್ಸುಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 4 ವರ್ಷಗಳ ಬಳಿಕ ಮತ್ತೆ ಐಪಿಎಲ್ ಪಂದ್ಯ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದೆ. ಈ ಬಾರಿ ಆರ್‌ಸಿಬಿ ಆನ್ಲೈನ್ನಲ್ಲಿ ದುಬಾರಿ ಬೆಲೆಯ ಟಿಕೆಟ್ಗಳನ್ನು ಮಾರಾಟಕ್ಕಿಟ್ಟಿದ್ದರೂ ಕೆಲ ದಿನಗಳಲ್ಲೇ ಸೋಲ್ಡ್ಔಟ್ ಆಗಿರುವುದು ಅಭಿಮಾನಿಗಳ ಉತ್ಸಾಹಕ್ಕೆ ನಿದರ್ಶನ. ಇತ್ತೀಚೆಗಷ್ಟೇ ಅಭ್ಯಾಸ ಶಿಬಿರಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.
