* ಜೈಪುರದಲ್ಲಿಂದು ರಾಜಸ್ಥಾನ ರಾಯಲ್ಸ್‌-ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ* ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ ಪಂದ್ಯ* ಗೆದ್ದ ತಂಡಕ್ಕೆ ಪ್ಲೇ ಆಫ್‌ ಪ್ರವೇಶ ಕನಸಿಗೆ ಮತ್ತಷ್ಟು ಬಲ

ಜೈಪುರ(ಮೇ.14): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 60ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವ ವಹಿಸಿದೆ.

ಫಾಫ್ ಡು ಪ್ಲೆಸಿಸ್‌ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 6 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7 ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಆರ್‍‌ಸಿಬಿ ತಂಡದ ಪ್ಲೇ ಆಫ್ ಪ್ರವೇಶಿಸುವ ಕನಸಿಗೆ ಮತ್ತಷ್ಟು ಜೀವ ಬರಲಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಸಾಕಷ್ಟು ಅನಿವಾರ್ಯ ಎನಿಸಿದೆ. ರಾಜಸ್ಥಾನ ರಾಯಲ್ಸ್‌ ತಂಡವು 12 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 6 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ರಾಜಸ್ಥಾನದ ಗೆಲುವು ಸಂಜು ಪಡೆಯ ಪ್ಲೇ ಆಫ್‌ ಕನಸಿಗೆ ಮತ್ತಷ್ಟು ಬಲ ಬರಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಂದ್ಯವೂ ಸೇರಿದಂತೆ ಮೂರು ಪಂದ್ಯಗಳನ್ನಾಡಲಿದೆ. ಮೂರು ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆದ್ದರಷ್ಟೇ ಆರ್‍‌ಸಿಬಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಲಿದೆ. ಆರ್‍‌ಸಿಬಿ ತಂಡವು ಇನ್ನುಳಿದ 3 ಪಂದ್ಯಗಳನ್ನು ಜಯಿಸಿದರೆ 16 ಅಂಕಗಳನ್ನು ಕಲೆಹಾಕಲಿದ್ದು, ಮೂರು ಅಥವಾ ನಾಲ್ಕನೇ ತಂಡವಾಗಿ ಆರ್‍‌ಸಿಬಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಆರ್‍‌ಸಿಬಿ ತಂಡದ ನೆಟ್ ರನ್‌ರೇಟ್‌ -0.345 ಇದ್ದು, ದೊಡ್ಡ ಅಂತರದ ಗೆಲುವಷ್ಟೇ ಆರ್‍‌ಸಿಬಿಯನ್ನು ಅಂತಿಮ ನಾಲ್ಕರ ಘಟ್ಟಕ್ಕೆ ಕೊಂಡ್ಯೊಯ್ಯಲು ಸಾಧ್ಯ.

ಪ್ಲೇ ಆಫ್‌ ಪ್ರವೇಶಿಲು ಆರ್‍‌ಸಿಬಿ ಜತೆಗೆ ಮುಂಬೈ ಇಂಡಿಯನ್ಸ್, ಲಖನೌ ಸೂಪರ್ ಜೈಂಟ್ಸ್‌, ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕೂಡಾ ಕಾದಾಟ ನಡೆಸಲಿವೆ. ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಕೆಕೆಆರ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜತೆಗೆ ಪ್ಲೇ ಆಫ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದು, ಕೆಕೆಆರ್ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ.

ಪ್ಲೇ ಆಫ್‌ ರೇಸಿಂದ ಹೊರಬಿದ್ದ ಡೆಲ್ಲಿ; ಬ್ಯಾಟರ್‍‌ಗಳ ಮೇಲೆ ನಾಯಕ ವಾರ್ನರ್‍‌ ಸಿಡಿಮಿಡಿ

ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ.14ರಂದು ರಾಜಸ್ಥಾನ ರಾಯಲ್ಸ್ ಎದುರು ಹಾಗೂ ಮೇ 18ರಂದು ಹೈದರಾಬಾದ್‌ನಲ್ಲಿ ಆರೆಂಜ್ ಆರ್ಮಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಹಾಗೂ ಮೇ 21ರಂದು ತವರಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮೂರು ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಆರ್‍‌ಸಿಬಿ ತಂಡವು ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್‌ಗೆ ಲಗ್ಗೆಯಿಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.