ಪಂಜಾಬ್ ಕಿಂಗ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತಕಾರಿ ಸೋಲುಸೋಲಿನ ಬೆನ್ನಲ್ಲೇ ತಮ್ಮ ಬ್ಯಾಟರ್‍‌ಗಳ ಮೇಲೆ ಕಿಡಿಕಾರಿದ ವಾರ್ನರ್ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ(ಮೇ.14): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಎದುರು 31 ರನ್‌ಗಳ ಆಘಾತಕಾರಿ ಸೋಲು ಕಾಣುವ ಮೂಲಕ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ತಂಡವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ನಾಯಕ ಡೇವಿಡ್ ವಾರ್ನರ್, ತಮ್ಮ ತಂಡದ ಬ್ಯಾಟರ್‍‌ಗಳ ದಯನೀಯ ಪ್ರದರ್ಶನದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಪಂಜಾಬ್ ನೀಡಿದ್ದ 168 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ಹಾಗೂ ಫಿಲ್ ಸಾಲ್ಟ್‌ ಪವರ್‍‌ ಪ್ಲೇನಲ್ಲೇ ಮೊದಲ ವಿಕೆಟ್ ನಷ್ಟವಿಲ್ಲದೇ 69 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಪವರ್‍‌ ಪ್ಲೇ ಬಳಿಕ ದಿಢೀರ್ ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10.1 ಓವರ್‍‌ ವೇಳೆಗೆ ಕೇವಲ 88 ರನ್‌ಗಳಿಗೆ 6 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‍‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಯಿತು. 

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್, " ನಾವು ಆರಂಭ ಪಡೆದ ರೀತಿಗೂ ಇದಾದ ಬಳಿಕ ಕೇವಲ 30 ರನ್‌ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡರೆ, ನಾವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ" ಎಂದು ಬ್ಯಾಟರ್‍‌ಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. 

ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ, " ನಾವು ಉತ್ತಮ ಆರಂಭ ಪಡೆದ ಹೊರತಾಗಿಯೂ ನಮ್ಮ ತಂಡದ ಬ್ಯಾಟರ್‍‌ಗಳು ಮತ್ತೊಮ್ಮೆ ನಿರಾಸೆ ಮೂಡಿಸಿದರು" ಎಂದು ವಾರ್ನರ್ ಹೇಳಿದ್ದಾರೆ. ಲೀಗ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇನ್ನೆರಡು ಪಂದ್ಯಗಳನ್ನು ಕೇವಲ ಪ್ರತಿಷ್ಠೆಗಾಗಿ ಸೆಣಸಾಡಲಿದೆ.

ನನ್ನ ಪ್ರಕಾರ ನಾವು ಒಳ್ಳೆಯ ಸಂಯೋಜನೆಯೊಂದಿಗೆ ಕಣಕ್ಕಿಳಿದಿದ್ದೆವು. ಆದರೆ ನಾವು ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ 4-5 ವಿಕೆಟ್ ಕಳೆದುಕೊಂಡೆವು. ಆ ಹಂತದಲ್ಲಿ ನಾವು ಹೀಗೆ ಆಡಬಾರದಿತ್ತು ಎಂದು ವಾರ್ನರ್ ಹೇಳಿದ್ದಾರೆ.

IPL 2023: ಕೋಲ್ಕ​ತಾ ವಿರುದ್ಧ ಜಯಿ​ಸಿ ಪ್ಲೇ-ಆಫ್‌​ಗೇ​ರು​ತ್ತಾ ಚೆನ್ನೈ?

ಇನ್ನು ಕ್ಯಾಚ್ ಕೈಚೆಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್‍‌ ಪ್ರಭ್‌ಸಿಮ್ರನ್ ಸಿಂಗ್ 68 ರನ್ ಗಳಿಸಿದ್ದಾಗ ರಿಲೇ ರೂಸ್ಸೌ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ಪ್ರಭ್‌ಸಿಮ್ರನ್ ಸಿಂಗ್, ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಸಂಭ್ರಮಿಸಿದರು.

ಮೊದಲು ಬ್ಯಾಟ್‌ ಮಾಡಿದ ಪ್ರಭ್‌ಸಿಮ್ರನ್ ಸಿಂಗ್(103) ಏಕಾಂಗಿ ಹೋರಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್‍‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು. ಸ್ಯಾಮ್ ಕರ್‍ರನ್ ಹಾಗೂ ಸಿಕಂದರ್ ರಾಜಾ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‍‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಇನ್ನು ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಪೋಟಕ ಆರಂಭವನ್ನು ಪಡೆಯಿತು. ವಾರ್ನರ್ ಕೇವಲ 27 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಫಿಲ್ ಸಾಲ್ಟ್ 21 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್(3), ರಿಲೇ ರೂಸ್ಸೌ(5), ಅಕ್ಷರ್ ಪಟೇಲ್(1) ಮನೀಶ್ ಪಾಂಡೆ(0) ನಾಟಕೀಯ ರೀತಿಯಲ್ಲಿ ವಿಕೆಟ್ ಕಳೆದುಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಕೊನೆಯಲ್ಲಿ ಪ್ರವೀಣ್ ದುಬೆ(16), ಅಮನ್ ಹಕೀಂ ಖಾನ್(16) ಹಾಗೂ ಕುಲ್ದೀಪ್ ಯಾದವ್(10) ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.