IPL 2023 ಕೊಹ್ಲಿ ಗಂಭೀರ್ ನಡುವಿನ ಕಿತ್ತಾಟಕ್ಕೆ ಕಾರಣ ಬಹಿರಂಗ? ಪಂದ್ಯದಲ್ಲಿ ನಡೆದಿತ್ತು ಜಟಾಪಟಿ!
ಲಖನೌ vs ಆರ್‌ಸಿಬಿ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಜಟಾಪಟಿ ವೈರಲ್ ಆಗಿದೆ. ಇವರ ಜಟಾಪಟಿ ಮುಗಿದರೂ ಸಾಮಾಜಿಕ ಜಾಲತಾಣದಲ್ಲಿ ಇದೇ ಕಿತ್ತಾಟ ಮತ್ತೊಂದು ಹಂತ ತಲುಪಿದೆ. ಕೊಹ್ಲಿ ಮೇಲೆ ಗಂಭೀರ್ ಈ ಪರಿ ಸಿಟ್ಟಾಗಲು ಕಾರಣವೇನು?
ಲಖನೌ(ಮೇ.02): ಕಳೆದ ಕೆಲ ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಅತೀರೇಕದ ಸ್ಲೆಡ್ಜಿಂಗ್, ನಿಯಮ ಮೀರಿದ ವರ್ತನೆಗಳು ಕಡಿಮೆಯಾಗಿತ್ತು. ಆದರೆ ಈ ಬಾರಿಯ ಟೂರ್ನಿ ಹಾಗಿಲ್ಲ. ಎಲ್ಲವೂ ನೆಕ್ಸ್ಟ್ ಲೆವಲ್ ತಲುಪುತ್ತಿದೆ. 2013ರ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದಾರೆ. ಲಖನೌ ತಂಡಕ್ಕೆ 127 ರನ್ ಟಾರ್ಗೆಟ್ ನೀಡಿದ ಆರ್‌ಸಿಬಿ ಮಾರಕ ದಾಳಿ ಮೂಲಕ ಎದುರಾಳಿ ಪಡೆಯನ್ನು ಕಟ್ಟಿಹಾಕಿತ್ತು. ಪ್ರತಿ ಎಸೆತ, ಪ್ರತಿ ವಿಕೆಟ್ ಸಂಭ್ರಮ ಜೋರಾಗಿತ್ತು. ವಿರಾಟ್ ಕೊಹ್ಲಿ, ಲಖನೌ ಅಭಿಮಾನಿಗಳ ತಿರುಗಿ ಕೈ ಸನ್ನೈ ಮೂಲಕ ಬಾಯಿ ಮುಚ್ಚಲು ಸೂಚಿಸಿದರು. ಇದೇ ರೀತಿ ಗಂಭೀರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಮಾಡಿದ್ದರು. ಎಟು ಏದಿರೇಟುಗಳ ಈ ಪಂದ್ಯದ ಬಳಿಕ ಕೊಹ್ಲಿ ಹಾಗೂ ಗಂಭೀರ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದಾರೆ. ಇಡೀ ಪಂದ್ಯದಲ್ಲಿ ಕೊಹ್ಲಿಯ ಸಂಭ್ರಮಾಚರಣೆ, ಲಖನೌ ಬ್ಯಾಟ್ಸ್‌ಮನ್ ನವೀನ್ ಉಲ್ ಹಕ್ ಉರಿಸಿದ ರೀತಿಗೆ ಗಂಭೀರ್ ಕೆಂಡಾಮಂಡಲವಾಗಿದ್ದರು. ಇದರ ಜೊತೆಗೆ ಸೋಲಿನ ನೋವು ಗಂಭೀರ್ ತಲೆಗೆ ಹತ್ತಿಕೊಂಡಿತ್ತು. ಇದರ ಪರಿಣಾಮ ಕಿತ್ತಾಟ ನಡೆದಿದೆ.
ಒಂದೆಡ ಆರ್‌ಸಿಬಿ ತಂಡದ ಮಾರಾಕ ದಾಳಿ, ಮತ್ತೊಂದೆಡೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಸೇರಿದಂತೆ ಆರ್‌ಸಿಬಿ ಸದಸ್ಯರ ಅತಿರೇಕದ ಸಂಭ್ರಮ ಲಖನೌ ತಂಡವನ್ನು ಕಂಗೆಡಿಸಿತ್ತು. ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕು ಅನ್ನೋ ಛಲದಲ್ಲಿ ಕಣಕ್ಕಿಳಿದಿದ್ದ ಲಖನೌ ಹೀನಾಯ ಪ್ರದರ್ಶನ ನೀಡುತ್ತಿದ್ದಂತೆ ಲಖನೌ ಆಟಗಾರರು ಸ್ಲೆಡ್ಜಿಂಗ್ ಶುರುಮಾಡಿದ್ದಾರೆ. ಅಮಿತ್ ಮಿಶ್ರಾ ಹಾಗೂ ನವೀನ್ ಉಲ್ ಹಕ್ ಅಂತಿಮ ಹಂತದಲ್ಲಿನ ಜೊತೆಯಾಟ ಆರ್‌ಸಿಬಿ ತಂಡದಲ್ಲಿ ಆತಂಕ ಸೃಷ್ಟಿಮಾಡಿತ್ತು. ಈ ವೇಳೆ ಮೊಹಮ್ಮದ್ ಸಿರಾಜ್ ಸ್ಲೆಡ್ಜಿಂಗ್ ಶುರು ಮಾಡಿದ್ದರು. ಕ್ರಿಕೆಟ್ ಮಿತಿಯೊಳಗಿದ್ದ ಸ್ಲೆಡ್ಜಿಂಗ್, ನವೀನ್ ಉಲ್ ಹಕ್ ತಾಳ್ಮೆ ಕಸಿದುಕೊಂಡಿತು.
IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!
ಇತ್ತ ವಿರಾಟ್ ಕೊಹ್ಲಿ ಸಂಭ್ರಮ ನವೀನ್ ಉಲ್ ಹಕ್ ಉರಿಸಿತ್ತು. ಹೀಗಾಗಿ ಕೊಹ್ಲಿಯನ್ನು ಗುರಾಯಿಸಲು ಆರಂಭಿಸಿದ್ದಾರೆ. ಪಾಯಿಂಟ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದ ಕೊಹ್ಲಿ ಸಿರಾಜ್ ಹಾಗೂ ಆರ್‌ಸಿಬಿ ಆಟಗಾರರನ್ನು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ. ಹೀಗಾಗಿ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಜೊತೆ ಜಗಳಕ್ಕೆ ನಿಂತಿದ್ದಾರೆ. ಕ್ರಿಸ್‌ನಲ್ಲಿದ್ದ ನವೀನ್ ಉಲ್ ಹಕ್, ಕೊಹ್ಲಿ ವಿರುದ್ದ ಏನೋ ಹೇಳಿದ್ದಾರೆ. ಇದು ಕೊಹ್ಲಿಯನ್ನು ಕೆರಳಿಸಿದೆ. ಜಗಳಕ್ಕೆ ನಿಂತರೆ ವಿರಾಟ್ ಕೊಹ್ಲಿ ಸುಮ್ಮನಾಗಿರುವ ಉದಾಹರಣೆ ಇಲ್ಲ. ನೇರಾನೇರ ತಿರುಗೇಟು ನೀಡಿದ್ದಾರೆ.
ಇತ್ತ ಅಮಿತ್ ಮಿಶ್ರಾ ಮಧ್ಯಪ್ರವೇಶಿಸಿದರು. ತಕ್ಷಣವೇ ಅಂಪೈರ್ ಮಧ್ಯಪ್ರವೇಶಿಸಿ ಸಮಾಧಾನಿಸುವ ಪ್ರಯತ್ನ ಮಾಡಿದರು. ಆದರೆ ಕೊಹ್ಲಿ ಆಕ್ರೋಶ ಕಡಿಮೆಯಾಗಲಿಲ್ಲ. ಇದರ ನಡುವೆ ನೀನು ನನ್ನ ಶೋನಲ್ಲಿರುವ ಧೂಳೀಗೂ ಸಮ ಅಲ್ಲ ಎಂದು ಕೊಹ್ಲಿ ನೇರವಾಗಿ ನವೀನ್ ಉಲ್ ಹಕ್‌ಗೆ ಹೇಳಿದ್ದಾರೆ. ಇಲ್ಲಿಂದ ಇವರಿಬ್ಬರ ನಡುವಿನ ಸ್ಲೆಡ್ಜಿಂಗ್ ಮಿತಿಯನ್ನು ಮೀರಿತು. ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಸಂಭ್ರಮ ಆಚರಿಸಿದ್ದಾರೆ. ಇದು ಲಖನೌ ಆಟಗಾರರನ್ನು ಮತ್ತಷ್ಟು ಉರಿಸಿದೆ.
IPL 2023 ಆರ್‌ಸಿಬಿ ದಾಳಿಗೆ ಲಖನೌ ಉಡೀಸ್, ಗೆಲುವಿನ ಜೊತೆಗೆ ಗಂಭೀರ್‌ಗೆ ಠಕ್ಕರ್ ನೀಡಿದ ವಿರಾಟ್!
ಶೇಕ್‌ಹ್ಯಾಂಡ್ ವೇಳೆ ಗಂಭೀರ್ ಗಂಭೀರವಾಗಿ ಕೊಹ್ಲಿಗೆ ಹಸ್ತಲಾಘವ ಮಾಡಿದ್ದಾರೆ. ಇತ್ತ ನವೀನ್ ಉಲ್ ಹಕ್ ಶೇಕ್ ಮಾಡುವಾಗಲೇ ಕಿರಿಕ್ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಕೈಲ್ ಮೇಯರ್ಸ್ , ವಿರಾಟ್ ಕೊಹ್ಲಿ ಬಳಿ ಬಂದು ಬ್ಯಾಟಿಂಗ್ ಕುರಿತು ಹೇಳಿದ್ದಾರೆ. ಆಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ. ಈ ವೇಳೆ ಗೌತಮ್ ಗಂಭೀರ್ ಆಗಮಿಸಿ ಕೈಲ್ ಮೇಯರ್ಸ್ ಹಿಡಿದು ಬೇರೆಡೆಗೆ ಕರೆದುಕೊಂಡು ಹೋಗಿದ್ದಾರೆ.ಕೊಹ್ಲಿ ಜೊತೆ ಮಾತನಾಡುತ್ತಿರುವಾಗ ಕೈಲ್ ಮೇಯರ್ಸ್ ಹಿಡಿದು ಬೇರೆಡೆದ ಕರೆದೊಯ್ದ ನಡೆ ಕೊಹ್ಲಿಯನ್ನು ಕೆರಳಿಸಿದೆ. ಇದಕ್ಕೆ ಗಂಭೀರ್ ವಿರುದ್ಧ ಕೊಹ್ಲಿ ಕಮೆಂಟ್ ಪಾಸ್ ಮಾಡಿದ್ದಾರೆ. ಮೊದಲೇ ಪಿತ್ತ ನೆತ್ತಿಗೇರಿದ್ದ ಗಂಭೀರ್, ಕೊಹ್ಲಿ ವಿರುದ್ಧ ಜಗಳಕ್ಕೆ ನಿಂತಿದ್ದಾರೆ. ಇದರ ನಡುವೆ ಕೆಎಲ್ ರಾಹುಲ್ , ಅಕ್ಸರ್ ಪಟೇಲ್ ಸೇರಿದಂತೆ ಹಲವು ಗಂಭೀರ್ ಸಮಾಧಾನಿಸುವ ಕೆಲಸ ಮಾಡಿದರೂ ಗಂಭೀರ್ ಸುಮ್ಮನಾಗಿಲ್ಲ.