IPL 2023 ಆರ್‌ಸಿಬಿ ದಾಳಿಗೆ ಲಖನೌ ಉಡೀಸ್, ಗೆಲುವಿನ ಜೊತೆಗೆ ಗಂಭೀರ್‌ಗೆ ಠಕ್ಕರ್ ನೀಡಿದ ವಿರಾಟ್!
ಲಖನೌ ಸ್ಲೋ ಪಿಚ್‌ನಲ್ಲಿ ಆರ್‌ಸಿಬಿ ನೀಡಿದ 127 ರನ್, ಲಖನೌ ತಂಡಕ್ಕೆ ಮೌಂಟ್ ಎವರೆಸ್ಟ್‌ಗಿಂತ ಎತ್ತರವಾಯಿತು. ಆರ್‌ಸಿಬಿ ದಾಳಿಗೆ ವಿಕೆಟ್ ಪಟಪಟನೆ ಉದುರಿ ಬಿತ್ತು. ಲಖೌನ್ 108 ರನ್ ಸಿಡಿಸಿ ಸೋಲಿಗೆ ಶರಣಾಯಿತು. ಆದರೆ ಪ್ರತಿ ವಿಕೆಟ್ ಪಡೆದಾಗಲು ವಿರಾಟ್ ಕೊಹ್ಲಿ, ಗಂಭೀರ್ ಸೆಲೆಬ್ರೇಷನ್‌ಗೆ ತಿರುಗೇಟು ನೀಡಿದ್ದಾರೆ.
ಲಖನೌ(ಮೇ.01): ಆರ್‌ಸಿಬಿ ಸಿಡಿಲಬ್ಬರದ ಪ್ರದರ್ಶನಕ್ಕೆ ಲಖನೌ ಮಂಡಿಯೂರಿದೆ. ಟಾರ್ಗೆಟ್ 127 ರನ್. ಆದರೆ ಲಖನೌ ಸ್ಲೋ ಪಿಚ್‌ನಲ್ಲಿ ಈ ಮೊತ್ತ ಬೃಹತ್ ಮೊತ್ತವಾಗಿ ಲಖನೌ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಇತ್ತ ಮಾರಕ ದಾಳಿ ಸಂಘಟಿಸಿದ ಆರ್‌ಸಿಬಿ ವಿಕೆಟ್ ಮೇಲೆ ವಿಕೆಟ್ ಪಡೆದು ಸಂಭ್ರಮಿಸಿತು. ಪ್ರತಿ ವಿಕೆಟ್ ಪಡೆದಾಗಲು ವಿರಾಟ್ ಕೊಹ್ಲಿ ಅಭಿಮಾನಿಗಳ ತಿರುಗಿ ಈ ಹಿಂದೆ ಗೌತಮ್ ಗಂಭೀರ್ ಮಾಡಿದ್ದ ಸೆಲೆಬ್ರೇಷನ್‌ಗೆ ತಿರುಗೇಟು ನೀಡಿದ್ದಾರೆ. ಕೊಹ್ಲಿಯ ಸಂಭ್ರಮ, ಆರ್‌ಸಿಬಿ ಜೋಶ್, ಲಖನೌ ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. ಪರಿಣಾಮ ಲಖನೌ 19.5 ಓವರ್‌ಗಳಲ್ಲಿ 108ರನ್‌ಗೆ ಆಲೌಟ್ ಆಯಿತು. ಆರ್‌ಸಿಬಿ 18 ರನ್ ಗೆಲುವು ದಾಖಲಿಸಿತು.
127 ರನ್ ಟಾರ್ಗೆಟ್ ಪಡೆದ ಲಖನೌ ಸೂಪರ್ ಜೈಂಟ್ಸ್ ಸುಲಭವಾಗಿ ಚೇಸ್ ಮಾಡುವ ವಿಶ್ವಾಸದಲ್ಲಿತ್ತು. ಆದರೆ ಲಖನೌ ತಂಡ ಖಾತೆ ತೆರೆಯುವ ಮುನ್ನವೇ ವಿಕೆಟ್ ಎಗರಿಬಿದ್ದಿತ್ತು. ಆರಂಭದಲ್ಲೇ ಕೈಲ್ ಮೇಯರ್ಸ್ ಡಕೌಟ್ ಆದರು. ಮೊದಲ ಓವರ್‌ನಿಂದಲೇ ಲಖನೌ ವಿಕೆಟ್ ಪತನ ಆರಂಭಗೊಂಡಿತು. ಕ್ರುನಾಲ್ ಪಾಂಡ್ಯ 14 ರನ್ ಸಿಡಿಸಿ ನಿರ್ಗಮಿಸಿದರು. ಆಯುಷ್ ಬದೋನಿ 4 ರನ್ ಸಿಡಿಸಿ ಔಟಾದರು.
ದೀಪಕ್ ಹೂಡ ಕೇವಲ 1 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ 13 ರನ್ ಕಾಣಿಕೆ ನೀಡಿದರು. ನಿಕೋಲಸ್ ಪೂರನ್ ಕೇವಲ 9 ರನ್ ಸಿಡಿಸಿ ಔಟಾದರು. ಆದರೆ ಕನ್ನಡಿಗ ಕೆ ಗೌತಮ್ ಹೋರಾಟ ನೀಡಿದರು. 23 ರನ್ ಸಿಡಿಸುತ್ತಿದ್ದಂತೆ ಗೌತಮ್ ರನೌಟ್‌ಗೆ ಬಲಿಯಾದರು. 66 ರನ್‌ಗೆ ಲಖನೌ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಅಮಿತ್ ಮಿಶ್ರಾ ಹಾಗೂ ನವೀನ್ ಉಲ್ ಹಕ್ ಜೊತೆಯಾಟ ಆರ್‌ಸಿಬಿ ತಂಡದ ಚಿಂತೆ ಹೆಚ್ಚಿಸಿತು. ನವೀನ್ ಉಲ್ ಹಕ್ 13 ರನ್ ಸಿಡಿಸಿ ಔಟಾದರು. ಫೀಲ್ಡಿಂಗ್ ವೇಳೆ ಇಂಜುರಿಗೊಂಡು ಹೊರಗುಳಿದಿದ್ದ ನಾಯಕ ಕೆಎಲ್ ರಾಹುಲ್ ನೋವಿನ ನಡುವೆಯೂ ಕಣಕ್ಕಿಳಿದರು. ಲಖನೌ ಸೂಪರ್ ಜೈಂಟ್ಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 23 ರನ್ ಅವಶ್ಯಕತೆ ಇತ್ತು. ಕೆಎಲ್ ರಾಹುಲ್ ಇಂಜುರಿ ಕಾರಣ ಸರಿಯಾಗಿ ಬ್ಯಾಟ್ ಬೀಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಆದರೆ ಅಮಿತ್ ಮಿಶ್ರಾ ಮೂರನೇ ಎಸೆತದಲ್ಲಿ ಬೌಂಡರಿ ಸಿಡಿಸಿ ಆರ್‌ಸಿಬಿ ಆತಂಕ ಹೆಚ್ಚಿಸಿದರು. ಆದರೆ 5ನೇ ಎಸೆತದಲ್ಲಿ 19 ರನ್ ಸಿಡಿಸಿದ ಮಿಶ್ರಾ ವಿಕೆಟ್ ಪತನಗೊಂಡಿತು. ಈ ಮೂಲಕ ಲಖನೌ 19.5 ಓವರ್‌ಗಳಲ್ಲಿ 108ರನ್‌ಗೆ ಆಲೌಟ್ ಆಯಿತು. ಆರ್‌ಸಿಬಿ 18 ರನ್ ಗೆಲುವು ಕಂಡಿತು.
ಆರ್‌ಸಿಬಿ ಇನ್ನಿಂಗ್ಸ್: ಸ್ಲೋ ಪಿಚ್‌ನಲ್ಲಿ ಆರ್‌ಸಿಬಿ ದಿಟ್ಟ ಹೋರಾಟ ನೀಡಿ 126 ರನ್ ಸಿಡಿಸಿತು. ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 62 ರನ್ ಜೊತೆಯಾ ನೀಡಿದ್ದರು. ಕೊಹ್ಲಿ 31 ರನ್ ಕಾಣಿಕೆ ನೀಡಿದರೆ, ಫಾಫ್ ಡುಪ್ಲೆಸಿಸ್ 44 ರನ್ ಸಿಡಿಸಿದರು. ಇತರರಿಂದ ನಿರೀಕ್ಷಿತ ರನ್ ಹರಿದು ಬರಲಿಲ್ಲ. ಆದರೆ ಕೊಹ್ಲಿ ಹಾಗೂ ಡುಪ್ಲೆಸಿಸ್ ಹೋರಾಟದಿಂದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 126 ರನ್ ಸಿಡಿಸಿತು.