ಮುಂಬೈ ವಿರುದ್ಧ ಭಾರಿ ಅಂತರದ ಸೋಲು ಕಂಡಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಜೊತೆಗೆ ನೆಟ್ ರನ್‌ರೇಟ್ ಕೂಡ ಕುಸಿದಿದೆ. ಹಾಗಂತ ಆರ್‌ಸಿಬಿ ಅಭಿಮಾನಿಗಳು ನಿರಾಸೆ ಅನುಭವಿಸಬೇಕಿಲ್ಲ. ಕಾರಣ ಆರ್‌ಸಿಬಿಗೆ ತಂಡಕ್ಕೆ ಇನ್ನೂ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಅದು ಹೇಗೆ? ಇಲ್ಲಿದೆ.

ಬೆಂಗಳೂರು(ಮೇ.12): ಐಪಿಎಲ್ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯ ತೀವ್ರ ಮಹತ್ವ ಪಡೆದುಕೊಳ್ಳುತ್ತಿದೆ. ಗೆಲ್ಲಲೇಬೇಕಾದ ಒತ್ತಡ ಹೆಚ್ಚಾಗುತ್ತಿದೆ. ಪ್ಲೇ ಆಫ್ ರೇಸ್ ಕಠಿಣಗೊಳ್ಳುತ್ತಿದೆ. ಈ ಬಾರಿ ಆರ್‌ಸಿಬಿ ಪ್ರದರ್ಶನದಲ್ಲಿ ಭಾರಿ ವ್ಯತ್ಯಾಸಗಳಿಲ್ಲ. ಈ ಹಿಂದಿನ ಆವೃತ್ತಿಗಳಂತೆ ಸೋಲು, ಗೆಲುವಿನಿಂದ ಕೂಡಿತ್ತು. ಹೀಗಾಗಿ ಪ್ಲೇ ಆಫ್ ಎಂಟ್ರಿಗೆ ತಲೆಕೆಡಿಸಿಕೊಳ್ಳಬೇಕಾಗಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡ ಆರ್‌ಸಿಬಿ ನೆಟ್ ರೇಟ್ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಪ್ಲೇ ಆಫ್ ರೇಸ್ ಕಠಿಣಗೊಂಡಿದೆ. ಆದರೆ ಪ್ಲೇ ಆಫ್ ಅವಕಾಶ ಸಂಪೂರ್ಣ ಕೈತಪ್ಪಿಲ್ಲ. ಇನ್ನುಳಿದ 3 ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೆ ಅವಕಾಶದ ಬಾಗಿಲು ತೆರೆಯಲಿದೆ. 

ಆರ್‌ಸಿಬಿ ಈಗಾಗಲೇ 11 ಪಂದ್ಯಗಳನ್ನು ಆಡಿದೆ. ಇದರಲ್ಲಿ 5 ಗೆಲುವು 6 ಸೋಲು ಅನುಭವಿಸಿದೆ. ಈ ಮೂಲಕ 10 ಅಂಕ ಸಂಪಾದಿಸಿದೆ. ಮುಂಬೈ ವಿರುದ್ದ ಹೀನಾಯ ಸೋಲಿನ ಬಳಿಕ ಆರ್‌ಸಿಬಿ ನೆಟ್‌ರೇನ್‌ರೇಟ್ ಮೈನಸ್ 0.345. ಮೇ 14 ರಂದು ರಾಜಸ್ಥಾನ ರಾಯಲ್ಸ್ ಹಾಗೂ ಮೇ.18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಹೋರಾಟ ನಡೆಸಲಿದೆ. ಈ ಎರಡು ಪಂದ್ಯಗಳು ತವರಿನಾಚೆ ನಡೆಯಲಿದೆ. ಇನ್ನು ಮೇ.21ರ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ತವರಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಹೋರಾಟ ನಡೆಸಲಿದೆ. 

IPL 2023: ರಾಜಸ್ಥಾನ ರಾಯಲ್ಸ್‌ ತಂಡ ಎದುರಿಸುವ ಮುನ್ನವೇ ಆರ್‌ಸಿಬಿ ಪ್ಲೇಯರ್‌ಗೆ ಸಿಕ್ತು ಬಂಪರ್‌ ಸುದ್ದಿ!

ಆರ್‌ಸಿಬಿ ಇನ್ನುಳಿದ 3 ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಅವಕಾಶ ಸುಲಭವಾಗಿ ಸಿಗುವುದಿಲ್ಲ. ಇದರ ಜೊತೆಗೆ ನೆಟ್‌ರೇನ್ ರೇಟ್ ಉತ್ತಮಪಡಿಸಿಕೊಳ್ಳಬೇಕಿದೆ. ಇನ್ನುಳಿದ 3 ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ 16 ಅಂಕ ಸಂಪಾದಿಸಲಿದೆ. ಹೀಗಾಗಿ ಭಾರಿ ಅಂತರದ ಗೆಲುವು ಆರ್‌ಸಿಬಿಗೆ ಅತ್ಯವಶ್ಯಕವಾಗಿದೆ. ಆದರೆ ಇದರಲ್ಲಿ ಯಾವುದೇ ಒಂದು ಪಂದ್ಯದಲ್ಲಿ ಸೋಲು ಅಥವಾ ರನ್‌ರೇಟ್ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆರ್‌ಸಿಬಿ ಪ್ಲೇ ಆಫ್ ಅವಕಾಶ ಬಹುತೇಕ ಕೈತಪ್ಪಲಿದೆ.

ಆರ್‌ಸಿಬಿಗೆ ಅದೆಷ್ಟೇ ಕಸರತ್ತು ಮಾಡಿದರೂ 2ನೇ ಸ್ಥಾನಕ್ಕೆ ತಲುಪುವ ಅವಕಾಶವಿಲ್ಲ. ಹೀಗಾಗಿ 3 ಮತ್ತು 4ನೇ ಸ್ಥಾನಕ್ಕಾಗಿ ಪ್ರಯತ್ನ ಪಡಬೇಕು. ಆದರೆ ಇಲ್ಲೂ ಕೂಡ ಆರ್‌ಸಿಬಿ ಪ್ರಯತ್ನದ ಜೊತೆಗೆ ಇತರ ತಂಡದ ಕೃಪೆಯೂ ಆರ್‌ಸಿಬಿಗೆ ಬೇಕಿದೆ. ಕಳೆದ ಹಲವು ಆವೃತ್ತಿಗಳಲ್ಲೂ ಇದೇ ಪರಿಸ್ಥಿತಿ ಆರ್‌ಸಿಬಿಗೆ ಎದುರಾಗಿತ್ತು. ಹೀಗಾಗಿ ಆರ್‌ಸಿಬಿ ತಂಡಕ್ಕೂ ಅಭಿಮಾನಿಗಳಿಗೂ ಸಂದರ್ಭ ಹೊಸದಲ್ಲ. 

'ಟೇಬಲ್‌ ತುಂಬಾ ಟೈಟ್ ಆಗಿದೆ'; ಮುಂಬೈ ಎದುರಿನ ಸೋಲಿನ ಬೆನ್ನಲ್ಲೇ RCB ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?

4 ಬಾರಿ ಚಾಂಪಿ​ಯನ್‌ ಚೆನ್ನೈ ಸೂಪರ್‌ ಕಿಂಗ್ಸ್ 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರುದ್ದ ಚೆನ್ನೈ ಭರ್ಜರಿ ಗೆಲುವು ದಾಖಲಿಸಿತ್ತು. ಈ ಮೂಲಕ ಸಿಎಸ್‌ಕೆ ಪ್ಲೇ ಆಫ್ ಪ್ರವೇಶದ ಸನಿಹದಲ್ಲಿದೆ. ಆದರೆ ಪ್ಲೇ ಆಫ್ ರೇಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ ಸದ್ಯ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದೆ. ಗುಜರಾತ್ 11 ಪಂದ್ಯದಲ್ಲಿ 8 ಗೆಲುವು ಸಾಧಿಸಿದೆ 16 ಅಂಕಗಳಿಸಿಕೊಂಡಿದೆ.