ಧರ್ಮಶಾಲಾದಲ್ಲಿಂದು ಪಂಜಾಬ್‌ಗೆ ರಾಜಸ್ಥಾನ ರಾಯಲ್ಸ್ ಸವಾಲುಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳುಗೆಲ್ಲುವ ತಂಡದ ಪ್ಲೇ-ಆಫ್‌ ಆಸೆ ಜೀವಂತ, ಸೋಲುವ ತಂಡ ಔಟ್‌

ಧರ್ಮಶಾಲಾ(ಮೇ.19): ಒಂದೇ ದೋಣಿಯಲ್ಲಿರುವ ರಾಜಸ್ಥಾನ ರಾಯಲ್ಸ್‌ ಹಾಗೂ ಪಂಜಾಬ್‌ ಕಿಂಗ್‌್ಸ ಶುಕ್ರವಾರ ಮುಖಾಮುಖಿಯಾಗಲಿವೆ. ಗೆಲ್ಲುವ ತಂಡದ ಪ್ಲೇ-ಆಫ್‌ ಆಸೆ ಜೀವಂತವಾಗಿ ಉಳಿಯಲಿದೆಯಾದರೂ, ಇತರ ಫಲಿತಾಂಶಗಳ ಮೇಲೆ ಪ್ಲೇ-ಆಫ್‌ ಭವಿಷ್ಯ ನಿರ್ಧಾರವಾಗಲಿದೆ. ಸೋಲುವ ತಂಡ ನಿಸ್ಸಂದೇಹವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಎರಡೂ ತಂಡಗಳು ತಮ್ಮ ಯೋಜನೆಗಳಲ್ಲಿ ಕೆಲ ಎಡವಟ್ಟುಗಳನ್ನು ಮಾಡಿದ್ದರಿಂದ ಈ ಸ್ಥಿತಿ ತಲುಪಿವೆ. ಎರಡೂ ತಂಡಗಳಲ್ಲಿ ಯಾವುದೇ ಗಾಯಾಳುಗಳ ಸಮಸ್ಯೆ ಇಲ್ಲ. ಆ್ಯಡಂ ಜಂಪಾ ಬದಲು ರಾಯಲ್ಸ್‌ ಟ್ರೆಂಟ್‌ ಬೌಲ್ಟ್‌ರನ್ನು ಆಡಿಸಬಹುದು. ತಂಡ ಇಂಪ್ಯಾಕ್ಟ್ ಆಟಗಾರನ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಈ ಆವೃತ್ತಿಯ ಅಚ್ಚರಿಗಳಲ್ಲೊಂದು. ರಾಜಸ್ಥಾನ ರಾಯಲ್ಸ್ ತಂಡವು ಗೆಲುವು ಸಾಧಿಸಬೇಕಿದ್ದರೆ, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಹಾಗೂ ದೇವದತ್ ಪಡಿಕಲ್ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಆಸರೆಯಾಗಬೇಕಿದೆ. ಶಿಮ್ರೊನ್ ಹೆಟ್ಮೇಯರ್ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಯುಜುವೇಂದ್ರ ಚಹಲ್‌ ಜತೆಗೆ ಅಶ್ವಿನ್ ಸ್ಪಿನ್ ದಾಳಿಯನ್ನು ಮುನ್ನಡೆಸಬೇಕಿದೆ. ಇನ್ನು ವೇಗದ ಬೌಲಿಂಗ್‌ ವಿಭಾಗದಲ್ಲಿ ಟ್ರೆಂಟ್‌ ಬೌಲ್ಟ್‌, ಸಂದೀಪ್ ಶರ್ಮಾ ಮಾರಕ ದಾಳಿ ನಡೆಸಬೇಕಿದೆ.

ಇನ್ನು ಪಂಜಾಬ್‌ ಕಿಂಗ್ಸ್‌ ತಮ್ಮ ಬ್ಯಾಟಿಂಗ್‌ ಪಡೆಯ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು, ಪ್ರಭ್‌ಸಿಮ್ರನ್‌ ಸಿಂಗ್‌, ಶಿಖರ್ ಧವನ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಪ್ರಮುಖ ಪಾತ್ರ ವಹಿಸಬೇಕಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಆರ್ಶದೀಪ್ ಸಿಂಗ್ ಜತೆಗೆ ಕಗಿಸೋ ರಬಾಡ ಹಾಗೂ ರಾಹುಲ್‌ ಚಹರ್ ಜವಾಬ್ದಾರಿಯುತ ಬೌಲಿಂಗ್‌ ಪ್ರದರ್ಶನ ತೋರಿದರೆ, ಬಲಿಷ್ಠ ರಾಜಸ್ಥಾನ ರಾಯಲ್ಸ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯ. 

IPL 2023: ಕೊಹ್ಲಿ ಕಿಂಗ್‌ ಸೆಂಚುರಿ, ಆರ್‌ಸಿಬಿಗೆ ಬಿಗ್‌ ವಿಕ್ಟರಿ, ಪ್ಲೇ ಆಫ್‌ ರೇಸ್‌ನ ತಂಡಗಳಿಗೆ ಎದೆಯುರಿ!

ಸದ್ಯ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಕೂಡಾ 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲು ಸಹಿತ 12 ಅಂಕಗಳನ್ನು ಗಳಿಸಿದೆಯಾದರೂ, ನೆಟ್ ರನ್‌ರೇಟ್‌ ಆಧಾರದಲ್ಲಿ ಪಂಜಾಬ್ ತಂಡವು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇಂದು ಗೆಲ್ಲುವ ತಂಡವು ಪ್ಲೇ ಆಫ್‌ ಕನಸನ್ನು ಕೊಂಚ ಜೀವಂತವಾಗಿರಿಸಿಕೊಳ್ಳಲಿದೆ. ಆದರೆ ಸೋಲು ಕಾಣುವ ತಂಡವು ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ. 

ಒಟ್ಟು ಮುಖಾಮುಖಿ: 25

ರಾಜಸ್ಥಾನ: 14

ಪಂಜಾಬ್‌: 11

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ಡೇವದತ್ ಪಡಿಕ್ಕಲ್‌, ಜೋ ರೂಟ್‌, ಶಿಮ್ರೊನ್ ಹೆಟ್ಮೇಯರ್‌, ಧೃವ್‌ ಜುರೆಲ್‌, ರವಿಚಂದ್ರನ್ ಅಶ್ವಿನ್‌, ಆಡಂ ಜಂಪಾ/ಟ್ರೆಂಟ್‌ ಬೌಲ್ಟ್‌, ಯುಜುವೇಂದ್ರ ಚಹಲ್‌, ಸಂದೀಪ್‌ ಶರ್ಮಾ, ಕೆ ಎಂ ಆಸಿಫ್‌.

ಪಂಜಾಬ್‌: ಪ್ರಭ್‌ಸಿಮ್ರನ್‌ ಸಿಂಗ್, ಶಿಖರ್ ಧವನ್‌(ನಾಯಕ), ಅಥರ್ವ ಟೈಡೆ, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ಶಾರುಖ್‌ ಖಾನ್, ಸ್ಯಾಮ್ ಕರ್ರನ್‌, ಹಪ್ರೀರ್ತ್ ಬ್ರಾರ್, ರಾಹುಲ್ ಚಹರ್‌, ಕಗಿಸೋ ರಬಾಡ/ಸಿಕಂದರ್ ರಾಜಾ, ನೇಥನ್ ಎಲ್ಲೀಸ್‌, ಆರ್ಶದೀಪ್ ಸಿಂಗ್.

ಪಂದ್ಯ: ಸಂಜೆ 7.30ರಿಂದ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್/ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಧರ್ಮಶಾಲಾದಲ್ಲಿ 2 ದಿನ ನಡೆದಿದ್ದ ಪಂದ್ಯ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಿತ್ತು. 200+ ರನ್‌ ಕೂಡ ಸುರಕ್ಷಿತವಲ್ಲ ಎನಿಸಿತ್ತು. ಹೀಗಾಗಿ ಈ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು. ವೇಗಿಗಳಿಗೆ ಹೆಚ್ಚಿನ ನೆರವು ಸಿಗಲಿದೆ.