Asianet Suvarna News Asianet Suvarna News

IPL 2023 ಅಸ್ಥಿರ ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌ ಪವರ್‌ನ ಭೀತಿ!

ಮುಂಬೈನ ವಾಂಖೇಡೆ ಮೈದಾನದಲ್ಲಿ ಹೈವೋಲ್ಟೇಜ್ ಪಂದ್ಯ
ಸತತ 2 ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್‌
ರಾಜಸ್ಥಾನ ರಾಯಲ್ಸ್‌ಗೆ ಮತ್ತೆ ಅಗ್ರಸ್ಥಾನ ಗುರಿ
 

IPL 2023 Rajasthan Royals take on 5 time Champion Mumbai Indians kvn
Author
First Published Apr 30, 2023, 12:58 PM IST | Last Updated Apr 30, 2023, 12:58 PM IST

ಮುಂಬೈ(ಏ.30): ಈ ಆವೃತ್ತಿಯ ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ನ ಬಹುತೇಕ ಯೋಜನೆಗಳು ಕೈಕೊಡುತ್ತಿದ್ದು, ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ಪಡೆ ಇನ್ನಷ್ಟು ಕುಗ್ಗಿಹೋಗಿದೆ. ಅಸ್ಥಿರ ಪ್ರದರ್ಶನ ತೋರುತ್ತಿರುವ ಮುಂಬೈಗೆ ಭಾನುವಾರ ಬಲಿಷ್ಠ ರಾಜಸ್ಥಾನ ರಾಯಲ್ಸ್‌ ಎದುರಾಗಲಿದ್ದು, ಬ್ಯಾಟರ್‌ಗಳ ಸ್ವರ್ಗ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ನ ಬ್ಯಾಟರ್‌ಗಳ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ.

ರಾಜಸ್ಥಾನಕ್ಕೆ ಮೂವರು ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳ ಜೊತೆ ಟ್ರೆಂಟ್‌ ಬೌಲ್ಟ್‌, ಸಂದೀಪ್‌ ಶರ್ಮಾರಂತಹ ಗುಣಮಟ್ಟದ ವೇಗಿಗಳ ಬಲವೂ ಇದೆ. ಮುಂಬೈ ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದರೆ, ರಾಜಸ್ಥಾನ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲು ಕಾಯುತ್ತಿದೆ.

ರಾಜಸ್ಥಾನ ರಾಯಲ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್ ಹಾಗೂ ಶಿಮ್ರೊನ್ ಹೆಟ್ಮೇಯರ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳಾದ ಆಡಂ ಜಂಪಾ, ರವಿಚಂದ್ರನ್ ಅಶ್ವಿನ್ ಹಾಗೂ ಯುಜುವೇಂದ್ರ ಚಹಲ್ ಯಾವುದೇ ಪಿಚ್‌ನಲ್ಲಾದರೂ ಮೋಡಿ ಮಾಡುವ ಕ್ಷಮತೆ ಹೊಂದಿದ್ದಾರೆ. 

IPL 2023 ಜಯದ ಲಯಕ್ಕೆ ಮರಳಲು ಚೆನ್ನೈ, ಪಂಜಾಬ್‌ ಕಾತರ!

ಇನ್ನೊಂದೆಡೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮಾಡುತ್ತಿರುವ ಯಾವುದೇ ಪ್ರಯೋಗಗಳು ಕೈಹಿಡಿಯುತ್ತಿಲ್ಲ. ಆರ್ಚರ್ ಹಾಗೂ ಬುಮ್ರಾ ಅವರಿಲ್ಲದ ಮುಂಬೈ ಬೌಲಿಂಗ್ ಪಡೆ ದುರ್ಬಲವಾಗಿ ಕಂಡು ಬರುತ್ತಿದೆ. ರೋಹಿತ್ ಶರ್ಮಾ, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್ ಅವರಂತಹ ಬ್ಯಾಟರ್‌ಗಳ ಅಸ್ಥಿರ ಪ್ರದರ್ಶನ ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ.ಇಂದಿನ ಪಂದ್ಯಕ್ಕೆ ಜೋಫ್ರಾ ಆರ್ಚರ್‌ ಮುಂಬೈ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಇದುವರೆಗೂ 8 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 3 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸಂಜು ಪಡೆ ಮತ್ತೊಮ್ಮೆ ಫೈನಲ್‌ಗೇರಲಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡವು ಆಡಿದ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದಿದೆ.

ಒಟ್ಟು ಮುಖಾಮುಖಿ: 27

ಮುಂಬೈ: 14

ರಾಜಸ್ಥಾನ: 12

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್‌ ಶರ್ಮಾ(ನಾಯಕ), ಇಶಾನ್‌ ಕಿಶನ್‌, ಕ್ಯಾಮರೋನ್‌ ಗ್ರೀನ್‌, ಸೂರ್ಯಕುಮಾರ್ ಯಾದವ್‌, ತಿಲಕ್‌ ವರ್ಮಾ, ಟಿಮ್‌ ಡೇವಿಡ್‌, ನೇಹಲ್‌ ವಡೇದರಾ, ಜೋಫ್ರಾ ಆರ್ಚರ್‌, ಪೀಯೂಷ್‌ ಚಾವ್ಲಾ, ಜೇಸನ್‌ ಬೆಹ್ರನ್‌ಡ್ರಾಫ್, ಅರ್ಜುನ್‌ ತೆಂಡುಲ್ಕರ್, ಕುಮಾರ್ ಕಾರ್ತಿಕೇಯ.

ರಾಜಸ್ಥಾನ ರಾಯಲ್ಸ್‌: ಯಶಸ್ವಿ ಜೈಸ್ವಾಲ್, ಜೋಶ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ದೇವದತ್ ಪಡಿಕ್ಕಲ್‌, ಶಿಮ್ರೊನ್‌ ಹೆಟ್ಮೇಯರ್‌, ಧೃವ್ ಜುರೆಲ್‌, ಟ್ರೆಂಟ್‌ ಬೌಲ್ಟ್‌, ರವಿಚಂದ್ರನ್ ಅಶ್ವಿನ್‌, ಆಡಂ ಜಂಪಾ, ಯುಜುವೇಂದ್ರ ಚಹಲ್‌, ಸಂದೀಪ್‌ ಶರ್ಮಾ, ಕುಲ್ದಿಪ್‌ ಸೆನ್. 

ಪಂದ್ಯ ಆರಂಭ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ವಾಂಖೇಡೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಕಳೆದೆರಡು ಪಂದ್ಯಗಳಲ್ಲಿ ಇಲ್ಲಿ ದೊಡ್ಡ ಮೊತ್ತಗಳು ದಾಖಲಾಗಿವೆ. ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕೂ ಹೆಚ್ಚು ರನ್‌ ದಾಖಲಿಸಿದರಷ್ಟೇ ಗೆಲ್ಲಲು ಸಾಧ್ಯವಾಗಬಹುದು. ಸ್ಪಿನ್ನರ್‌ಗಳಿಗೂ ನೆರವು ನಿರೀಕ್ಷಿಸಬಹುದು.
 

Latest Videos
Follow Us:
Download App:
  • android
  • ios