ಯಶಸ್ಬಿ ಜೈಸ್ವಾಲ್‌, ದೇವದತ್‌ ಪಡಿಕ್ಕಲ್‌ ಅರ್ಧಶತಕ ಹಾಗೂ ಶಿಮ್ರೋನ್‌ ಹೆಟ್ಮೆಯರ್‌ ಅವರ ಸೂಪರ್ ಇನ್ನಿಂಗ್ಸ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲ ಪಂಜಾಬ್‌ ಕಿಂಗ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. 

ಧರ್ಮಶಾಲಾ (ಮೇ.19): ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರ ಸ್ಪೋಟಕ ಅರ್ಧಶತಕ ಹಾಗೂ ಇನ್ನಿಂಗ್ಸ್‌ನ ಕೊನೆಯಲ್ಲಿ ಶಿಮ್ರೋನ್‌ ಹೆಟ್ಮೆಯರ್‌ ಸೂಪರ್‌ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನ ಮೂಲಕ 14 ಅಂಕ ಸಂಪಾದನೆ ಮಾಡಿರುವ ರಾಜಸ್ಥಾನ ರಾಯಲ್ಸ್‌ ತಂಡ ಪ್ಲೇ ಆಫ್‌ನ ನಿರೀಕ್ಷೆಯಲ್ಲಿದ್ದರೆ, ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಬಹುತೇಕವಾಗಿ ಹೊರಬಿದ್ದಿದ್ದ ಪಂಜಾಬ್‌ ಕಿಂಗ್ಸ್ ತಂಡವೀಗ ಅಧಿಕೃತವಾಗಿ 16ನೇ ಆವೃತ್ತಿಯ ಐಪಿಎಲ್‌ನಿಂದ ನಿರ್ಗಮನ ಕಂಡಿದೆ. ಸನ್‌ರೈಸರ್ಸ್‌ ಹೈದರಾಬಾದ್‌, ಡೆಲ್ಲಿ ಕ್ಯಾಪಿಟಲ್ಸ್‌ ಬಳಿಕ ಲೀಗ್‌ನಿಂದ ಹೊರಬಿದ್ದ ಮೂರನೇ ತಂಡ ಪಂಜಾಬ್‌ ಕಿಂಗ್ಸ್‌. ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್ ತಂಡ ನೀರಸ ಬ್ಯಾಟಿಂಗ್‌ ನಿರ್ವಹಣೆ ತೋರಿತು. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ 5 ವಿಕೆಟ್‌ಗೆ 187 ರನ್‌ ಬಾರಿಸಲು ಯಶಸ್ವಿಯಾಯಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ ತಂಡ 19.4 ಓವರ್‌ಗಳಲ್ಲಿ6 ವಿಕೆಟ್‌ಗೆ 189 ರನ್‌ ಬಾರಿಸಿ ಗೆಲುವು ಕಂಡಿತು.

ಈ ಜಯದಿಂದಾಗಿ ರಾಜಸ್ಥಾನ ರಾಯಲ್ಸ್‌ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದರೂ, ತಂಡದ ಪ್ಲೇ ಆಫ್‌ ಸಾಧ್ಯತೆ ಅತ್ಯಂತ ವಿರಳವಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡವನ್ನು ಅಂಕಪಟ್ಟಿಯಲ್ಲಿ ಹಿಂದಿಕ್ಕಲು 18.3 ಓವರ್‌ಗಳಲ್ಲಿ ರಾಜಸ್ಥಾನ ಈ ಮೊತ್ತವನ್ನು ಚೇಸ್‌ ಮಾಡಬೇಕಿತ್ತು. ಹಾಗೇನಾದರೂ ಪ್ಲೇ ಆಫ್‌ಗೇರಬೇಕಾದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಆಯಾ ಪಂದ್ಯಗಳಲ್ಲಿ ದಯನೀಯ ಸೋಲು ಕಾಣಬೇಕು ಎಂದು ರಾಜಸ್ಥಾನ ಪ್ರಾರ್ಥನೆ ಮಾಡಬೇಕಿದೆ.

'ಐ ಡೋಂಟ್ ಕೇರ್': ಪಂದ್ಯ ಗೆಲ್ಲಿಸೋದು ಹೇಗೆಂದು ಗೊತ್ತು ಎಂದ ವಿರಾಟ್ ಕೊಹ್ಲಿ..!

ಚೇಸಿಂಗ್‌ ಆರಂಭಿಸಿದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಯಶಸ್ವಿ ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳಿದ್ದ 50 ರನ್‌ ಬಾರಿಸಿ ಗಮನಸೆಳೆದರೆ, ಕನ್ನಡಿಗ ದೇವದತ್‌ ಪಡಿಕ್ಕಲ್‌ 30 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳಿದ್ದ 51 ರನ್‌ ಬಾರಿಸಿ ಮಿಂಚಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಶ್ರಿಮೋನ್‌ ಹೆಟ್ಮೆಯರ್‌ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳಿದ್ದ 46 ರನ್‌ ಸಿಡಿಸಿ ತಂಡದ ಗೆಲುವನ್ನು ಸುಲಭ ಮಾಡಿದರು. ಜೋಸ್‌ ಬಟ್ಲರ್‌ ದಾಖಲೆಯ 5ನೇ ಬಾರಿಗೆ ಈ ಐಪಿಎಲ್‌ನಲ್ಲಿ ಸೊನ್ನೆ ಸುತ್ತಿದರು. ಒಂದೇ ಆವೃತ್ತಿಯಲ್ಲಿ ಗರಿಷ್ಠ ಬಾರಿ ಶೂನ್ಯಕ್ಕೆ ಔಟಾದ ಕುಖ್ಯಾತಿ ಇವರದಾಗಿದೆ. ಇನ್ನು ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಬಾರಿಸಿ ನಿರ್ಗಮಿಸಿದರು. ರಿಯಾನ್‌ ಪರಾಗ್‌ 12 ಎಸೆತದಲ್ಲಿ 2 ಸಿಕ್ಸರ್‌ 1 ಬೌಂಡರಿಯೊಂದಿಗೆ 20 ರನ್‌ ಬಾರಿಸಿ ಗೆಲುವಿಗೆ ನೆರವಾದರು.

IPL 2023: ಕೊಹ್ಲಿ ಕಿಂಗ್‌ ಸೆಂಚುರಿ, ಆರ್‌ಸಿಬಿಗೆ ಬಿಗ್‌ ವಿಕ್ಟರಿ, ಪ್ಲೇ ಆಫ್‌ ರೇಸ್‌ನ ತಂಡಗಳಿಗೆ ಎದೆಯುರಿ!

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ದೊಡ್ಡ ಮೊತ್ತ ಬಾರಿಸಲುವಲ್ಲಿ ವಿಫಲವಾಯಿತು. ಆರಂಭಿಕರಾದ ಪ್ರಭ್‌ಸಿಮ್ರನ್‌ (2) ನಾಯಕ ಶಿಖರ್‌ ಧವನ್‌ (17) ತಂಡದ ಮೊತ್ತ 38 ರನ್‌ ಆಗಿರುವಾಗಲೇ ಪೆವಿಲಿಯನ್‌ ಸೇರಿದ್ದರು. ಅಥರ್ವ ತೈಡೆ ಹಾಗೂ ಕಳೆದ ಪಂದ್ಯದಲ್ಲಿ ವೀರಾವೇಶದ ಆಟವಾಡಿದ್ದ ಲಿಯಾಮ್‌ ಲಿವಿಂಗ್‌ ಸ್ಟೋನ್‌ ಕೂಡ ಅಬ್ಬರಿಸುವಲ್ಲಿ ವಿಫಲರಾಗಿದ್ದರು. 50 ರನ್‌ಗೆ 4 ವಿಕೆಟ್‌ ಕಲೆದುಕೊಮಡಿದ್ದ ಹಂತದಲ್ಲಿ ಜೊತೆಯಾದ ಆಲ್ರೌಂಡರ್‌ ಸ್ಯಾಮ್‌ ಕರ್ರನ್‌ (49 ರನ್‌, 31 ಎಸೆತ, 4 ಬೌಂಡರಿ, 2 ಸಿಕ್ಸರ್‌), ವಿಕೆಟ್‌ ಕೀಪರ್‌ ಜಿತೇಶ್‌ ವರ್ಮ (44 ರನ್,‌ 28 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹಾಗೂ ಸ್ಫೋಟಕ ಬ್ಯಾಟ್ಸ್ಮನ್‌ ಶಾರುಖ್‌ ಖಾನ್‌ (41 ರನ್‌, 23 ಎಸೆತ, 4 ಬೌಂಡರಿ, 2 ಸಿಕ್ಸರ್‌) ನೆರವಿನಿಂದಾಗಿ ದೊಡ್ಡ ಮೊತ್ತ ಪೇರಿಸುವಲ್ಲಿ ಯಶ ಕಂಡಿತು. ರಾಜಸ್ಥಾನ ಪರವಾಗಿ ನವದೀಪ್‌ ಸೈನಿ 40 ರನ್‌ಗೆ 3 ವಿಕೆಟ್‌ ಉರುಳಿಸಿ ಮಿಂಚಿದರು.