ಮುಂಬೈ vs ಗುಜರಾತ್: ಯಾರಿಗೆ IPL 2023 ಫೈನಲ್ ಅದೃಷ್ಟ?
ಇಂದು ಅಹಮದಾಬಾದ್ನಲ್ಲಿ 2ನೇ ಕ್ವಾಲಿಫೈಯರ್ ಪಂದ್ಯ
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ಗೆ ಸತತ 2ನೇ ಫೈನಲ್ ನಿರೀಕ್ಷೆ
7ನೇ ಬಾರಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿ 5 ಬಾರಿ ಚಾಂಪಿಯನ್ ಮುಂಬೈ
ಗೆಲ್ಲುವ ತಂಡ vs ಚೆನ್ನೈ ನಡುವೆ ನಾಡಿದ್ದು ಫೈನಲ್
ಅಹಮದಾಬಾದ್(ಮೇ.26): 16ನೇ ಆವೃತ್ತಿ ಐಪಿಎಲ್ ಪ್ರಶಸ್ತಿ ಗೆಲ್ಲುವವರಾರಯರು ಎಂಬ ಪ್ರಶ್ನೆಗೆ ಕೆಲ ದಿನಗಳಲ್ಲೇ ಉತ್ತರ ಸಿಗಲಿದ್ದು, ಕಳೆದ 3 ಆವೃತ್ತಿಗಳಲ್ಲಿ ಚಾಂಪಿಯನ್ ಆಗಿರುವ 3 ತಂಡಗಳು ರೇಸ್ನಲ್ಲಿ ಉಳಿದಿವೆ. ಈ ಪೈಕಿ 4 ಬಾರಿ ಚಾಂಪಿಯನ್ ಚೆನ್ನೈ ಈಗಾಗಲೇ ಫೈನಲ್ಗೇರಿದ್ದು, ಮತ್ತೊಂದು ಫೈನಲ್ ಸ್ಥಾನಕ್ಕಾಗಿ ಶುಕ್ರವಾರ ಕ್ವಾಲಿಫೈಯರ್-2ರಲ್ಲಿ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲಿವೆ.
ಗುಂಪು ಹಂತದಲ್ಲಿ 10 ಗೆಲುವಿನೊಂದಿಗೆ ಅಗ್ರಸ್ಥಾನಿಯಾಗಿದ್ದ ಗುಜರಾತ್ ಕ್ವಾಲಿಫೈಯರ್-1ರಲ್ಲಿ ಚೆನ್ನೈ ವಿರುದ್ಧ ಸೋಲನುಭವಿಸಿತ್ತು. ಅತ್ತ ಮುಂಬೈ ತಂಡ ಲಖನೌ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಕ್ವಾಲಿಫೈಯರ್-2ಗೆ ಅರ್ಹತೆ ಪಡೆದುಕೊಂಡಿದೆ. ರೋಹಿತ್ ನಾಯಕತ್ವದ ಮುಂಬೈ 7ನೇ ಬಾರಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದ್ದು, ಹಾರ್ದಿಕ್ ಪಡೆ ತವರಿನ ಅಂಗಳದ ಲಾಭವೆತ್ತಿ ಸತತ 2ನೇ ಬಾರಿ ಫೈನಲ್ಗೇರುವ ನಿರೀಕ್ಷೆಯಲ್ಲಿದೆ.
ಟೂರ್ನಿಯ ಆರಂಭದಲ್ಲಿ ಮಂಕಾಗಿದ್ದ ಮುಂಬೈ ಸದ್ಯ ಎಲ್ಲಾ ವಿಭಾಗದಲ್ಲೂ ಅಬ್ಬರಿಸುತ್ತಿದ್ದು, ಬ್ಯಾಟರ್ಗಳ ಸಾಹಸ ತಂಡವನ್ನು ಮತ್ತೊಮ್ಮೆ ಫೈನಲ್ಗೇರಿಸಬಹುದು. ಸೂರ್ಯಕುಮಾರ್, ಕ್ಯಾಮರೂನ್ ಗ್ರೀನ್ ಅಭೂತಪೂರ್ವ ಲಯದಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಇನ್ನು ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲೂ ಕಿರಿಯರು ಮಿಂಚುತ್ತಿದ್ದು, ಆಕಾಶ್ ಮಧ್ವಾಲ್ ಲಖನೌ ವಿರುದ್ಧದ ಮಾರಕ ದಾಳಿಯನ್ನು ಮತ್ತೊಮ್ಮೆ ಸಂಘಟಿಸುವ ನಿರೀಕ್ಷೆಯಲ್ಲಿದ್ದಾರೆ.
5 ರನ್‌ಗೆ 5 ವಿಕೆಟ್ ಕಿತ್ತ ವೇಗಿ ಆಕಾಶ್ ಮಧ್ವಾಲ್..! ಈತ ಒಂದು ಕಾಲದಲ್ಲಿ ಆರ್‌ಸಿಬಿ ನೆಟ್ ಬೌಲರ್..!
ಅತ್ತ ಗುಜರಾತ್ ಉತ್ತಮ ಸಂಯೋಜನೆ ಹೊಂದಿದ್ದು, ಕಳೆದ ಪಂದ್ಯದ ವೈಫಲ್ಯದ ಹೊರತಾಗಿಯೂ ಬಲಿಷ್ಠವಾಗಿಯೇ ತೋರುತ್ತಿದೆ. ಶುಭ್‌ಮನ್ ಗಿಲ್ ಸ್ಫೋಟಕ ಆಟವಾಡುತ್ತಿದ್ದು, ರಶೀದ್ ಖಾನ್, ಶಮಿ, ಮೋಹಿತ್, ನೂರ್ ಅಹ್ಮದ್ ಮುಂಬೈ ಬ್ಯಾಟರ್ಗಳನ್ನು ಕಟ್ಟಿಹಾಕುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮುಖಾಮುಖಿ: 03
ಮುಂಬೈ: 02
ಗುಜರಾತ್: 01
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೊರ್ಡನ್, ಹೃತ್ತಿಕ್ ಶೊಕೀನ್, ಪೀಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರನ್ಡ್ರಾಫ್.
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ದಶುನ್ ಶಾನಕ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಾಲ್ಕಂಡೆ, ನೂರ್ ಅಹ್ಮದ್, ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಅಹಮದಾಬಾದ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿ ಕಳೆದ 4 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಇಬ್ಬನಿ ಸಮಸ್ಯೆಯೂ ಇಲ್ಲದ ಕಾರಣ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು.