5 ರನ್‌ಗೆ 5 ವಿಕೆಟ್ ಕಿತ್ತ ವೇಗಿ ಆಕಾಶ್‌ ಮಧ್ವಾಲ್..! ಈತ ಒಂದು ಕಾಲದಲ್ಲಿ ಆರ್‌ಸಿಬಿ ನೆಟ್ ಬೌಲರ್‌..!

ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟ ಮುಂಬೈ ಇಂಡಿಯನ್ಸ್
ಎಲಿಮಿನೇಟರ್ ಪಂದ್ಯದ ಗೆಲುವಿನ ರೂವಾರಿ ಆಕಾಶ್ ಮಧ್ವಾಲ್
ಆರ್‌ಸಿಬಿ ಕಳೆದುಕೊಂಡ ಮುತ್ತು, ಈಗ ಮುಂಬೈ ಇಂಡಿಯನ್ಸ್ ಸ್ವತ್ತು

How Akash Madhwal became RCB loss and Mumbai Indians gain in IPL 2023 kvn

ಚೆನ್ನೈ(ಮೇ.25): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 81 ರನ್ ಅಂತರದ ಜಯಭೇರಿ ಬಾರಿಸಿದೆ. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ8 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕುವ ಮೂಲಕ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸವಾಲಿನ ಗುರಿ ನೀಡಿತ್ತು. ಇನ್ನು ಗುರಿ ಬೆನ್ನತ್ತಿದ ಲಖನೌ ತಂಡವು ಆಕಾಶ್‌ ಮಧ್ವಾಲ್ ಮಾರಕ ದಾಳಿಗೆ ತತ್ತರಿಸಿ ಕೇವಲ 101 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

ಇನ್ನೂ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಉತ್ತರಖಂಡ ಮೂಲದ ಯುವ ವೇಗಿ ಆಕಾಶ್ ಮಧ್ವಾಲ್‌, ಮುಂಬೈ ಇಂಡಿಯನ್ಸ್ ಪರ ಗೆಲುವಿನ ರೂವಾರಿ ಎನಿಸಿಕೊಂಡರು. ಲಖನೌ ಎದುರು ಆಕಾಶ್ ಮಧ್ವಾಲ್‌ ಕೇವಲ 3.3 ಓವರ್‌ ಬೌಲಿಂಗ್ ಮಾಡಿ 5 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಅನಿಲ್ ಕುಂಬ್ಳೆ ಜತೆಗೆ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ರನ್ ನೀಡಿ 5 ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು 2009ರ ಐಪಿಎಲ್‌ನಲ್ಲಿ ಅನಿಲ್‌ ಕುಂಬ್ಳೆ ರಾಜಸ್ಥಾನ ರಾಯಲ್ಸ್ ಎದುರು ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಆಕಾಶ್ ಮಧ್ವಾಲ್‌, ಐಪಿಎಲ್ ಪ್ಲೇ ಆಫ್‌ನಲ್ಲಿ 5 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಅಪರೂಪದ ದಾಖಲೆಗೂ ಭಾಜನರಾಗಿದ್ದಾರೆ.

ಅಕಾಶ್ ಮಧ್ವಾಲ್‌, ಲಖನೌ ಬ್ಯಾಟರ್‌ ಪ್ರೇರಕ್ ಮಂಕಡ್(6) ವಿಕೆಟ್ ಕಬಳಿಸುವ ಮೂಲಕ ವಿಕೆಟ್ ಖಾತೆ ತೆರೆದರು. ಇದಾದ ಬಳಿಕ ಎರಡನೇ ಸ್ಪೆಲ್‌ನಲ್ಲಿ ಅಪಾಯಕಾರಿ ಬ್ಯಾಟರ್ ಆಯುಷ್ ಬದೋನಿಯನ್ನು(01) ಕೇವಲ ಒಂದಂಕಿ ಮೊತ್ತಕ್ಕೆ ಬಲಿ ಪಡೆದರು. ಇದಾದ ಬಳಿಕ ಅದೇ ಓವರ್‌ನಲ್ಲಿ ನಿಕೋಲಸ್ ಪೂರನ್ ಅವರನ್ನು ಶೂನ್ಯಕ್ಕೆ ಬಲಿ ಪಡೆದು ಪೆವಿಲಿಯನ್ ಪೆರೇಡ್ ಮಾಡುವಂತೆ ಮಾಡಿದರು. ಇನ್ನು ಕೊನೆಯಲ್ಲಿ ರವಿ ಬಿಷ್ಣೋಯಿ ಹಾಗೂ ಮೊಯ್ಸಿನ್ ಖಾನ್ ಬಲಿ ಪಡೆಯುವ ಮೂಲಕ 5 ವಿಕೆಟ್ ಗೊಂಚಲು ತಮ್ಮದಾಗಿಸಿಕೊಳ್ಳುವಲ್ಲಿ ಆಕಾಶ್ ಯಶಸ್ವಿಯಾದರು.  

ಪ್ರತಿಭೆ ಗುರುತಿಸದೇ ಆಕಾಶ್‌ ಮಧ್ವಾಲ್‌ ಕೈಬಿಟ್ಟು ಕೆಟ್ಟ ಆರ್‌ಸಿಬಿ..!

ಈ ಅದ್ಭುತ ಪ್ರದರ್ಶನಕ್ಕಾಗಿ ಆಕಾಶ್ ಮಧ್ವಾಲ್‌, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಪ್ರೆಸ್ ಕಾನ್ಫರೆನ್ಸ್‌ ವೇಳೆ ತಮ್ಮ ಕ್ರಿಕೆಟ್ ಜರ್ನಿಯ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. "ನಾನು 2019ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನೆಟ್‌ ಬೌಲರ್ ಆಗಿದ್ದೆ. ಆದರೆ ಈಗ ನನಗೆ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಅವಕಾಶ ಸಿಕ್ಕಿತು. ಸ್ಕೌಟಿಂಗ್ ತಂಡವನ್ನು ಆಯ್ಕೆ ಮಾಡಿಕೊಂಡಾಗ, ಅವರು ನಮಗೆ ಪ್ರಾಕ್ಟೀಸ್ ಮ್ಯಾಚ್ ಆಡಲು ಅವಕಾಶವನ್ನು ಕೊಡುತ್ತಾರೆ. ಅಲ್ಲಿ ನಾವು ನಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಅನಾವರಣ ಮಾಡಬೇಕಾಗುತ್ತದೆ. ತಂಡವು ನಿಮ್ಮನ್ನು ತುಂಬಾ ಹತ್ತಿರದಿಂದ ಗಮನವಿಟ್ಟು ವೀಕ್ಷಿಸುತ್ತಿರುತ್ತದೆ. ಫ್ರಾಂಚೈಸಿಯು ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ" ಎಂದು ಮಧ್ವಾಲ್ ಹೇಳಿದ್ದಾರೆ.

ಕಳೆದ ವರ್ಷ ನಾನು ಮುಂಬೈ ಇಂಡಿಯನ್ಸ್ ಪರ ಕೇವಲ ಎರಡು ಪಂದ್ಯಗಳನ್ನು ಆಡಲಷ್ಟೇ ಅವಕಾಶ ಸಿಕ್ಕಿತ್ತು. ಆದರೆ ನನಗೆ ಮುಂದಿನ ವರ್ಷ ನಿಮಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಸ್ಪಷ್ಟ ಸಂದೇಶವನ್ನು ನೀಡಲಾಗಿತ್ತು ಎಂದು ಆಕಾಶ್ ಮಧ್ವಾಲ್ ತಿಳಿಸಿದ್ದಾರೆ. "ನನಗೆ ನೀಡಲಾಗಿರುವ ಜವಾಬ್ದಾರಿಯನ್ನು ಪೂರೈಸಲು ನಾನು ನನ್ನಿಂದ ಎಷ್ಟು ಉತ್ತಮವಾದ ಪ್ರದರ್ಶನ ನೀಡಲು ಸಾಧ್ಯವೋ ಅದನ್ನು ಮಾಡುತ್ತೇನೆ. ನಾನು ಜಪ್ರೀತ್ ಬುಮ್ರಾ ಅವರ ಬದಲಿ ಆಟಗಾರನಲ್ಲ. ಆದರೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ" ಎಂದು ಆಕಾಶ್ ಮಧ್ವಾಲ್ ಹೇಳಿದ್ದಾರೆ.

2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆಕಾಶ್ ಮಧ್ವಾಲ್ ಅವರನ್ನು ತಮ್ಮ ನೆಟ್ ಬೌಲರ್ ಆಗಿ ನೇಮಿಸಿಕೊಂಡಿತ್ತು. ಆದರೆ ಅವರ ಪ್ರತಿಭೆ ಗ್ರಹಿಸಲು ಆರ್‌ಸಿಬಿ ಫ್ರಾಂಚೈಸಿ ವಿಫಲವಾಗಿತ್ತು. ಇನ್ನು 2022ರ ಐಪಿಎಲ್ ಮಧ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟೂರ್ನಿಯಿಂದ ಹೊರಬಿದ್ದಿದ್ದರು. ಸೂರ್ಯ ಬದಲಿಗೆ ಆಕಾಶ್‌ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್ ಅವರಂತ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಆಕಾಶ್ ಮಧ್ವಾಲ್ ಮಾರಕ ದಾಳಿ ನಡೆಸುವ ಮೂಲಕ ಮುಂಬೈ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ.

Latest Videos
Follow Us:
Download App:
  • android
  • ios