ಪಂಜಾಬ್ ಕಿಂಗ್ಸ್ ಎದುರು ರೋಚಕ ಜಯ ಕಂಡ ಕೆಕೆಆರ್ಕೆಕೆಆರ್ ಗೆಲ್ಲಿಸಿದ ಮ್ಯಾಚ್ ಫಿನಿಶರ್ ರಿಂಕು ಸಿಂಗ್ ರಿಂಕು ಸಿಂಗ್ ಬ್ಯಾಟಿಂಗ್ ಕೊಂಡಾಡಿದ ರಸೆಲ್
ಕೋಲ್ಕತಾ(ಮೇ.09): ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್, ಸಹ ಆಟಗಾರ ರಿಂಕು ಸಿಂಗ್ ಅವರ ಅದ್ಭುತ ಮ್ಯಾಚ್ ಫಿನಿಶಿಂಗ್ ಆಟವನ್ನು ಕೊಂಡಾಡಿದ್ದಾರೆ. ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ರಿಂಕು ಸಿಂಗ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್‌ಗೆ ರೋಚಕ ಜಯ ತಂದುಕೊಟ್ಟಿದ್ದರು. ಗೆಲ್ಲಲು ಕೊನೆಯ ಎರಡು ಓವರ್‌ಗಳಲ್ಲಿ 28 ರನ್‌ಗಳ ಅವಶ್ಯಕತೆಯಿದ್ದಾಗ ಆ್ಯಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವುದರ ಜತೆಗೆ ಕೆಕೆಆರ್ ಪ್ಲೇ ಅಫ್ ಕನಸಿಗೆ ಜೀವ ತುಂಬಿದ್ದಾರೆ.
ಹೌದು, ಕೊನೆಯ ಎರಡು ಎಸೆತ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಕೊನೆಯ ಎಸೆತಗಳಲ್ಲಿ ಕೆಕೆಆರ್ ಗೆಲ್ಲಲು 2 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಆ್ಯಂಡ್ರೆ ರಸೆಲ್ ಇಲ್ಲದ ರನ್ ಕದಿಯಲು ಹೋಗಿ ನಾನ್ ಸ್ಟ್ರೈಕ್‌ನಲ್ಲಿ ರನೌಟ್ ಆದರು. ಪಂದ್ಯದುದ್ದಕ್ಕೂ ಅದ್ಭುತ ಬ್ಯಾಟಿಂಗ್ ನಡೆಸಿದ ರಸೆಲ್ ನಿರ್ಣಾಯಕ ಘಟ್ಟದಲ್ಲಿ ವಿಕೆಟ್ ಕೈಚೆಲ್ಲಿದ್ದು, ಕೆಕೆಆರ್ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲ್ಲಲು 2 ರನ್ ಅಗತ್ಯವಿತ್ತು. ಆದರೆ ಆರ್ಶದೀಪ್ ಬೌಲಿಂಗ್‌ನಲ್ಲಿ ರಿಂಕು ಸಿಂಗ್ ಭರ್ಜರಿ ಬೌಂಡರಿ ಬಾರಿಸಿ ಮತ್ತೊಮ್ಮೆ ಕೆಕೆಆರ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಇನ್ನು ಪಂದ್ಯ ಮುಕ್ತಾಯದ ಬಳಿಕ ಆ್ಯಂಡ್ರೆ ರಸೆಲ್, ಕೊನೆಯ ಎರಡು ಎಸೆತ ಎದುರಿಸುವ ಮುನ್ನ ರಿಂಕು ಸಿಂಗ್ ಹಾಗೂ ತಮ್ಮ ನಡುವೆ ನಡೆದ ಇಂಟ್ರೆಸ್ಟಿಂಗ್ ಮಾತುಕತೆಯನ್ನು ರಸೆಲ್ ಬಿಚ್ಚಿಟ್ಟಿದ್ದಾರೆ. ಮತ್ತೊಂದು ತುದಿಯಲ್ಲಿ ರಿಂಕು ಸಿಂಗ್ ಇದ್ದರೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವೆಂದು ರಸೆಲ್ ಹೇಳಿದ್ದಾರೆ.
IPL 2023: ಕೊನೇ ಎಸೆತದಲ್ಲಿ ಗೆಲುವು ಕಂಡ ಕೆಕೆಆರ್!
ರಿಂಕು ಸಿಂಗ್ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಅವರು 5ನೇ ಎಸೆತಕ್ಕೂ ಮುನ್ನ ನನ್ನ ಬಳಿ ಬಂದು, "ರಸ್ ಒಂದು ವೇಳೆ ಈ ಎಸೆತವನ್ನು ನೀವು ಬೀಟ್ ಮಾಡಿದರೆ, ನಾವು ರನ್ ಓಡೋಣವೇ ಎಂದು ಕೇಳಿದರು. ನಾನಾಗ, ಖಂಡಿತವಾಗಿಯೂ ಓಡೋಣವೆಂದು. ನಾನು ಆತನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದೇನೆ. ಅವರೊಬ್ಬ ಒಳ್ಳೆಯ ಫಿನಿಶರ್ ಎಂದು ರಸೆಲ್ ಹೇಳಿದ್ದಾರೆ.
ಇನ್ನು ಇದೇ ವೇಳೆ ರಸೆಲ್, ಇದಲ್ಲದೇ ಬೇರೆ ಯಾವುದೇ ಪಂದ್ಯವಾಗಿದ್ದರೂ, ಅಥವಾ ಬೇರೆ ಯಾರೇ ಬ್ಯಾಟರ್ ಜತೆಗಿದ್ದರೂ, ನಾನು ರನ್ ಗಳಿಸಲು ಓಡುತ್ತಿದ್ದೆ ಎಂದು ನನಗನಿಸುತ್ತಿಲ್ಲ ಎಂದು ರಸೆಲ್, ರಿಂಕು ಮೇಲೆ ತಮ್ಮ ವಿಶ್ವಾಸ ಎಷ್ಟಿದೆ ಎನ್ನುವುದನ್ನು ಮಾಧ್ಯಮದವರ ಮುಂದೆ ಅನಾವರಣ ಮಾಡಿದ್ದಾರೆ.
" ನಾನು ಹೀಗೆ ಖಂಡಿತವಾಗಿಯೂ ಮಾಡಿಲ್ಲ. ನಾನು ನನ್ನ ಮೇಲೆ ವಿಶ್ವಾಸವಿಟ್ಟು, ಕೊನೆಯ ಎಸೆತವನ್ನು ಎದುರಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಯತ್ನಿಸುತ್ತಿದ್ದೆ. ಆದರೆ ನನ್ನ ಜತೆ ರಿಂಕು ಇದ್ದಿದ್ದರಿಂದ, ಅದರಲ್ಲೂ ಅವರು ಕಳೆದ ಕೆಲ ಪಂದ್ಯಗಳಲ್ಲಿ ಒಳ್ಳೆಯ ಮ್ಯಾಚ್ ಫಿನಿಶ್ ಮಾಡುತ್ತಿದ್ದರಿಂದಾಗಿ ನಾವು ರನ್ ಓಡಲು ಪ್ರಯತ್ನಿಸಿದೆವು. ಅವರೊಬ್ಬ ನಿರ್ಭೀತ ಬ್ಯಾಟರ್. ನೀವು ಎಲ್ಲೇ ಚೆಂಡನ್ನು ಹಾಕಿದರೂ, ಅದನ್ನು ಕೌಂಟರ್ ಮಾಡುವ ಪ್ರತಿಭೆ ರಿಂಕು ಬಳಿ ಇದೆ ಎಂದು ರಸೆಲ್ ಹೇಳಿದ್ದಾರೆ.
ಆ್ಯಂಡ್ರೆ ರಸೆಲ್, 19ನೇ ಓವರ್‌ನಲ್ಲಿ ಸ್ಯಾಮ್ ಕರ್ರನ್ ಬೌಲಿಂಗ್‌ನಲ್ಲಿ 3 ಸಿಕ್ಸರ್ ಬಾರಿಸುವ ಮೂಲಕ ಕೆಕೆಆರ್ ಗೆಲುವನ್ನು ಸುಲಭ ಮಾಡಿಕೊಟ್ಟರು. ಹೀಗಿದ್ದೂ ಕೊನೆಯ ಓವರ್‌ನಲ್ಲಿ ಆರ್ಶದೀಪ್ ಸಿಂಗ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ಯದರು. ಆದರೆ ಕೊನೆಯ ಎಸೆತದಲ್ಲಿ ರಿಂಕು ಮತ್ತೆ ಯಶಸ್ವಿಯಾಗಿ ಕೆಕೆಆರ್‌ಗೆ ಗೆಲುವು ತಂದಿತ್ತರು.
