* ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ನಿತೀಶ್ ರಾಣಾ ನೇಮಕ* ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಲಿರುವ ರಾಣಾ* 2018ರಿಂದಲೂ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಡೆಲ್ಲಿ ಮೂಲದ ಎಡಗೈ ಬ್ಯಾಟರ್ 

ಕೋಲ್ಕತಾ(ಮಾ.28): ಬೆನ್ನು ನೋವಿನ ಸಮಸ್ಯೆಯಿಂದಾಗಿ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಶ್ರೇಯಸ್ ಅಯ್ಯರ್ ಹೊರಬೀಳುವ ಸಾಧ್ಯತೆಯಿದ್ದು, ಅವರ ಬದಲಿಗೆ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಎಡಗೈ ಬ್ಯಾಟರ್ ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ನಿತೀಶ್ ರಾಣಾ 2018ರಿಂದಲೂ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದು, ಕೆಕೆಅರ್ ಪರ ಒಟ್ಟು ಐಪಿಎಲ್‌ನಲ್ಲಿ 74 ಪಂದ್ಯಗಳನ್ನಾಡಿ 1744 ರನ್ ಗಳಿಸಿದ್ದಾರೆ. 

ಸದ್ಯದ ಕೆಲ ಮಾಧ್ಯಮ ಮೂಲಗಳ ಪ್ರಕಾರ ಶ್ರೇಯಸ್ ಅಯ್ಯರ್, 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲಾರ್ಧದವರೆಗೂ ಆಯ್ಕೆಗೆ ಅಲಭ್ಯರಾಗುವುದು ಬಹುತೇಕ ದಟ್ಟವಾಗಿದೆ. ಹೀಗಾಗಿ ಕೆಕೆಆರ್‌ ಫ್ರಾಂಚೈಸಿಯು ಶ್ರೇಯಸ್ ಅಯ್ಯರ್ ಬದಲಿಗೆ ಅನುಭವಿ ಕ್ರಿಕೆಟಿಗ ನಿತೀಶ್ ರಾಣಾಗೆ ತಂಡದ ನಾಯಕತ್ವ ಪಟ್ಟ ಕಟ್ಟಿದೆ. 

16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅಲಭ್ಯರಾಗುವುದು ಖಚಿತವಾಗುತ್ತಿದ್ದಂತೆಯೇ ಕೆಕೆಆರ್ ನಾಯಕತ್ವ ಪಡೆಯಲು ನಿತೀಶ್ ರಾಣಾ ಹಾಗೂ ವೆಸ್ಟ್‌ ಇಂಡೀಸ್ ಮಿಸ್ಟ್ರಿ ಸ್ಪಿನ್ನರ್ ಸುನಿಲ್ ನರೈನ್ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಸುನಿಲ್ ನರೈನ್‌ 2012ರಿಂದಲೂ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಇಂಟರ್‌ನ್ಯಾಷನಲ್‌ ಲೀಗ್ ಟಿ20 ಟೂರ್ನಿಯಲ್ಲಿ ಸುನಿಲ್ ನರೈನ್‌ ಅಬುಧಾಬಿ ನೈಟ್ ರೈಡರ್ಸ್‌ ತಂಡವನ್ನು ನಾಯಕರಾಗಿ ಮುನ್ನಡೆಸಿ ನಿರಾಸೆ ಅನುಭವಿಸಿದ್ದರು. 6 ತಂಡಗಳು ಪಾಲ್ಗೊಂಡಿದ್ದ ಈ ಟೂರ್ನಿಯಲ್ಲಿ ಅಬುಧಾಬಿ ನೈಟ್ ರೈಡರ್ಸ್‌ ತಂಡವು 8 ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿತ್ತು.

Scroll to load tweet…

ಇನ್ನೊಂದೆಡೆ ನಿತೀಶ್ ರಾಣಾ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತನ್ನ ತವರು ತಂಡವಾದ ಡೆಲ್ಲಿ ತಂಡವನ್ನು 12 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ಪೈಕಿ ಡೆಲ್ಲಿ ತಂಡವು 8 ಗೆಲುವು ಹಾಗೂ 4 ಸೋಲು ಅನುಭವಿಸಿತ್ತು. ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿತೀಶ್ ರಾಣಾ, ಕೆಕೆಆರ್ ಪರ ಶ್ರೇಯಸ್ ಅಯ್ಯರ್ ಬಳಿಕ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಕೆಕೆಆರ್ ಪರ ಕಳೆದ ಆವೃತ್ತಿಯಲ್ಲಿ ನಿತೀಶ್ ರಾಣಾ 143.82ರ ಸ್ಟ್ರೈಕ್‌ರೇಟ್‌ನಲ್ಲಿ 361 ರನ್ ಸಿಡಿಸಿದ್ದರು. ಹೀಗಿದ್ದೂ ಕೋಲ್ಕತಾ ನೈಟ್ ರೈಡರ್ಸ್ ತಂಡವು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 6 ಗೆಲುವು ಹಾಗೂ 8 ಸೋಲುಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್‌ ಫೇಮ್ ಗೌರವ, ನೂತನ ಜೆರ್ಸಿ ಅನಾವರಣ ಮಾಡಿದ ಕೊಹ್ಲಿ- ಫಾಫ್ ಜೋಡಿ

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿತೀಶ್ ರಾಣಾ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಹೊಸ ಹುರುಪಿನೊಂದಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ. ಕೆಕೆಆರ್ ತಂಡದ ನಾಯಕರಾಗಿ ನಿತೀಶ್ ರಾಣಾ ಕಾಣಿಸಿಕೊಂಡರೆ, ಹೆಡ್ ಕೋಚ್ ಆಗಿ ಬ್ರೆಂಡನ್ ಮೆಕ್ಕಲಂ ಬದಲಿಗೆ ಚಂದ್ರಕಾಂತ್ ಪಂಡಿತ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಕೆಕೆಆರ್ ತಂಡದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಕಾರ್ಯನಿರ್ವಹಿಸಲಿದ್ದಾರೆ.