ವಿರಾಟ್ ಔಟಾಗಿದ್ದನ್ನು ಸಂಭ್ರಮಿಸಿದ ಆಫ್ಘಾನಿ ಕ್ರಿಕೆಟಿಗ ನವೀನ್ ಉಲ್-ಹಕ್..! ನೆಟ್ಟಿಗರ ಪ್ರತಿಕ್ರಿಯೆ ವೈರಲ್
ಮುಂದುವರೆದ ವಿರಾಟ್ ಕೊಹ್ಲಿ-ನವೀನ್ ಉಲ್ ಹಕ್ ಜಟಾಪಟಿ
ವಿರಾಟ್ ವಿಕೆಟ್ ಪತನವನ್ನು ಸಂಭ್ರಮಿಸಿದ ಆಫ್ಘಾನ್ ಕ್ರಿಕೆಟಿಗ
ಸೋಷಿಯಲ್ ಮೀಡಿಯಾದಲ್ಲಿ ನವೀನ್ ಪೋಸ್ಟ್ ವೈರಲ್
ಮುಂಬೈ(ಮೇ.10): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಮುಂಬೈ ಇಂಡಿಯನ್ಸ್ ತಂಡವು 6 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಮುಂಬೈ ಎದುರು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಲ್ಲೇ ಫಾರ್ಮ್‌ನಲ್ಲಿದ್ದಂತ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಜೇಸನ್ ಬೆಹನ್‌ಡ್ರಾಫ್ ಬೌಲಿಂಗ್‌ನಲ್ಲಿ ಇಶಾನ್ ಕಿಶನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನಿಂಗ್ಸ್‌ನ ಮೊದಲ ಓವರ್‌ನ 5ನೇ ಎಸೆತದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪತನವಾಗಿದ್ದು, ಆರ್‌ಸಿಬಿ ಅಭಿಮಾನಿಗಳು ತಬ್ಬಿಬ್ಬಾಗುವಂತೆ ಮಾಡಿತು.
ಇನ್ನು ವಿರಾಟ್ ಕೊಹ್ಲಿ, ವಿಕೆಟ್ ಪತನವಾಗುತ್ತಿದ್ದಂತೆಯೇ ಆಫ್ಘಾನಿಸ್ತಾನ ಮೂಲದ ಲಖನೌ ಸೂಪರ್ ಜೈಂಟ್ಸ್ ಬೌಲರ್ ನವೀನ್ ಉಲ್-ಹಕ್ ಹಿರಿ-ಹಿರಿ ಹಿಗ್ಗಿದ್ದಾರೆ. ಟಿವಿಯಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿ ಪೆವಿಲಿಯನ್‌ಗೆ ವಾಪಾಸ್ಸಾಗುತ್ತಿರುವ ಫೋಟೋದೊಂದಿಗೆ ಮಾವಿನ ಹಣ್ಣಿನ ಫೋಟೋ ಹಾಕಿ, ಸಿಹಿ ಮಾವಿನ ಹಣ್ಣುಗಳು ಎಂದು ಬರೆದು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಇದಾದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕುವ ಮೂಲಕ ಮುಂಬೈಗೆ ಕಠಿಣ ಗುರಿ ನೀಡಿತ್ತು. ಇದರ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಹಾಗೂ ನಿಹಾಲ್ ವಧೇರಾ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ನೀನು ನನ್ನ ಕಾಲು ಧೂಳಿಗೆ ಸಮ: ಚರ್ಚೆಗೆ ಗ್ರಾಸವಾದ ವಿರಾಟ್ ಕೊಹ್ಲಿ ವರ್ತನೆ, ವಿಡಿಯೋ ವೈರಲ್
ಇದರ ಬೆನ್ನಲ್ಲೆ ನವೀನ್ ಉಲ್-ಹಕ್ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಸ್ಟೋರಿ ಹಂಚಿಕೊಂಡಿದ್ದು, "ಎರಡನೇ ಸುತ್ತಿನದ್ದು ಇವು. ನಾನು ತಿಂದ ಅತ್ಯುತ್ತಮ ಮಾವಿನ ಹಣ್ಣುಗಳಿವು. ಧನ್ಯವಾದಗಳು ಧವಲ್ ಅರ್ಚನಾ ಪರಾಬ್ ಬಾಯ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನವೀನ್ ಉಲ್ ಹಕ್ ಆರ್‌ಸಿಬಿ ಸೋಲನ್ನು ಸಂಭ್ರಮಿಸಿದ್ದಾರೆ.
ನವೀನ್ ಉಲ್ ಹಕ್ ಅವರ ಪೋಸ್ಟ್‌ಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ, ನವೀನ್ ಉಲ್ ಹಕ್ ಅವರ ಮುಸುಕಿನ ಗುದ್ದಾಟ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.
ಲಖನೌ ಸೂಪರ್ ಜೈಂಟ್ಸ್ ಹಾಗೂ ಆರ್‌ಸಿಬಿ ನಡುವೆ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಮೈದಾನದಲ್ಲೇ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ನವೀನ್ ಉಲ್ ಹಕ್ ಅವರನ್ನು ತಮ್ಮ ಕಾಲು ಧೂಳಿಗೆ ಸಮ ಎನ್ನುವ ಅರ್ಥದಲ್ಲಿ ಸನ್ನೆ ಮಾಡಿದ್ದರು.
ಇನ್ನು ಪಂದ್ಯ ಮುಕ್ತಾಯದ ಬಳಿಕ ನವೀನ್ ಉಲ್ ಹಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ ಸ್ಟೋರಿ, ವಿರಾಟ್ ಕೊಹ್ಲಿಯನ್ನೇ ಗುರಿ ಮಾಡಿ ಹಾಕಿದಂತಿದೆ. "ನೀನು ಯಾವುದನ್ನು ಪಡೆಯಲು ಅರ್ಹನೋ ಅದನ್ನೇ ಪಡೆಯುತ್ತೀಯ, ಅದೇ ನಿಯಮ, ಅದು ಹಾಗೆಯೇ ನಡೆಯುತ್ತದೆ" ಎಂದು ನವೀನ್ ಉಲ್ ಹಕ್ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್ ಮಾಡಿದ್ದರು.