Asianet Suvarna News Asianet Suvarna News

ಬೌಲರ್ಸ್‌ಗೆ ವಾರ್ನಿಂಗ್ ಕೊಟ್ಟ ಧೋನಿ! ಸುಧಾರಿಸಿಕೊಳ್ಳಿ ಇಲ್ಲವೇ ಬೇರೆ ನಾಯಕನಡಿ ಆಡಲು ರೆಡಿಯಾಗಿ ಅಂದಿದ್ದೇಕೆ ಮಹಿ..?

ಲಖನೌ ಸೂಪರ್ ಜೈಂಟ್ಸ್ ಎದುರು ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್‌
ಆದರೆ ಬೌಲಿಂಗ್‌ನಲ್ಲಿ ಹೆಚ್ಚುವರಿ ರನ್ ಬಿಟ್ಟುಕೊಟ್ಟ ಸಿಎಸ್‌ಕೆ ಬೌಲರ್ಸ್‌
ಸಿಎಸ್‌ಕೆ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ ನಾಯಕ ಎಂ ಎಸ್ ಧೋನಿ

IPL 2023 MS Dhoni Warns Chennai Super Kings Bowlers Improve Or Play Under New Captain After Lucknow Super Giants Win kvn
Author
First Published Apr 4, 2023, 2:44 PM IST

ಚೆನ್ನೈ(ಏ.04): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತವರಿನಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ  ಲಖನೌ ಸೂಪರ್ ಜೈಂಟ್ಸ್ವ ಎದುರಿನ ಪಂದ್ಯದಲ್ಲಿ ಸಿಎಸ್‌ಕೆ ತಂಡವು 12 ರನ್ ರೋಚಕ ಜಯ ಸಾಧಿಸಿದೆ. ಇನ್ನು ಇದೇ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, ಐಪಿಎಲ್‌ನಲ್ಲಿ 500 ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.  

ಲಖನೌ ಸೂಪರ್ ಜೈಂಟ್ಸ್‌ ಎದುರಿನ ಪಂದ್ಯದಲ್ಲಿ ಕೊನೆಯ ಓವರ್‌ ಇದ್ದಾಗ ಕ್ರೀಸ್‌ಗಿಳಿದ ಧೋನಿ ತಾವೆದುರಿಸಿದ ಕೇವಲ 3 ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಅಂತಿಮವಾಗಿ ಲಖನೌ ಎದುರು ಸಿಎಸ್‌ಕೆ ತಂಡವು 12 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಜಯದ ಸಿಹಿ ಸವಿದಿದೆ. ಆದರೆ ಇದೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬೌಲರ್‌ಗಳು 13 ವೈಡ್ ಹಾಗೂ 3 ನೋಬಾಲ್ ಸಹಿತ ಅಶಿಸ್ತಿನ ದಾಳಿ ನಡೆಸಿದರು. ಇದು ಧೋನಿ ಕೊಂಚ ಸಿಟ್ಟಾಗುವಂತೆ ಮಾಡಿದೆ.  

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನೀಡಿದ್ದ 218 ರನ್‌ ಸವಾಲಿನ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್‌ ತಂಡವು, ಕೈಲ್ ಮೇಯರ್ಸ್‌ ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 205 ರನ್ ಗಳಿಸಲಷ್ಟೇ ಶಕ್ತವಾಯಿತು. 

IPL 2023 ಸೋಲಿನ ಬೆನ್ನಲ್ಲೇ ಕೆಕೆಆರ್‌ಗೆ ಮತ್ತೊಂದು ಶಾಕ್; ಸ್ಟಾರ್ ಆಲ್ರೌಂಡರ್‌ ಐಪಿಎಲ್ ಟೂರ್ನಿಯಿಂದ ಔಟ್..!

ಇನ್ನು ಲಖನೌ ಸೂಪರ್ ಜೈಂಟ್ಸ್‌ ಎದುರಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ಎಂ ಎಸ್ ಧೋನಿ, ವೇಗದ ಬೌಲಿಂಗ್‌ ವಿಭಾಗದಲ್ಲಿ ನಾವು ಸಾಕಷ್ಟು ಸುಧಾರಣೆ ಕಾಣಬೇಕಿದೆ. ಪರಿಸ್ಥಿತಿಗನುಗುಣವಾಗಿ ನಮ್ಮ ಬೌಲರ್‌ಗಳು ಬೌಲಿಂಗ್ ಮಾಡಬೇಕಿದೆ. ಫ್ಲಾಟ್‌ ಫಿಚ್ ಆಗಿದ್ದರೂ ಸಹಾ ಬ್ಯಾಟರ್‌ಗಳು ಫೀಲ್ಡರ್ ತಲೆ ಮೇಲೆ ಚೆಂಡನ್ನು ಬಾರಿಸುವಂತೆ ಮಾಡಬೇಕು. ಇನ್ನು ಮುಂದೆ ನಮ್ಮ ಬೌಲರ್‌ಗಳು ಯಾವುದೇ ನೋಬಾಲ್ ಹಾಕಬಾರದು ಹಾಗೂ ಕಡಿಮೆ ವೈಡ್‌ಗಳನ್ನು ಹಾಕಬೇಕು. ನಾವು ಬೌಲಿಂಗ್‌ನಲ್ಲಿ ಸಾಕಷ್ಟು ಎಕ್ಸ್‌ಟ್ರಾ ರನ್ ನೀಡಿದೆವು. ಈ ಎಕ್ಸ್‌ಟ್ರಾ ಎಸೆತಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ಪೆನಾಲ್ಟಿ ರೂಪದಲ್ಲಿ ಅವರು ಬೇರೆ ನಾಯಕನಡಿಯಲ್ಲಿ ಆಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಧೋನಿ ನೀಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿಯವರೆಗೆ ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದ್ದು, ಈಗಾಗಲೇ 3 ನೋಬಾಲ್, 13 ವೈಡ್ ಹಾಗೂ ಎರಡು ಲೆಗ್ ಬೈ ನೀಡಿದೆ. 

ಯಾವುದೇ ತಂಡವು ಎರಡು ಬಾರಿ ನಿಗದಿತ ಸಮಯದಲ್ಲಿ ಬೌಲಿಂಗ್‌ ಮಾಡದೇ ಹೋದಲ್ಲಿ,  ಮೊದಲ ತಪ್ಪಿಗೆ ನಾಯಕನಿಗೆ 12 ಲಕ್ಷ, ಎರಡನೇ ಬಾರಿತ ತಪ್ಪಿಗೆ 24 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ತಂಡವು ಮೂರನೇ ಬಾರಿಗೆ ನಿಗದಿತ ಸಮಯದಲ್ಲಿ ಬೌಲಿಂಗ್‌ ಮಾಡದೇ ಹೋದಲ್ಲಿ ನಾಯಕನಿಗೆ 30 ಲಕ್ಷ ರುಪಾಯಿ ಹಾಗೂ ಒಂದು ಪಂದ್ಯದ ಮಟ್ಟಿಗೆ ನಿಷೇಧ ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಉಳಿದ ಆಟಗಾರರಿಗೆ ಪಂದ್ಯದ ಸಂಭಾವನೆಯ 50% ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಸಿಎಸ್‌ಕೆ ಬೌಲರ್‌ಗಳಿಗೆ ಧೋನಿ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios