Asianet Suvarna News Asianet Suvarna News

IPL 2023 ಸೋಲಿನ ಬೆನ್ನಲ್ಲೇ ಕೆಕೆಆರ್‌ಗೆ ಮತ್ತೊಂದು ಶಾಕ್; ಸ್ಟಾರ್ ಆಲ್ರೌಂಡರ್‌ ಐಪಿಎಲ್ ಟೂರ್ನಿಯಿಂದ ಔಟ್..!

* 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡಕ್ಕೆ ದೊಡ್ಡ ಶಾಕ್‌
* ಬಾಂಗ್ಲಾ ಆಲ್ರೌಂಡರ್ ಶಕೀಬ್ ಅಲ್ ಹಸನ್‌, ಐಪಿಎಲ್ ಟೂರ್ನಿಗೆ ಅಲಭ್ಯ
* ಈಗಾಗಲೇ ಮೊದಲ ಪಂದ್ಯ ಸೋತು ಆಘಾತದಲ್ಲಿರುವ ನಿತೀಶ್ ರಾಣಾ ಪಡೆ

IPL 2023 KKR star Shakib Al Hasan opts out of T20 tournament due to availability issues kvn
Author
First Published Apr 4, 2023, 2:01 PM IST

ಢಾಕಾ(ಏ.04): ಕೋಲ್ಕತಾ ನೈಟ್ ರೈಡರ್ಸ್ ಖರೀದಿಸಿದ್ದ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹಿಂದೆ ಸರಿದಿದ್ದಾರೆ. ಶಕೀಬ್ ಅವರು ಈ ವರ್ಷದ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಆರಂಭಿಕ ಪಂದ್ಯಗಳಿಗೆ  ಅಂತಾರಾಷ್ಟ್ರೀಯ ಕರ್ತವ್ಯಗಳು ಮತ್ತು ವೈಯಕ್ತಿಕ ಸಮಸ್ಯೆಗಳಿಂದಾಗಿ ಮೊದಲೇ ಅಲಭ್ಯರಾಗಿದ್ದರು. ಇದೀಗ ಅಧಿಕೃತವಾಗಿ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಬಾಂಗ್ಲಾ ನಾಯಕ ಹೊರಬಿದ್ದಿದ್ದಾರೆ. ಮೊದಲೇ ತಾನಾಡಿದ ಮೊದಲ ಪಂದ್ಯದಲ್ಲಿ ಸೋಲುಂಡು ಆಘಾತ ಅನುಭವಿಸಿದ್ದ ಕೆಕೆಆರ್ ತಂಡಕ್ಕೆ ಇದೀಗ ಮತ್ತೊಂದು ಶಾಕ್‌ ಎದುರಾಗಿದೆ. 

ಶನಿವಾರ ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಬಾಂಗ್ಲಾದೇಶದ ಟಿ20 ನಾಯಕ  KKR ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.ಆದರೆ  36 ವರ್ಷದ ಶಕೀಬ್‌ರನ್ನು ಏಪ್ರಿಲ್ 4 ರಿಂದ ನಡೆಯಲಿರುವ ಬಾಂಗ್ಲಾದೇಶ ಮತ್ತು ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ಗೆ ಬಾಂಗ್ಲಾ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಶಕೀಬ್, ಇದೀಗ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ  1.5 ಕೋಟಿ ರೂ  ಮೂಲ ಬೆಲೆಗೆ ಕೊಲ್ಕತ್ತಾ ಫ್ರಾಂಚೈಸಿಯು ಬಾಂಗ್ಲಾ ಅನುಭವಿ ಆಲ್ರೌಂಡರ್‌ ಶಕೀಬ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಶಕೀಬ್ ಅಲ್‌ ಹಸನ್ ಅವರನ್ನು ಕೆಕೆಆರ್‌ ಫ್ರಾಂಚೈಸಿಯೇ ಕೈಬಿಟ್ಟಿದೆ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಕೆಕೆಆರ್ ಮ್ಯಾನೇಜ್‌ಮೆಂಟ್‌, ಇದು ಶುದ್ದ ಸುಳ್ಳು. ಆಟಗಾರನನ್ನು ಒಮ್ಮೆ ಹರಾಜಿನಲ್ಲಿ ಖರೀದಿಸಿದರೆ, ಆ ಬಳಿಕ ಫ್ರಾಂಚೈಸಿಯು ತಂಡದಿಂದ ಕೈಬಿಡುವುದಿಲ್ಲ. ಟೂರ್ನಿ ಮುಗಿದ ಬಳಿಕವಷ್ಟೇ ತಾವು ಖರೀದಿಸಿದ ಆಟಗಾರರನ್ನು ಕೈಬಿಡಲು ಸಾಧ್ಯ ಎಂದು ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೆಕೆಆರ್ ತಂಡವು ತಿಳಿಸಿದೆ.

ಈ ಐಪಿಎಲ್‌ನಲ್ಲಿ ಈಗಾಗಲೇ ಫಿಟ್ನೆಸ್‌ ಸಮಸ್ಯೆಯಿಂದಾಗಿ ತಮ್ಮ ನಾಯಕ ಶ್ರೇಯಸ್ ಅಯ್ಯರ್ ರವರನ್ನು ಸೇವೆಯನ್ನು ಕಳೆದುಕೊಂಡಿದ್ದ  ಕೆಕೆಆರ್ ತಂಡವನ್ನು ನಿತೀಶ್ ರಾಣಾ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ  ಕೊಲ್ಕತಾ ನೈಟ್ ರೈಡರ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಶಕೀಬ್ ರವರನ್ನು ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇನ್ನು ಬಾಂಗ್ಲಾದೇಶ ತಂಡದ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಲಿಟನ್ ದಾಸ್ ರವರನ್ನು ಸಹ ಕೆಕೆಆರ್ ತಂಡ ಹರಾಜಿನಲ್ಲಿ ಖರೀದಿಸಿತ್ತು. ಅವರು ತಂಡವನ್ನು ಮೇ ತಿಂಗಳಾರಂಭದಲ್ಲಿ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ಕ್ಯಾಪ್ಟನ್ ಕೂಲ್ ಧೋನಿ ಬ್ಯಾಟಿಂಗ್‌ಗಿಳಿಯುತ್ತಿದ್ದಂತೆಯೇ ದಾಖಲೆಯ ಮಂದಿ ಜಿಯೋದಲ್ಲಿ ಪಂದ್ಯ ವೀಕ್ಷಣೆ..!

ಮುಂಬರುವ  ಮೇ ತಿಂಗಳಲ್ಲಿ ಬಾಂಗ್ಲಾದೇಶ ತಂಡ ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿನ್ನಾಡಲಿದೆ. ಈಗಾಗಲೇ ಕೆಲವು ತಿಂಗಳಿಂದ ಅಪಾರ ಪ್ರಮಾಣದ ಕ್ರಿಕೆಟ್ ಆಡಿದ್ದ ಶಕೀಬ್ ಫಿಟ್ನೆಸ್‌ ಮೇಲೆ ನಿಗಾ ವಹಿಸಿದ್ದಾರೆ. ಈ ಕಾರಣಕ್ಕಾಗಿಯೇ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಶಕೀಬ್ ಅವರ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡ ಅವರ ಬದಲಿ ಆಟಗಾರನ ರೂಪದಲ್ಲಿ  ಶ್ರೀಲಂಕಾ ತಂಡದ ನಾಯಕ ಆಲ್ರೌಂಡರ್ ದಸುನ್ ಸನಕ ರವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದಲ್ಲದೇ ಆಸ್ಟ್ರೇಲಿಯಾ ಮೂಲದ ವೇಗಿಗಳಾದ ರಿಲೇ ಮೆರೆಡಿತ್ ಹಾಗೂ ಲ್ಯಾನ್ಸ್ ಮೊರಿಸ್ ಕೂಡ ರೇಸ್ ನಲ್ಲಿದ್ದಾರೆ.

ನೈಟ್ ರೈಡರ್ಸ್ ಇಲ್ಲಿಯವರೆಗೆ ಒಂದು ಪಂದ್ಯವನ್ನಾಡಿದ್ದು, ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಳೆ ಬಂದ ಕಾರಣ ಡಕ್ ವರ್ತ್ ಲೂಯಿಸ್ ನಿಯಮದನ್ವಯ  7 ರನ್ ಸೋಲನ್ನು ಅನುಭವಿಸಿತ್ತು. ಕೆಕೆಆರ್ ತಮ್ಮ ಮುಂದಿನ ಪಂದ್ಯವನ್ನು ಗುರುವಾರ ತವರಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದ್ದು, ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ.

Follow Us:
Download App:
  • android
  • ios