ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ದೊಡ್ಡ ಆಘಾತಟೂರ್ನಿಯನ್ನು ಅರ್ಧದಲ್ಲೇ ತೊರೆದ ಮಾರ್ಕ್‌ ವುಡ್‌ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಲಖನೌ

ಲಖನೌ(ಮೇ.08): ಗಾಯದ ಸಮಸ್ಯೆ ಅನುಭವಿಸುತ್ತಿರುವ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಇಂಗ್ಲೆಂಡ್ ಮೂಲದ ಮಾರಕ ವೇಗಿ ಮಾರ್ಕ್‌ ವುಡ್‌ ವೈಯುಕ್ತಿಕ ಕಾರಣದಿಂದಾಗಿ ತವರಿಗೆ ವಾಪಾಸ್ಸಾಗಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ಎದುರು ಸೋತು ಕಂಗಾಲಾಗಿರುವ ಲಖನೌ ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಯಿದೆ. 

ಹೌದು, ಮಾರ್ಕ್‌ ವುಡ್‌ ಅವರ ಪತ್ನಿ ಗರ್ಭಿಣಿಯಾಗಿದ್ದು, ಇದೀಗ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗುಜರಾತ್ ಟೈಟಾನ್ಸ ಎದುರಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಸೋಲು ಅನುಭವಿಸುತ್ತಿದ್ದಂತೆಯೇ ಫ್ರಾಂಚೈಸಿಯು, ಮಾರ್ಕ್‌ ವುಡ್‌ ಅಲಭ್ಯತೆಯ ವಿಚಾರವನ್ನು ಖಚಿತಪಡಿಸಿದೆ. ಈ ಕುರಿತಂತೆ ಲಖನೌ ತಂಡವು ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಮಾರ್ಕ್‌ವುಡ್‌, ಟೂರ್ನಿಯ ಅಂತಿಮ ಹಂತದಲ್ಲಿ ತಾವು ತಂಡ ಕೂಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರಕ ವೇಗಿ ಮಾರ್ಕ್‌ ವುಡ್ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಭರ್ಜರಿ ಆರಂಭವನ್ನೇ ಪಡೆದಿದ್ದರು. ಆದರೆ ಅಸ್ಥಿರ ಪ್ರದರ್ಶನ ಹಾಗೂ ತಂಡದ ಕಾಂಬಿನೇಷನ್ ದೃಷ್ಟಿಯಿಂದ ಮಾರ್ಕ್‌ ವುಡ್‌ ಲಖನೌ ಪರ ಕೇವಲ 5 ಪಂದ್ಯಗಳನ್ನು ಆಡಲಷ್ಟೇ ಶಕ್ತರಾದರು. ತಾವೀಗ ತಂಡ ತೊರೆಯುತ್ತಿರುವುದಕ್ಕೆ ನಿಜಕ್ಕೂ ಬೇಸರವಾಗುತ್ತಿದೆ. ಆದರೆ ಒಳ್ಳೆಯ ಕಾರಣಕ್ಕಾಗಿ ತಾವು ತಂಡವನ್ನು ಬಿಟ್ಟು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

Scroll to load tweet…

"ನನ್ನ ಮಗಳ ಹುಟ್ಟಿದ್ದರಿಂದ, ಒಳ್ಳೆಯ ಕಾರಣಕ್ಕಾಗಿ ನಾನು ತವರಿಗೆ ಹೋಗುತ್ತಿದ್ದೇನೆ. ನಾನು ಆದಷ್ಟು ಬೇಗ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದೇನೆ, ನೀವು ನನ್ನನ್ನು ಮತ್ತೆ ನೋಡಲಿದ್ದೀರಿ. ನಾನು ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗದ್ದಕ್ಕೆ ಕ್ಷಮೆಯಿರಲಿ. ನಾನು ಕೆಲವು ವಿಕೆಟ್ ಕಬಳಿಸಿದ್ದೇನೆ. ಮತ್ತೆ ಇನ್ನು ಚೆನ್ನಾಗಿ ಆಡುವ ವಿಶ್ವಾಸವಿದೆ ಎಂದು ಮಾರ್ಕ್‌ ವುಡ್ ಹೇಳಿದ್ದಾರೆ.

ICC ODI World Cup: 'ಭಾರತಕ್ಕೆ ಬರ್ತೀವಿ, ಆದ್ರೆ ಒಂದು ಕಂಡೀಷನ್' ಎಂದ ಪಾಕಿಸ್ತಾನ..!

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಾರ್ಕ್‌ ವುಡ್ 5 ಪಂದ್ಯಗಳನ್ನಾಡಿ 11 ವಿಕೆಟ್ ಕಬಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಎದುರು ತಾನಾಡಿದ ಮೊದಲ ಪಂದ್ಯದಲ್ಲೇ ಮಾರ್ಕ್ ವುಡ್‌ ಮಿಂಚಿನ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾರ್ಕ್‌ ವುಡ್‌ ಡೆಲ್ಲಿ ಕ್ಯಾಪಿಟಲ್ಸ್ ಎದುರು 4 ಓವರ್‌ ಬೌಲಿಂಗ್ ಮಾಡಿ ಕೇವಲ 14 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು.

ಭಾನುವಾರ ನಡೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟಾನ್ಸ್ ಎದುರು ಆಘಾತಕಾರಿ ಸೋಲು ಅನುಭವಿಸಿತ್ತು. ಸದ್ಯ ಲಖನೌ ಸೂಪರ್ ಜೈಂಟ್ಸ್ ತಂಡವು 11 ಪಂದ್ಯಗಳನ್ನಾಡಿ 11 ಅಂಕ ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.