ಏರಿಳಿತದ ಅಭಿಯಾನದಲ್ಲಿರುವ ಎರಡು ತಂಡಗಳಾದ ಕೋಲ್ಕತ ನೈಟ್‌ ರೈಡರ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಮುಖಾಮುಖಿಯಲ್ಲಿ ಕೆಕೆಆರ್‌ ತಂಡ ಗೆಲುವಿನ ಖುಷಿ ಕಂಡಿದೆ. ಅದರೊಂದಿಗೆ ಹಾಲಿ ಐಪಿಎಲ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ಮೂರು ತಂಡಗಳು 6 ಸೋಲುಗಳನ್ನು ಕಂಡಂತಾಗಿದೆ. 

ಹೈದರಾಬಾದ್ (ಮೇ.4): ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿದ್ದ ಪಂದ್ಯದಲ್ಲಿ ಗೆಲುವಿನ ನಗು ಬೀರಲು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಯಶಸ್ವಿಯಾಗಿದೆ. 172 ರನ್‌ಗಳ ಸವಾಲನ್ನು ಬೆನ್ನಟ್ಟಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಹೋರಾಟದ ಆಟವಾಡಿದ ಹೊರತಾಗಿಯೂ ಕೆಕೆಆರ್‌ ವಿರುದ್ಧ 5 ರನ್‌ಗಳ ಸೋಲು ಕಂಡಿತು. ಇದು ಲೀಗ್‌ನಲ್ಲಿ ಸನ್‌ರೈಸರ್ಸ್‌ ತಂಡಕ್ಕೆ 6ನೇ ಸೋಲಾಗಿದೆ. ಆ ಮೂಲಕ ಹಾಲಿ ಐಪಿಎಲ್‌ನಲ್ಲಿ ಏಳು ಸೋಲು ಕಂಡ ಮೊದಲ ತಂಡ ಸನ್‌ರೈಸರ್ಸ್‌. ಸನ್‌ರೈಸರಸ್‌ ತಂಡದ ಸೋಲಿನೊಂದಿಗೆ ಹಾಲಿ ಐಪಿಎಲ್‌ನಲ್ಲಿ ಕೊನೆಯ ಮೂರು ಸ್ಥಾನಗಳಲ್ಲಿರುವ ತಂಡಗಳಾದ ಕೆಕೆಆರ್‌, ಸನ್‌ರೈಸರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಆಡಿದ 9 ಪಂದ್ಯಗಳ ಪೈಕಿ 6ರಲ್ಲಿ ಸೋಲು ಕಂಡಂತಾಗಿದ್ದು, ಪ್ಲೇ ಆಫ್‌ ಹಾದಿ ಇನ್ನಷ್ಟು ಕಠಿಣವಾಗಿದೆ. ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ 9 ವಿಕೆಟ್‌ಗೆ 171 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಸನ್‌ರೈಸರ್ಸ್‌ ತಂಡ ಪಂದ್ಯದ ಬಹುತೇಕ ಅವಧಿಯಲ್ಲಿ ಗೆಲ್ಲುವ ಲಕ್ಷಣ ತೋರಿತಾದರೂ, ನಿಯಮಿತ ಅವಧಿಯಲ್ಲಿ ಕಳೆದುಕೊಂಡು ವಿಕೆಟ್‌ಗಳು ತಂಡಕ್ಕೆ ಹಿನ್ನಡೆ ನೀಡಿದರು. ಇದರಿಂದಾಗಿ 8 ವಿಕೆಟ್‌ಗೆ 166 ರನ್‌ ಬಾರಿಸಲಷ್ಟೇ ಶಕ್ತವಾಗಿ 5 ರನ್‌ ಸೋಲು ಕಂಡಿತು.

ಸನ್‌ರೈಸರ್ಸ್‌ ತಂಡ ಕೂಡ ಮೊದಲ ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ತಂಡದ ಮೊತ್ತ ಅರ್ಧಶತಕ ದಾಟಿದ್ದ ವೇಳೆಯಲ್ಲಿಯೇ ಅಭಿಷೇಕ್‌ ಶರ್ಮ್ (9), ಮಯಾಂಕ್‌ ಅಗರ್ವಾಲ್‌ (18), ರಾಹುಲ್‌ ತ್ರಿಪಾಠಿ (20) ಹಾಗೂ ಹ್ಯಾರಿ ಬ್ರೂಕ್‌ (0) ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 54 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಏಡೆನ್‌ ಮಾರ್ಕ್ರಮ್‌ (41ರನ್,‌ 40 ಎಸೆತ, 4 ಬೌಂಡರಿ) ಹಾಗೂ ಹೆನ್ರಿಚ್‌ ಕ್ಲಾಸೆನ್‌ (36ರನ್‌, 20 ಎಸೆತ, 1 ಬೌಂಡರಿ, 3 ಸಿಕ್ಸರ್‌) ಕೇವಲ 47 ಎಸೆತಗಳಲ್ಲಿ 70 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದರು. 15ನೇ ಓವರ್‌ನಲ್ಲಿ ಈ ಜೊತೆಯಾಟ ಬೇರ್ಪಟ್ಟ ಬಳಿಕ ಸನ್‌ರೈಸರ್ಸ್‌ ತಂಡದ ಗೆಲುವಿನ ಆಸೆ ಕೂಡ ಕಮರಿ ಹೋಯಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ವಿಕಟ್‌ ಕೀಪರ್ ಗುರ್ಬಾಜ್‌, ವೆಂಕಟೇಶ್‌ ಅಯ್ಯರ್‌ ಹಾಗೂ ಆರಂಭಿಕ ಆಟಗಾರ ಜೇಸನ್‌ ರಾಯ್‌ ಅವರನ್ನು 35 ರನ್‌ ಬಾರಿಸುವ ವೇಳೆಗಾಗಲೇ ಕಳೆದುಕೊಂಡಿದ್ದ ಕೆಕೆಆರ್‌ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ನಾಯಕ ನಿತೀಶ್‌ ರಾಣಾ (42ರನ್‌, 31 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ರಿಂಕಿ ಸಿಂಗ್‌ (46ರನ್‌, 35 ಎಸೆತ, 4 ಬೌಂಡರಿ, 1 ಸಿಕ್ಸರ್‌) ಆಧಾರವಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 40 ಎಸೆತಗಳಲ್ಲಿ ಎಚ್ಚರಿಕೆಯ 61 ರನ್‌ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಸಮೀಪಕ್ಕೆ ತಂದು ನಿಲ್ಲಿಸಿತು.

ಲಕ್ನೋನಲ್ಲಿ ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ಬೈದಾಡಿಕೊಂಡಿದ್ದೇನು..? ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ!

ಈ ಹಂತದಲ್ಲಿ ನಿತೀಶ್‌ ರಾಣಾ ಔಟಾದರೆ, ನಂತರ ಬಂದ ಆಂಡ್ರೆ ರಸೆಲ್‌ ತಾವು ಎದುರಿಸಿದ 15 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿಯಿದ್ದ 24 ರನ್‌ ಬಾರಿಸಿ ವಿಕೆಟ್‌ ನೀಡಿದರು. ಆ ಬಳಿಕ ಕೆಕೆಆರ್‌ ತಂಡಕ್ಕೆ ದೊಡ್ಡ ಜೊತೆಯಾಟ ಬರಲಿಲ್ಲ. ರಿಂಕು ಸಿಂಗ್‌ ಹಾಗೂ ಅನುಕೂಲ್‌ ರಾಯ್‌ ಕೊನೆಯಲ್ಲಿ ಕೆಲವೊಂದು ಶಾಟ್‌ಗಳನ್ನು ಬಾರಿಸಿದ್ದರಿಂದ ತಂಡ 9 ವಿಕೆಟ್‌ಗೆ 171 ರನ್‌ ಬಾರಿಸಲು ಯಶಸ್ವಿಯಾಗಿತ್ತು. ಇನ್ನು ಸನ್‌ರೈಸರ್ಸ್‌ ತಂಡದ ಪರವಾಗಿ ಬೌಲಿಂಗ್‌ ದಾಳಿ ನಡೆಸಿದ ಎಲ್ಲಾ ಆರೂ ಮಂದಿ ಬೌಲರ್‌ಗಳೂ ವಿಕೆಟ್‌ ಸಂಪಾದಿಸಿದ್ದು ವಿಶೇಷವಾಗಿತ್ತು.

IPL 2023 ಎಬಿಡಿ-ಗೇಲ್‌ ಆಡಿ ಮುಗಿಸಿದ್ದಾರೆ, ಈಗ ಸೂರ್ಯ ಟಿ20 ಕ್ರಿಕೆಟ್ ಆಳುತ್ತಿದ್ಧಾರೆ: ಭಜ್ಜಿ