Asianet Suvarna News Asianet Suvarna News

ಲಕ್ನೋನಲ್ಲಿ ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌ ಬೈದಾಡಿಕೊಂಡಿದ್ದೇನು..? ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ!

ಗೌತಮ್‌ ಗಂಭೀರ್‌ ಹಾಗೂ ವಿರಾಟ್‌ ಕೊಹ್ಲಿ ಲಕ್ನೋನಲ್ಲಿ ನಡೆದ ಪಂದ್ಯದ ವೇಳೆ ಬೈದಾಡಿಕೊಂಡಿದ್ದೇನು? ಈ ಕುರಿತಾಗಿ ಟೀಮ್‌ ಡಗ್‌ಔಟ್‌ನ ಒಬ್ಬ ಸದಸ್ಯ ಮಾತನಾಡಿದ್ದು, ಇಬ್ಬರು ಗಲಾಟೆಯ ವೇಳೆ ಸಂಪೂರ್ಣವಾಗಿ ಹಿಂದಿ ಭಾಷೆಯಲ್ಲಿಯೇ ಕಿತ್ತಾಡಿಕೊಂಡಿದ್ದರು ಎಂದಿದ್ದಾರೆ.

Eyewitness reveals Gambhir and Kohli's conversation during IPL fight in RCB v LSG match san
Author
First Published May 4, 2023, 8:54 PM IST

ನವದೆಹಲಿ (ಮೇ.4): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯದ ವೇಳೆ ಆಗಿರುವ ಗಲಾಟೆ ಈಗಲೂ ಕೂಡ ಸುದ್ದಿಯಲ್ಲಿದೆ. ಪಂದ್ಯದಲ್ಲಿ ವಿರಾಟ್‌ ಕೊಹ್ಲಿ, ಅಮಿತ್‌ ಮಿಶ್ರಾ, ನವೀನ್‌ ಉಲ್‌ ಹಕ್‌ ಹಾಗೂ ಗೌತಮ್‌ ಗಂಭೀರ್‌ ಒಳಗೊಂಡಂತೆ ಒಟ್ಟು ಮೂರು ಪ್ರಮುಖ ಘಟನೆಗಳು ನಡೆದಿದ್ದವು. ಇದರಿಂದಾಗಿ ಲಕ್ನೋನ ಅಟಲ್‌ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂ ಒಂದರ್ಥದಲ್ಲಿ ರಣಾಂಗಣದ ರೀತಿಯಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಈ ಪಂದ್ಯದ ಬಗ್ಗೆ ಅಭಿಮಾನಿಗಳಿಗೆ ಇನ್ನೂ ಕೂಡ ಕುತೂಹಲವಿದೆ. ಗೌತಮ್‌ ಗಂಭೀರ್‌ ಹಾಗೂ ವಿರಾಟ್‌ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡವನ್ನು ಬಿಸಿಸಿಐ ವಿಧಿಸಿದ್ದರೆ, ನವೀನ್‌ ಉಲ್‌ ಹಕ್‌ಗೆ ಶೇ.50ರಷ್ಟು ದಂಡ ವಿಧಿಸಲಾಗಿದೆ. ಪಂದ್ಯದ ಬಳಿಕ ಟಿವಿಯಲ್ಲಿ ಬಿತ್ತರವಾದ ದೃಶ್ಯಗಳನ್ನು ಕಂಡು ದಿಗ್ಗಜ ಆಟಗಾರ ಸುನೀಲ್‌ ಗಾವಸ್ಕರ್‌ ಇಂಥ ಅಟಗಾರರನ್ನು ಕೆಲ ಕಾಲ ನಿಷೇಧಿಸಬೇಕು. ಹಾಗಿದ್ದರೆ ಮಾತ್ರವೇ ಇದು ಮರುಕಳಿಸುವುದಿಲ್ಲ ಎಂದು ಹೇಳಿದ್ದರು. ಲಕ್ನೋ ತಂಡದ ಚೇಸಿಂಗ್‌ನ ಪೂರ್ಣ ಸಮಯದಲ್ಲೂ ಆಕ್ರಮಣಕಾರಿಯಾಗಿದ್ದ ವಿರಾಟ್‌ ಕೊಹ್ಲಿಗೆ 17ನೇ ಓವರ್‌ನಲ್ಲಿ ನವೀನ್‌ ಉಲ್‌ ಹಕ್‌ ಕೆಲ ಸಮಯ ಪ್ರತಿರೋಧ ತೋರಿದ್ದರು.

ಈ ವೇಳೆ ನಾನ್‌ಸ್ಟ್ರೈಕರ್‌ನಲ್ಲಿ ಅಮಿತ್‌ ಮಿಶ್ರಾ, ಅಂಪೈರ್‌ಗಳ ಜೊತೆಗೂಡಿ ಕೊಹ್ಲಿ ಹಾಗೂ ನವೀನ್‌ ಉಲ್‌ ಹಕ್‌ ನಡುವೆ ಸಂಧಾನಕ್ಕಾಗಿ ಪ್ರಯತ್ನಿಸಿದರು. ಆದರೆ, ಕೊಹ್ಲಿಯನ್ನು ಗುರಾಯಿಸುತ್ತಲೇ ಇದ್ದ ನವೀನ್‌ ಉಲ್‌ ಹಕ್‌, ಪಂದ್ಯ ಮುಕ್ತಾಯವಾದ ಬಳಿಕ ಕೊಹ್ಲಿಗೆ ಕೈಕೊಡಲು ಕೂಡ ನಿರಾಕರಿಸಿದ ಬಳಿಕ ಗಲಾಟೆ ಮತ್ತಷ್ಟು ಜೋರಾಯಿತು. ಅದಾದ ಕೆಲವೇ ಸೆಕೆಂಡ್‌ನಲ್ಲಿ ಎಲ್‌ಎಸ್‌ಜಿ ತಂಡದ ಆರಂಭಿಕ ಕೈಲ್‌ ಮೇಯರ್ಸ್‌ ಕೂಡ ಕೊಹ್ಲಿ ಜೊತೆ ಮಾತನಾಡಿದ ದೃಶ್ಯಗಳು ಕಾಣಿಸಿತು. ಈ ಹಂತದಲ್ಲಿ ಕೈಲ್‌ ಮೇಯರ್ಸ್‌ರನ್ನು ಅಲ್ಲಿಂದ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಹೊರಗೆಳೆದರು. ಈ ವೇಳೆ ಕೊಹ್ಲಿ ಗುರಾಯಿಸುವುದು ಮುಂದುವರಿಯುತ್ತಲೇ ಇತ್ತು.

ಕೊಹ್ಲಿ ಹಾಗೂ ಗಂಭೀರ್‌ ವಿರುದ್ಧ ದಿಕ್ಕಿನಲ್ಲಿ ಹೋದರಾದರೂ, ಕೆಲವೇ ಹೊತ್ತಲ್ಲಿ ಮತ್ತೆ ಮುಖಾಮುಖಿಯಾದರು. ಆರ್‌ಸಿಬಿ ಮಾಜಿ ನಾಯಕನ ವಿರುದ್ಧ ಸಿಟ್ಟಿನಿಂದಲೇ ಮಾತನಾಡಿದ್ದು ಕಾಣಿಸಿತು. ಗಂಭೀರ್‌ ತನ್ನದೇ ತಂಡದ ಆಟಗಾರರನ್ನು ಬದಿಗೆ ಸರಿಸುತ್ತಾ ಕೊಹ್ಲಿ ಬಳಿ ಬಂದರು. ಇನ್ನೊಂದೆಡೆ ಕೊಹ್ಲಿ ಕೂಡ ಗಂಭೀರ್‌ಗೆ ಎದುರಾಗಲಿ ನಿರ್ಧಾರ ಮಾಡಿದರು. ಗಂಭೀರ್‌ ಅವರ ಭುಜದ ಮೇಲೆ ಕೊಹ್ಲಿ ಕೈಹಾಕಿ ಮಾತನಾಡಲು ಯತ್ನಿಸಿದರಾದರೂ, ಲಕ್ನೋ ತಂಡದ ಅಮಿತ್‌ ಮಿಶ್ರಾ ಈ ಹಂತದಲ್ಲಿ ಇಬ್ಬರನ್ನು ಬೇರ್ಪಡಿಸಿದರು.

ಹಾಗಿದ್ದರೆ, ಸೋಮವಾರ ರಾತ್ರಿ ಲಕ್ನೋನಲ್ಲಿ ಆಗಿದ್ದೇನು? ಈ ಕುರಿತಾಗಿ ಟೀಮ್‌ ಡಗ್‌ಔಟ್‌ನಲ್ಲಿಯೇ ಕುಳಿತ ವ್ಯಕ್ತಿಯೊಬ್ಬರು ಪಿಟಿಐ ಜೊತೆ ಮಾತನಾಡಿದ್ದಾರೆ. 'ಪಂದ್ಯ ಮುಗಿದ ಬಳಿಕ ವಿರಾಟ್‌ ಕೊಹ್ಲಿ ಹಾಗೂ ಮೇಯರ್ಸ್‌ ಜೊತೆಯಲ್ಲಿಯೇ ಕೆಲ ದೂರ ಮಾತನಾಡಿಕೊಂಡು ಹೋಗಿದ್ದು ನೋಡಿದ್ದೀರಲ್ಲವೇ. ಈ ಹಂತದಲ್ಲಿ ಮೇಯರ್ಸ್‌, ಕೊಹ್ಲಿಯ ಬಳಿ ಯಾಕೆ ನೀವು ನಿರಂತರವಾಗಿ ಆಟಗಾರರನ್ನು ನಿಂದಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವಿರಾಟ್‌ ಕೊಹ್ಲಿ, ಹಾಗಿದ್ದರೆ ನೀನ್ಯಾಕೆ ನನ್ನನ್ನು ಗುರಾಯಿಸಿಕೊಂಡು ನೋಡೋದು? ಎಂದು ಪ್ರಶ್ನೆ ಮಾಡಿದ್ದಾರೆ' ಎಂದು ಹೇಳಿದರು. ಇದಕ್ಕೂ ಮುನ್ನ ಅಮಿತ್ ಮಿಶ್ರಾ ಕೂಡ ಲಕ್ನೋ ತಂಡದ ನಂ.10 ಬ್ಯಾಟ್ಸ್‌ಮನ್‌ ಆಗಿದ್ದ ನವೀನ್‌ ಉಲ್‌ ಹಕ್‌ಗೆ ನಿರಂತರವಾಗಿ ಕೊಹ್ಲಿ ದಿಟ್ಟಿಸಿ ನೋಡುತ್ತಿದ್ದಾರೆ ಎಂದು ಅಂಪೈರ್‌ಗೆ ದೂರು ನೀಡಿದ್ದರು.

'ಈ ಹಂತದಲ್ಲಿ ಪರಿಸ್ಥಿತಿ ಕೈಮೀರುವ ಹಂತವನ್ನು ಗಮನಿಸಿದ ಗೌತಮ್‌ ಗಂಭೀರ್‌, ಮೇಯರ್ಸ್‌ರಲ್ಲಿ ಕೊಹ್ಲಿ ಏನೇ ಮಾತನಾಡಿದರೂ, ಆತನೊಂದಿಗೆ ಮಾತನಾಡದೇ ಇರುವಂತೆ ಸೂಚಿಸಿದರು. ಅದಾದ ಬಳಿಕ ಕೆಟ್ಟ ಘಟನೆಗಳು ನಡೆದವು' ಎಂದು ಹೇಳಿದ್ದಾರೆ.

ಗೌತಮ್‌ ಗಂಭೀರ್‌:  ಕ್ಯಾ ಬೋಲ್‌ ರಹಾ ಹೇಂ ಬೋಲ್‌ (ನೀನು ಏನ್‌ ಹೇಳ್ತಾ ಇದ್ದೀಯ?)
ವಿರಾಟ್‌ ಕೊಹ್ಲಿ:  'ಮೈನೇ ಆಪ್‌ ಕೋ ಕುಚ್‌ ಬೋಲಾ ಹೀ ನಹೀಂ, ಆಪ್‌ ಕ್ಯುಂ ಗುಸ್‌ ರಹೇ ಹೋ' (ನಾನು ನಿಮಗೆ ಏನನ್ನೂ ಹೇಳಿಲ್ಲ, ಹಾಗಿದ್ದಾಗ ನಮ್ಮಿಬ್ಬರ ನಡುವೆ ನೀವ್ಯಾಕೆ ಬರ್ತೀರಿ)
ಗಂಭೀರ್:  ‌ 'ತುನೇ ಅಗರ್‌ ಮೇರೆ ಪ್ಲೇಯರ್‌ ಕೋ ಬೋಲಾ ಹೇ, ಮತ್ಲಬ್‌ ತುನೇ ಮೇರಿ ಫ್ಯಾಮಿಲಿ ಕೋ ಗಾಲಿ ದಿಯಾ ಹೇ' (ನೀನು ನನ್ನ ಆಟಗಾರನಿಗೆ ಬೈದಿದ್ದೆ, ಇದು ನನ್ನ ಕುಟುಂಬವನ್ನು ಬೈದಿದಕ್ಕೆ ಸಮ), 
ವಿರಾಟ್‌: ತೋ ಆಪ್‌ ಅಪ್ನೇ ಫ್ಯಾಮಿಲಿ ಕೋ ಸಂಭಾಲ್‌ ಕೆ ರಖಿಯೇ (ಹಾಗಿದ್ದರೆ, ನೀವು ನಿಮ್ಮ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳಿ)
ಇಬ್ಬರೂ ಬೇರ್ಪಡುವ ಮುನ್ನ ಕೊನೆಯ ಮಾತುಕತೆ
ಗಂಭೀರ್: ತೋ ಅಬ್‌ ತು ಮುಜೆ ಸಿಖಾಯೇಗಾ (ಈಗ ನಾನು ನಿನ್ನಿಂದ ಕಲಿತುಕೊಳ್ಳಬೇಕು ಹಾಗಿದ್ದರೆ)


ಕೊಹ್ಲಿ 'ಸ್ಲೋ' ಬ್ಯಾಟಿಂಗ್‌ ಕೆಣಕಿದ ಮುಂಬೈ ಪೊಲೀಸ್‌ಗೆ ಬೆಂಗಳೂರು ಪೊಲೀಸ್‌ ಖಡಕ್‌ ಉತ್ತರ, ಆದರೆ ಒಂದಿದೆ ಟ್ವಿಸ್ಟು!

2013ರಲ್ಲೂ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ನಡುವೆ ಇಂಥದ್ದೇ ಮುಖಾಮುಖಿ ನಡೆದಿತ್ತು. ಕೆಕೆಆರ್‌ ಹಾಗೂ ಆರ್‌ಸಿಬಿ ಮುಖಾಮುಖಿಯಾಗಿದ್ದ ವೇಳೆ ಇನ್ನೇನು ಇವರಿಬ್ಬರೂ ಹೊಡೆದುಕೊಳ್ಳುತ್ತಾರೆ ಎನ್ನುವ ಹಂತಕ್ಕೆ ತಲುಪಿತ್ತು.

'ಬೇರೆ ಫ್ರಾಂಚೈಸಿಗೆ ಸೇರುವ ಮನಸ್ಸು ಮಾಡಿದ್ದೆ...' ಆರ್‌ಸಿಬಿ ಕುರಿತು ಕೊಹ್ಲಿ ಬಾಂಬ್‌!

Follow Us:
Download App:
  • android
  • ios