ಲಖನೌ ಸೂಪರ್ ಜೈಂಟ್ಸ್‌ ಎದುರು ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್‌ಧೋನಿ ಬ್ಯಾಟಿಂಗ್ ಮಾಡಲಿಳಿಯುತ್ತಿದ್ದಂತೆಯೇ ದಾಖಲೆಯ ಪ್ರಮಾಣದಲ್ಲಿ ವೀಕ್ಷಕರ ಸಂಖ್ಯೆ ಏರಿಕೆಜಿಯೋ ಸಿನಿಮಾ ಆ್ಯಪ್‌ನಲ್ಲಿ ಏಕಕಾಲದಲ್ಲಿ ವೀಕ್ಷಕರ ಸಂಖ್ಯೆ ಬರೋಬ್ಬರಿ 1.7 ಕೋಟಿಗೆ ಏರಿಕೆ

ಚೆನ್ನೈ(ಏ.04): ಲಖನೌ ಸೂಪರ್‌ ಜೈಂಟ್ಸ್ ವಿರುದ್ದ ಸೋಮವಾರ ನಡೆದ ಐಪಿಎಲ್‌ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ ಎಸ್ ಧೋನಿ ಬ್ಯಾಟ್ ಮಾಡಲು ಕ್ರೀಸ್‌ಗಿಳಿದಾಗ ಜಿಯೋ ಸಿನಿಮಾ ಆ್ಯಪ್‌ನಲ್ಲಿ ಏಕಕಾಲದಲ್ಲಿ ವೀಕ್ಷಕರ ಸಂಖ್ಯೆ ಬರೋಬ್ಬರಿ 1.7 ಕೋಟಿ ತಲುಪಿತು. ಇದು ವೈಯಕಾಂ 18 ಸಂಸ್ಥೆ ಐಪಿಎಲ್ ಪ್ರಸಾರ ಆರಂಭಿಸಿದ ಬಳಿಕ ಹೊಸ ದಾಖಲೆ. ಜಿಯೋ ಉಚಿತವಾಗಿ ಐಪಿಎಲ್ ಪ್ರಸಾರ ಮಾಡುತ್ತಿದ್ದು, ಮೊದಲ ವಾರದಲ್ಲೇ 5 ಕೋಟಿಗೂ ಅಧಿಕ ಮಂದಿ ಹೊಸದಾಗಿ ಜಿಯೋ ಸಿನಿಮಾ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದಾಗಿ ಸಂಸ್ಥೆ ತಿಳಿಸಿದೆ.

ಚೆನ್ನೈನಲ್ಲಿ ಸಿಎಸ್‌ಕೆ ಘರ್ಜನೆ:

3 ವರ್ಷ ಬಳಿಕ ತನ್ನ ಭದ್ರಕೋಟೆ ಚೆಪಾಕ್‌ ಕ್ರೀಡಾಂಗಣಕ್ಕೆ ಮರಳಿದ ಚೆನ್ನೈ ಸೂಪರ್‌ ಕಿಂಗ್‌್ಸ, ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 12 ರನ್‌ಗಳ ರೋಚಜ ಜಯದೊಂದಿಗೆ 2023ರ ಐಪಿಎಲ್‌ನಲ್ಲಿ ಮೊದಲ ಗೆಲುವು ಸಂಪಾದಿಸಿದೆ. ತವರಿನ ಅಭಿಮಾನಿಗಳಿಂದ ಭರ್ತಿಯಾಗಿದ್ದ ಕ್ರೀಡಾಂಗಣದಲ್ಲಿ ಚೆನ್ನೈ ತಂಡ ಅತ್ಯುತ್ತಮ ಬ್ಯಾಟಿಂಗ್‌ ಹಾಗೂ ಸ್ಪಿನ್‌ ಬೌಲಿಂಗ್‌ ಪ್ರದರ್ಶನ ತೋರಿತು.

ಧೋನಿ ‘ಸಿಕ್ಸರ್‌’: ಚೆನ್ನೈ ಅಭಿಮಾನಿಗಳಲ್ಲಿ ಸಂಭ್ರಮ!

ಅಂ.ರಾ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಕೆಲ ವರ್ಷಗಳೇ ಕಳೆದರೂ ಧೋನಿಯ ಬ್ಯಾಟಿಂಗ್‌ ಸೊಬಗು ಹಾಗೇ ಇದೆ. 3 ವರ್ಷ ಬಳಿಕ ಚೆಪಾಕ್‌ ಕ್ರೀಡಾಂಗಣದಲ್ಲಿ ಆಡಿದ ಧೋನಿ, ತಾವೆದುರಿಸಿದ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಧೋನಿಯ ಬ್ಯಾಟಿಂಗ್‌ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಆಗಲಿಲ್ಲ.

ಐಪಿಎಲ್‌ನಲ್ಲಿ ಧೋನಿ 5000 ರನ್‌: 7ನೇ ಆಟಗಾರ

ಲಖನೌ ವಿರುದ್ಧ 3 ಎಸೆತದಲ್ಲಿ 12 ರನ್‌ ಸಿಡಿಸಿದ ಧೋನಿ, ಐಪಿಎಲ್‌ನಲ್ಲಿ 5000 ರನ್‌ ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಭಾರತದ 5ನೇ ಹಾಗೂ ಒಟ್ಟಾರೆ 7ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ಧೋನಿ 236 ಪಂದ್ಯಗಳ 208 ಇನ್ನಿಂಗ್ಸ್‌ಗಳಲ್ಲಿ 5004 ರನ್‌ ಕಲೆಹಾಕಿದ್ದಾರೆ. 6706 ರನ್‌ ಕಲೆ ಹಾಕಿರುವ ವಿರಾಟ್‌ ಕೊಹ್ಲಿ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಶಿಖರ್‌ ಧವನ್‌(6284), ವಾರ್ನರ್‌(5937), ರೋಹಿತ್‌ ಶರ್ಮಾ(5880), ಸುರೇಶ್‌ ರೈನಾ(5528), ಎಬಿ ಡಿ ವಿಲಿಯ​ರ್ಸ್‌(5162) ನಂತರದ ಸ್ಥಾನಗಳಲ್ಲಿದ್ದಾರೆ.

ಐಪಿ​ಎಲ್‌ ಆಡಲು ಭಾರ​ತ​ಕ್ಕೆ ಬಂದ ಆಫ್ರಿಕಾ ಆಟ​ಗಾ​ರ​ರು

ಮುಂಬೈ: ನೆದ​ರ್‌​ಲೆಂಡ್‌್ಸ ವಿರುದ್ಧದ ಸರಣಿ ಮುಗಿ​ಸಿದ ದಕ್ಷಿಣ ಆಫ್ರಿಕಾ ಆಟ​ಗಾ​ರರು ಐಪಿ​ಎಲ್‌ ಆಡಲು ಭಾರ​ತಕ್ಕೆ ಆಗ​ಮಿ​ಸಿದ್ದು, ತಮ್ಮ ತಮ್ಮ ತಂಡ​ಗ​ಳನ್ನು ಕೂಡಿ​ಕೊಂಡಿ​ದ್ದಾರೆ. ಅವರ ಆಗ​ಮ​ನ​ದಿಂದ ಸನ್‌ರೈಸ​ರ್ಸ್‌, ಗುಜರಾತ್‌, ಡೆಲ್ಲಿ, ಪಂಜಾಬ್‌, ಚೆನ್ನೈ ತಂಡಗಳಿಗೆ ಬಲ ಬಂದಂತಾ​ಗಿ​ದೆ. ಏಡನ್‌ ಮಾರ್ಕ್ರಮ್‌ ಸನ್‌​ರೈ​ಸರ್ಸ್‌​ ತಂಡ ಸೇರಿ ಮೊದಲ ಬಾರಿ ನಾಯ​ಕತ್ವ ವಹಿ​ಸ​ಲಿ​ದ್ದು, ಮಾರ್ಕೊ ಯಾನ್ಸೆನ್‌, ಹೆನ್ರಿಚ್‌ ಕ್ಲಾಸೆನ್‌ ಕೂಡಾ ತಂಡ ಸೇರ್ಪ​ಡೆ​ಯಾ​ಗಿ​ದ್ದಾರೆ.

IPL 2023: ಚೆಪಾಕ್‌ನಲ್ಲಿ ಅಬ್ಬರಿಸಿದ ಚೆನ್ನೈ, ಸಿಕ್ಸರ್‌ ಮೂಲಕ ರಂಜಿಸಿದ ಧೋನಿ

ಇನ್ನು, ಗುಜರಾತ್‌ ತಂಡ​ವನ್ನು ಡೇವಿಡ್‌ ಮಿಲ್ಲರ್‌ ಸೇರಿದ್ದು, ವೇಗಿ​ಗ​ಳಾದ ಏನ್ರಿಚ್‌ ನೋಕಿಯಾ, ಲುಂಗಿ ಎನ್‌ಗಿಡಿ ಡೆಲ್ಲಿ ತಂಡವನ್ನು ಕೂಡಿ​ಕೊಂಡಿ​ದ್ದಾ​ರೆ. ಡಿ ಕಾಕ್‌ ಸೇರ್ಪ​ಡೆ​ಯಿಂದ ಲಖನೌ ತಂಡದ ಆತ್ಮ​ವಿ​ಶ್ವಾಸ ಹೆಚ್ಚಿ​ದ್ದು, ಚೆನ್ನೈಗೆ ಸಿಸಾಂಡ ಮಗಾಲ ಸೇರ್ಪಡೆಯಾಗಿ​ದ್ದಾರೆ.

ಆರ್‌​ಸಿ​ಬಿ ವೇಗಿ ಟಾಪ್ಲಿ 3-4 ಪಂದ್ಯಕ್ಕೆ ಔಟ್‌?

ಬೆಂಗ​ಳೂ​ರು: ಮುಂಬೈ ಇಂಡಿ​ಯನ್ಸ್‌ ವಿರು​ದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಬಲ ಭುಜದ ಗಾಯಕ್ಕೆ ತುತ್ತಾ​ಗಿ​ರುವ ಆರ್‌​ಸಿಬಿ ವೇಗಿ ರೀಸ್‌ ಟಾಪ್ಲಿ ಐಪಿ​ಎ​ಲ್‌ 16ನೇ ಆವೃತ್ತಿಯ ಮುಂದಿನ 3 ಅಥವಾ 4 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಈ ಬಗ್ಗೆ ತಂಡದ ಕ್ರಿಕೆಟ್‌ ನಿರ್ದೇಶಕ ಮೈಕ್‌ ಹೆಸ್ಸನ್‌ ಮಾಹಿತಿ ನೀಡಿದ್ದು, ‘ಗಾಯದ ಪ್ರಮಾಣ ಅಂದುಕೊಂಡಷ್ಟಿಲ್ಲ. ಆದರೆ ತಕ್ಷಣಕ್ಕೆ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.