ಆರ್‌ಸಿಬಿ ತಂಡದ ಸ್ಪಿನ್ನರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ದಕ್ಷಿಣ ಆಫ್ರಿಕಾ ಮೂಲದ ಆಟಗಾರ ಹೆನ್ರಿಚ್ ಕ್ಲಾಸೆನ್ ಬಾರಿಸಿದ ಕೇವಲ 49 ಎಸೆತಗಳ ಭರ್ಜರಿ ಶತಕದ ನೆರವಿನಿಂದ ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್ ತಂಡ ದೊಡ್ಡ ಮೊತ್ತ ಕಲೆಹಾಕಿದೆ.
ಹೈದರಾಬಾದ್ (ಮೇ.18): ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ದಿನಗಳು ಕೊನೆಗೂ ಆರಂಭವಾಗಿದೆ. ಸ್ಪಿನ್ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವುದರಲ್ಲಿ ಪ್ರಸಿದ್ಧರಾಗಿರುವ ಹೆನ್ರಿಚ್ ಕ್ಲಾಸೆನ್ ಭಾರಿಸಿದ ಕೇವಲ 49 ಎಸೆತಗಳ ಅಬ್ಬರದ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಲೆಕ್ಕಾಚಾರದಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿಗೆ ದೊಡ್ಡ ಗುರಿ ನೀಡಿದೆ. ತಮ್ಮ51 ಎಸೆತಗಳ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 6 ಅಮೋಘ ಸಿಕ್ಸರ್‌ಗಳನ್ನು ಸಿಡಿಸಿದ ಹೆನ್ರಿಚ್ ಕ್ಲಾಸೆನ್, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ 2ನೇ ಅತಿವೇಗದ ಶತಕವನ್ನು ಬಾರಿಸಿ ಮಿಂಚಿದರು. ಇಡೀ ಸನ್‌ರೈಸರ್ಸ್ ತಂಡದ ಇನ್ನಿಂಗ್ಸ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಒಬ್ಬರೇ, 104 ರನ್ ಸಿಡಿಸಿದರೆ, ಉಳಿದ ನಾಲ್ವರು ಬ್ಯಾಟ್ಸ್‌ಮನ್‌ಗಳಿಂದ ಕೇವಲ 76 ರನ್‌ಗಳಷ್ಟೇ ದಾಖಲಾದವು. ಇದರಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್‌ಗೆ 186 ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ.
ಪ್ಲೇ ಆಫ್ ಲೆಕ್ಕಾಚಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಆರ್‌ಸಿಬಿ ಪಾಲಿಗೆ ಪ್ರಮುಖವಾಗಿದ್ದ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆಲುವು ಕಂಡಿದ್ದರು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಎಂದಿನಂತೆ ಕೆಟ್ಟ ಆರಂಭ ಕಂಡಿತ್ತು. ಆರ್‌ಸಿಬಿ ಪರವಾಗಿ ಉತ್ತಮ ದಾಳಿ ಸಂಘಟಿಸಿದ ಮೊಹಮದ್ ಸಿರಾಜ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 17 ರನ್ ನೀಡಿ 1 ವಿಕೆಟ್ ಉರುಳಿಸಿದರು. ಅದರಲ್ಲೂ ಕೊನೇ ಓವರ್‌ನಲ್ಲಿ ಅಬ್ಬರದ ಆಟವಾಡುವ ನಿರೀಕ್ಷೆ ಇರಿಸಿಕೊಂಡಿದ್ದ ಸನ್‌ರೈಸರ್ಸ್ ತಂಡಕ್ಕೆ ಸಿರಾಜ್ ಕಡಿವಾಣ ಹಾಕಿದರು. ಅಂತಿಮ ಓವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ ಕೇವಲ 4 ರನ್ ಬಾರಿಸಿದ್ದರಿಂದ 200ಕ್ಕೂ ಅಧಿಕ ರನ್ ಬಾರಿಸುವ ಅವಕಾಶದಿಂದ ವಂಚಿತವಾಯಿತು.
ಇಡೀ ಸನ್‌ರೈಸರ್ಸ್ ತಂಡದ ಇನ್ನಿಂಗ್ಸ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಅವರೇ ಹೈಲೈಟ್ ಆಗಿದ್ದರು. ಸ್ಥಿರವಾಗಿ ಬ್ಯಾಟಿಂಗ್ ಮಾಡಿದ ಕ್ಲಾಸೆನ್ ಏಕಾಂಗಿಯಾಗಿ ತಂಡದ ಮೊತ್ತವನ್ನು ಏರಿಸಿದರು. ಕ್ಲಾಸೆನ್ 51 ಎಸೆತಗಳಲ್ಲಿ 104 ರನ್ ಬಾರಿಸಿದರೆ, ಇತರ ನಾಲ್ವರು ಬ್ಯಾಟ್ಸ್‌ಮನ್‌ಗಳಿಂದ 69 ಎಸೆತಗಳಲ್ಲಿ 76 ರನ್ ಅಷ್ಟೇ ದಾಖಲಿಸಿದ್ದು ಕೊನೆಯಲ್ಲಿ ತಂಡಕ್ಕೆ ಹಿನ್ನಡೆಯಾಯಿತು.
IPL 2023: ಟಾಸ್ ಗೆದ್ದ ಆರ್‌ಸಿಬಿ, ಬೌಲಿಂಗ್ ಆಯ್ದುಕೊಂಡ ಪ್ಲೆಸಿಸ್
ಮೊದಲ ವಿಕೆಟ್‌ಗೆ ಅಭಿಷೇಕ್ ವರ್ಮ ಹಾಗೂ ರಾಹುಲ್ ತ್ರಿಪಾಠಿ ಕೇವಲ 27 ರನ್ ಜೊತೆಯಾಟವಾಡಿ ಬೇರ್ಪಟ್ಟರು. 14 ಎಸೆತಗಳಲ್ಲಿ 2 ಬೌಂಡರಿ ಇದ್ದ 11 ರನ್ ಬಾರಿಸಿದ್ದ ಅಭಿಷೇಕ್ ವರ್ಮ, ಬ್ರೇಸ್‌ವೆಲ್ ಎಸೆದ ತಮ್ಮ ಮೊದಲ ಓವರ್‌ನಲ್ಲಿಯೇ ವಿಕೆಟ್ ನೀಡಿದರು. ಅದೇ ಓವರ್‌ನಲ್ಲಿ 12 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಮೂಲಕ 15 ರನ್ ಸಿಡಿಸಿದ್ದ ರಾಹುಲ್ ತ್ರಿಪಾಠಿಯ ವಿಕೆಟ್ ಉರುಳಿಸುವ ಮೂಲಕ ಸನ್‌ರೈಸರ್ಸ್ ಮೇಲೆ ಒತ್ತಡ ಹೇರಿದರು. 28 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ನಾಯಕ ಏಡೆನ್ ಮಾರ್ಕ್ರಮ್ (18) ಜೊತೆಯಾದ ಹೆನ್ರಿಚ್ ಕ್ಲಾಸೆನ್ ಮೊತ್ತವನ್ನು ಬಿರುಸಾಗಿ ಏರಿಸಿದರು. ಇದರಿಂದಾಗಿ 13ನೇ ಓವರ್ ವೇಳೆಗೆ ತಂಡದ ಮಪತ್ತ 100ರ ಗಡಿ ದಾಟಿತ್ತು. ಅಪಾಯಕಾರಿಯಾಗಲಿದ್ದ ಈ ಜೊತೆಯಾಟವನ್ನು ಶಹಬಾಜ್ ಅಹ್ಮದ್ ಬೇರ್ಪಡಿಸಿದರು.
ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರ್ಯಾನಿ ಬಾರಿಸಿದ ಆರ್‌ಸಿಬಿ..!
ಮಾರ್ಕ್ರಮ್ ವಿಕೆಟ್ ಉರುಳಿದ ಬಳಿಕ ಅಬ್ಬರದ ಆಟವಾಡಿದ ಕ್ಲಾಸೆನ್‌ಗೆ ಹ್ಯಾರಿ ಬ್ರೂಕ್ ಜೊತೆಯಾದರು. ಬ್ರೂಕ್ ಕೇವಲ 19 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿಗಳಿದ್ದ 27 ರನ್ ಬಾರಿಸಿ ಸನ್‌ರೈಸರ್ಸ್‌ಗೆ ನೆರವಾದರು.
