ಪ್ಲೇ ಆಫ್‌ಗೇರುವ ಅವಕಾಶದ ಮೇಲೆ ತನ್ನ ನಿಯಂತ್ರಣವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವ ಗುರಿಯಲ್ಲಿರುವ ಆರ್‌ಸಿಬಿ ತಂಡ ಇಂದು ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದು ಲೀಗ್‌ನಲ್ಲಿ ತಂಡದ 13ನೇ ಪಂದ್ಯವಾಗಿದೆ.

ಹೈದರಾಬಾದ್‌ (ಮೇ.18): ಪ್ಲೇ ಆಫ್‌ಗೇರಲು ಪ್ರಮುಖ ತಂಡಗಳು ಫೈಟ್‌ ಮಾಡುತ್ತಿರುವ ಹಿನ್ನಲೆಯಲ್ಲಿ ಪ್ಲೇ ಆಫ್‌ ಲೆಕ್ಕಾಚಾರದಲ್ಲಿ ತನ್ನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಇರಾದೆಯಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗುರುವಾರ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲು ಸಜ್ಜಾಗಿದೆ. ಟಾಸ್‌ ಗೆದ್ದ ಆರ್‌ಸಿಬಿ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆರ್‌ಸಿಬಿಗೆ ಪ್ಲೇ ಆಫ್‌ ನಿಟ್ಟಿನಲ್ಲಿ ಪಂದ್ಯ ಪ್ರಮುಖವಾಗಿರುವ ಕಾರಣ, ತಂಡದಲ್ಲಿ ಕೆಲವು ಬದಲಾವಣೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪಾಲಿಗೆ ಈ ಪಂದ್ಯದ ಸೋಲು-ಗೆಲುವಿನಿಂದ ಯಾವುದೇ ಲಾಭವಿಲ್ಲ. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗಿಂತ ಮುಖ್ಯವಾಗಿ ಚೆನ್ನೈ ಹಾಗೂ ಲಕ್ನೋ ತಂಡದ ಅಭಿಮಾನಿಗಳು ವೀಕ್ಷಣೆ ಮಾಡುತ್ತಾರೆ. ಅದಕ್ಕೆ ಕಾರಣ, ಹಾಗೇನಾದರೂ ಆರ್‌ಸಿಬಿ ಈ ಪಂದ್ಯದಲ್ಲಿ ಸೋಲು ಕಂಡರೆ, ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಲಕ್ನೋ ಸೂಪರ್‌ಜೈಂಟ್ಸ್‌ ತಂಡಗಳು ಪ್ಲೇ ಆಫ್‌ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲಿವೆ.

ಆರ್‌ಸಿಬಿ ಪ್ಲೇಯಿಂಗ್‌ ಇಲೆವೆನ್‌: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್ (ವಿ.ಕೀ), ಶಹಬಾಜ್ ಅಹ್ಮದ್, ಮೈಕೆಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್

ಸನ್‌ರೈಸರ್ಸ್‌ ಹೈದರಾಬಾದ್‌ ಪ್ಲೇಯಿಂಗ್‌ ಇಲೆವೆನ್‌: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿ.ಕೀ), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ

ಮೊದಲು ಬೌಲಿಂಗ್‌ ಆಯ್ಕೆ ಮಾಡಿದ್ದೇವೆ. ಕಳೆದ ಎರಡು ದಿನಗಳಲ್ಲಿ ಇಲ್ಲಿ ಹೆಚ್ಚಿನ ಇಬ್ಬನಿ ಕಂಡಿದ್ದೇವೆ. ಉತ್ತಮ ಪಿಚ್‌ ಆದರೆ, ನಿಧಾನಗತಿಯ ಬ್ಯಾಟಿಂಗ್‌ ಸಾಗಲಿದೆ. ಕಳೆದ ಪಂದ್ಯದ ತಂಡವನ್ನೇ ಉಳಿಸಿಕೊಳ್ಳಲಿದ್ದೇವೆ. ಹಸರಂಗಗೆ ಸಣ್ಣ ಗಾಯದ ಸಮಸ್ಯೆ ಇದೆ. ಬ್ರೇಸ್‌ವೆಲ್‌ ನಮ್ಮ ಬ್ಯಾಟಿಂಗ್‌ಅನ್ನು ಬಲಿಷ್ಠಪಡಿಸಿದ್ದಾರೆ. ಉತ್ತಮವಾಗಿ ಆಡಬೇಕಿದೆ. ಪ್ರತಿ ಪಂದ್ಯವನ್ನು ಫ್ರೆಶ್‌ ಆಗಿ ಆಡುವುದು ಅಗತ್ಯವಾಗಿದೆ ಎಂದು ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌ ಟಾಸ್‌ ವೇಳೆ ಹೇಳಿದ್ದಾರೆ.

IPL 2023: ಹೋರಾಡಿ ಸೋತ ಪಂಜಾಬ್‌ ಕಿಂಗ್ಸ್‌, 94 ರನ್‌ ಚಚ್ಚಿದ ಲಿವಿಂಗ್‌ಸ್ಟೋನ್‌!

ನಾವೂ ಕೂಡ ಮೊದಲು ಬ್ಯಾಟಿಂಗ್‌ ಮಾಡಲು ಬಯಸಿದ್ದೆವು. ಟಾಸ್‌ ಸೋಲಿನಿಂದ ಅಷ್ಟೇನೂ ಬೇಸರವಾಗಿಲ್ಲ. ಕೆಲವೊಂದು ಬದಲಾವಣೆಗಳನ್ನು ಮಾಡಿದ್ದೇವೆ. ಹ್ಯಾರಿ ಬ್ರೂಕ್ಸ್‌ ತಂಡಕ್ಕೆ ವಾಪಸಾಗಿದ್ದಾರೆ. ಕಾರ್ತಿಕ್‌ ತ್ಯಾಗಿ ಕೂಡ ಮರಳಿದ್ದಾರೆ. ನಮ್ಮ ತಂಡದ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಲು ಸೋತಿದ್ದೇವೆ. ಕೊನೆಯ ಎರಡು ಗೇಮ್‌ಗಳಲ್ಲಿ ನಮ್ಮ ಅಸಲಿ ಸಾಮರ್ಥ್ಯ ಏನೆಂದು ನಿರೂಪಿಸಲಿದ್ದೇವೆ ಎಂದು ಟಾಸ್‌ ವೇಳೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಏಡೆನ್‌ ಮಾರ್ಕ್ರನ್‌ ಹೇಳಿದ್ದಾರೆ.

ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಗಿಲ್

ಆರ್‌ಸಿಬಿ ಸೋತರೆ, ಚೆನ್ನೈ ಮತ್ತು ಲಕ್ನೋಗೆ ಮಾತ್ರವಲ್ಲದೆ, ರಾಜಸ್ಥಾನ ರಾಯಲ್ಸ್‌, ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಅವಕಾಶವನ್ನೂ ಮುಕ್ತವಾಗಿರಿಸಲಿದೆ. ಒಂದು ಲೆಕ್ಕಾಚಾರದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಪ್ಲೇ ಆಫ್‌ ಆಸೆ ಕೂಡ ಕೊಂಚ ಮುಕ್ತಗೊಳ್ಳಲಿದೆ. ಆದರೆ, ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ದೊಡ್ಡ ಅಂತರದ ಗೆಲುವು ಕಂಡ ವಿಶ್ವಾಸದಲ್ಲಿರುವ ಆರ್‌ಸಿಬಿ, ಇದೇ ಪಂದ್ಯದಲ್ಲಿ ತನ್ನ ಮುಂದಿನ ಹಂತದ ಲೆಕ್ಕಾಚಾರ ಬಲಪಡಿಸಿಕೊಳ್ಳುವ ಗುರಿಯಲ್ಲಿದೆ. ಫಾಫ್‌ ಡು ಪ್ಲೆಸಿಸ್‌ ಹಾಗೂ ಮೊಹಮದ್‌ ಸಿರಾಜ್‌ ಫಾರ್ಮ್‌ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ.