ಅರುಣ್ ಜೇಟ್ಲಿ ಮೈದಾನದಲ್ಲಿಂದು ಡೆಲ್ಲಿ-ಕೆಕೆಆರ್ ಕಾದಾಟಮೊದಲ ಗೆಲುವಿನ ಕನವರಿಕೆಯಲ್ಲಿದೆ ಡೇವಿಡ್ ವಾರ್ನರ್ ಪಡೆಇಂದು ಸೋತರೆ ಬಹುತೇಕ ಪ್ಲೇ ಆಫ್ ರೇಸ್‌ನಿಂದ ಔಟ್
ನವದೆಹಲಿ(ಏ.20): ಸತತ 5 ಪಂದ್ಯಗಳನ್ನು ಸೋತು 16ನೇ ಆವೃತ್ತಿ ಐಪಿಎಲ್ನಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್, ಗುರುವಾರ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ಈಗಾಗಲೇ ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿರುವ ಡೆಲ್ಲಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದ್ದು, ಸೋತರೆ ನಾಕೌಟ್ ಪ್ರವೇಶದ ಕನಸು ಬಹುತೇಕ ಭಗ್ನಗೊಳ್ಳಲಿದೆ. ಅತ್ತ ಕೆಕೆಆರ್ ಸತತ 2ನೇ ಸೋಲಿನ ಆಘಾತದಲ್ಲಿದ್ದು, ಹ್ಯಾಟ್ರಿಕ್ ಸೋಲು ತಪ್ಪಿಸುವುದರ ಜೊತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.
ಡೇವಿಡ್ ವಾರ್ನರ್ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ ಯಾವುದೇ ಪಂದ್ಯದಲ್ಲೂ ಸಂಘಟಿತ ಹೋರಾಟ ಪ್ರದರ್ಶಿಸಿಲ್ಲ. ಬ್ಯಾಟರ್ಗಳು ತೀವ್ರ ವೈಫಲ್ಯ ಕಾಣುತ್ತಿದ್ದು, ವಾರ್ನರ್ 5 ಪಂದ್ಯಗಳಲ್ಲಿ 228 ರನ್ ಸಿಡಿಸಿದರೂ ಅವರ ಸ್ಟ್ರೈಕ್ರೇಟ್ ಕೇವಲ 116. ಬೌಲರ್ಗಳು ಕೂಡಾ ಪರಿಣಾಮ ಬೀರುತ್ತಿಲ್ಲ. ಸ್ಫೋಟಕ ಆಟಕ್ಕೆ ಹೆಸರುವಾಸಿಯಾದ ಕೆಕೆಆರ್ ಬ್ಯಾಟರ್‌ಗಳನ್ನು ನಿಯಂತ್ರಿಸದಿದ್ದರೆ ತಂಡಕ್ಕೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಾಯಕ ಡೇವಿಡ್ ವಾರ್ನರ್ ಮಾತ್ರವಲ್ಲದೇ, ಪೃಥ್ವಿ ಶಾ, ಮಿಚೆಲ್ ಮಾರ್ಶ್, ಮನೀಶ್ ಪಾಂಡೆ ಹಾಗೂ ಅಕ್ಷರ್ ಪಟೇಲ್ ಸ್ಪೋಟಕ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಡೆಲ್ಲಿ ಬೌಲರ್‌ಗಳಾದ ಮುಸ್ತಾಫಿಜುರ್ ರೆಹಮಾನ್, ಏನ್ರಿಚ್ ನೋಕಿಯ ಜತೆಗೆ ಕುಲ್ದೀಪ್ ಯಾದವ್ ಜವಾಬ್ದಾರಿಯುತ ಪ್ರದರ್ಶನ ನೀಡಿದರಷ್ಟೇ ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯ.
IPL 2023 ಆರ್‌ಸಿಬಿಗೆ ಇಂದು ಪಂಜಾಬ್ ಕಿಂಗ್ಸ್ ಚಾಲೆಂಜ್..!
ಅತ್ತ ಕೋಲ್ಕತಾ ನೈಟ್ ರೈಡರ್ಸ್ ಜಯದ ಹಳಿಗೆ ಮರಳಲು ಕಾಯುತ್ತಿದ್ದು, ನಿತೀಶ್ ರಾಣಾ, ರಿಂಕು ಸಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬೌಲಿಂಗ್ ಪಡೆ ಮೊನಚು ಕಳೆದುಕೊಂಡಿದ್ದು, ಆರ್ಸಿಬಿ ವಿರುದ್ಧ ಹೊರತುಪಡಿಸಿ ಉಳಿದ 4 ಪಂದ್ಯಗಳಲ್ಲೂ 185+ ರನ್ ಬಿಟ್ಟುಕೊಟ್ಟಿದೆ.
ಮುಖಾಮುಖಿ: 30
ಡೆಲ್ಲಿ: 14
ಕೆಕೆಆರ್: 16
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಯಶ್ ಧುಳ್, ಅಭಿಷೇಕ್ ಪೋರೆಲ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯ, ಮುಸ್ತಾಫಿಜುರ್ ರೆಹಮಾನ್, ಮುಕೇಶ್ ಕುಮಾರ್.
ಕೆಕೆಆರ್: ಜೇಸನ್ ರಾಯ್, ಎನ್ ಜಗದೀಶನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೇನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫಗ್ರ್ಯೂಸನ್, ವರುಣ್ ಚಕ್ರವರ್ತಿ.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಬಾರಿ ನಡೆದ ಎರಡೂ ಪಂದ್ಯದಲ್ಲಿ 160+ ರನ್ ದಾಖಲಾಗಿತ್ತು, ಎರಡರಲ್ಲೂ ಚೇಸಿಂಗ್ ಮಾಡಿದ ತಂಡ ಜಯಗಳಿಸಿದೆ. ಹೀಗಾಗಿ ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 180-190 ರನ್ ಗಳಿಸಬೇಕಿದೆ.
