ರಾಜಸ್ಥಾನ ರಾಯಲ್ಸ್ ಎದುರು ಸುಲಭ ಜಯ ದಾಖಲಿಸಿದ ಆರ್‍‌ಸಿಬಿರಾಯಲ್ಸ್ ಎದುರು ಶೂನ್ಯ ಸುತ್ತಿದ ದಿನೇಶ್ ಕಾರ್ತಿಕ್ಸೊನ್ನೆ ಸುತ್ತುವುದರಲ್ಲಿ ದಾಖಲೆ ಬರೆದ ಆರ್‍‌ಸಿಬಿ ವಿಕೆಟ್ ಕೀಪರ್ ಬ್ಯಾಟರ್

ಜೈಪುರ(ಮೇ.15): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ ನೀರಸ ಬ್ಯಾಟಿಂಗ್‌ ಪ್ರದರ್ಶನ ಮುಂದುವರೆದಿದೆ. ಇದೀಗ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ದಿನೇಶ್ ಕಾರ್ತಿಕ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ಹೌದು, ಭಾನುವಾರ ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆಡಂ ಜಂಪಾ ಬೌಲಿಂಗ್‌ನಲ್ಲಿ ದಿನೇಶ್ ಕಾರ್ತಿಕ್, ಎಲ್‌ಬಿ ಬಲೆಗೆ ಬಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 16ನೇ ಬಾರಿಗೆ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ಅತಿಹೆಚ್ಚು ಬಾರಿ ಶೂನ್ಯ ಸುತ್ತಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡಾ ಐಪಿಎಲ್‌ನಲ್ಲಿ 16 ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ. ಇನ್ನುಳಿದಂತೆ ಸುನಿಲ್ ನರೈನ್ ಹಾಗೂ ಮನ್ದೀಪ್ ಸಿಂಗ್ ತಲಾ 15 ಬಾರಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಕೈಚೆಲ್ಲಿದ್ದಾರೆ.

IPL 2023 ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ CSK ಸಿಇಒ ಕಾಶಿ ವಿಶ್ವನಾಥನ್

ಈ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರದರ್ಶನವು ತೀರಾ ನಿರಾಶದಾಯಕವಾಗಿದೆ. ಇದುವರೆಗೂ 12 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್‌ ಕೇವಲ 12.72ರ ಬ್ಯಾಟಿಂಗ್‌ ಸರಾಸರಿಯಲ್ಲಿ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನುಳಿದ ಮಹತ್ವದ ಪಂದ್ಯಗಳಲ್ಲಾದರೂ ದಿನೇಶ್ ಕಾರ್ತಿಕ್‌ ಜವಾಬ್ದಾರಿಯುತ ಆಟವಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ

ಆರ್‍‌ಸಿಬಿ ಪ್ಲೇ ಆಫ್‌ ಕನಸು ಜೀವಂತ:

ಆರ್‍‌ಸಿಬಿ ನೀಡಿದ್ದ 171 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಕೇವಲ 59 ರನ್‌ಗಳಿಗೆ ಸರ್ವಪತನ ಕಂಡಿತು. ಭಾರೀ ಅಂತರದ ಗೆಲುವಿನ ಜತೆಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ನೆಟ್‌ ರನ್‌ರೇಟ್ ಸುಧಾರಿಸಿಕೊಳ್ಳುವುದರ ಜತೆಗೆ ಅಂಕಪಟ್ಟಿಯಲ್ಲಿ5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಆರ್‍‌ಸಿಬಿ ತಂಡವು ಇನ್ನುಳಿದ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳನ್ನು ಎದುರಿಸಲಿದ್ದು, ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ನೇರವಾಗಿ 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಇನ್ನು ಒಂದು ವೇಳೆ ಒಂದು ವೇಳೆ ಒಂದು ಪಂದ್ಯ ಸೋತರೂ ಪ್ಲೇ ಆಫ್‌ಗೇರಲು ಅವಕಾಶವಿದೆ, ಆದರೆ ಉಳಿದ ತಂಡಗಳ ಪ್ರದರ್ಶನದ ಮೇಲೆ ಆರ್‍‌ಸಿಬಿ ಪ್ಲೇ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಹೆಚ್ಚು.