Asianet Suvarna News Asianet Suvarna News

IPL 2023 ಈಡೇರುತ್ತಾ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ-ಆಫ್‌ ಆಸೆ?

ಇಂದು ಡೆಲ್ಲಿ ವಿರುದ್ಧ ಚೆನ್ನೈಗೆ ಮಹತ್ವದ ಪಂದ್ಯ
ಚೆನ್ನೈ ಗೆದ್ದರೆ ಪ್ಲೇ-ಆಫ್‌ಗೆ ಪ್ರವೇಶ
ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಡೆಲ್ಲಿ

IPL 2023 Chennai Super Kings eyes on Play off spot take on Delhi Capitals Challenge kvn
Author
First Published May 20, 2023, 10:41 AM IST

ನವದೆಹಲಿ(ಮೇ.20): ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ತವರಿನಲ್ಲಿ ಕ್ವಾಲಿಫೈಯರ್‌-1 ಪಂದ್ಯವನ್ನಾಡಲು ಕಾತರಿಸುತ್ತಿರುವ ಚೆನ್ನೈ ಸೂಪರ್‌ ಕಿಂಗ್‌್ಸ, ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ. ಚೆನ್ನೈ ಸೂಪರ್ ಕಿಂಗ್ಸ್‌ ಮುಂದಿರುವ ಲೆಕ್ಕಾಚಾರ ಸರಳವಾಗಿದ್ದು, ಈ ಪಂದ್ಯ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ.

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್‌, 6 ವಿಕೆಟ್‌ ಸೋಲು ಅನುಭವಿಸಿದ್ದು ತಂಡದ ಪ್ಲೇ-ಆಫ್‌ ಹಾದಿಯನ್ನು ಸ್ವಲ್ಪ ಮಟ್ಟಿಗೆ ಕಠಿಣಗೊಳಿಸಿತ್ತು. 13 ಪಂದ್ಯಗಳಲ್ಲಿ 15 ಅಂಕ ಕಲೆಹಾಕಿರುವ ಚೆನ್ನೈ 2ನೇ ಸ್ಥಾನದಲ್ಲಿದೆ. ಲಖನೌ ಕೂಡ 15 ಅಂಕ ಹೊಂದಿದ್ದರೂ, ಉತ್ತಮ ನೆಟ್‌ ರನ್‌ರೇಟ್‌ ಆಧಾರದಲ್ಲಿ ಚೆನ್ನೈ ಒಂದು ಸ್ಥಾನ ಮೇಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಚೆನ್ನೈ ಸೋತರೆ, ಆಗ ಧೋನಿ ಪಡೆ ಪ್ಲೇ-ಆಫ್‌ಗೇರಲು ಆರ್‌ಸಿಬಿ ಅಥವಾ ಮುಂಬೈ ಇಂಡಿಯನ್ಸ್‌ ತನ್ನ ಕೊನೆ ಪಂದ್ಯವನ್ನು ಸೋಲಬೇಕಿದೆ.

ಎರಡು ಬಲಿಷ್ಠ ಸ್ಪಿನ್‌ ಪಡೆಗಳ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದ್ದು, ಡೆಲ್ಲಿಗೆ ಹೋಲಿಸಿದರೆ ಚೆನ್ನೈನ ಬ್ಯಾಟಿಂಗ್‌ ಸದೃಢವಾಗಿದೆ. ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಯಾವುದೇ ಅಡೆತಡೆಗಳಿಲ್ಲದೆ ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ಎದುರು ನೋಡುತ್ತಿದೆ.

ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ಡೆವೊನ್ ಕಾನ್‌ವೇ, ಋತುರಾಜ್‌ ಗಾಯಕ್ವಾಡ್‌, ಅಂಬಟಿ ರಾಯುಡು, ಶಿವಂ ದುಬೆ ಹಾಗೂ ಅಜಿಂಕ್ಯ ರಹಾನೆಯನ್ನು ನೆಚ್ಚಿಕೊಂಡಿದೆ. ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ತೋರುತ್ತಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಲಂಕಾದ ಮಥೀಶ್ ಪತಿರಣ, ಮಹೀಶ್ ತೀಕ್ಷಣ ಜತೆಗೆ ದೀಪಕ್ ಚಹರ್ ಮಾರಕ ದಾಳಿ ನಡೆಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

IPL 2023: ರಾಯಲ್ಸ್‌ ತ್ರಿಮೂರ್ತಿಗಳ ಸೂಪರ್‌ ಬ್ಯಾಟಿಂಗ್‌, ಐಪಿಎಲ್‌ನಿಂದ ಹೊರಬಿದ್ದ ಪಂಜಾಬ್‌!

ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದ್ದು, ಕೊನೆಯ ಪಂದ್ಯ ಗೆದ್ದು ತನ್ನ ಅಭಿಯಾನ ಮುಗಿಸಲು ಡೇವಿಡ್ ವಾರ್ನರ್ ಪಡೆ ಎದುರು ನೋಡುತ್ತಿದೆ. ಡೆಲ್ಲಿ ತಂಡವು ಬ್ಯಾಟಿಂಗ್‌ನಲ್ಲಿ ನಾಯಕ ವಾರ್ನರ್‌ ಜತೆಗೆ ಪೃಥ್ವಿ ಶಾ, ರಿಲೇ ರೂಸ್ಸೌ, ಫಿಲ್ ಸಾಲ್ಟ್ ಜತೆಗೆ ಅಕ್ಷರ್ ಪಟೇಲ್ ಕೂಡಾ ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ಬಲಿಷ್ಠ ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಇಶಾಂತ್ ಶರ್ಮಾ, ಏನ್ರಿಚ್ ನೊಕಿಯ, ಮುಕೇಶ್ ಕುಮಾರ್ ಹಾಗೂ ಕುಲ್ದೀಪ್ ಯಾದವ್‌ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 18 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೋಯಿನ್‌ ಅಲಿ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ದೀಪಕ್ ಚಹರ್‌, ಮಹೀಶ್ ತೀಕ್ಷಣ, ಮಥೀಶ್ ಪತಿರನ, ತುಷಾರ್‌ ದೇಶಪಾಂಡೆ.

ಡೆಲ್ಲಿ: ಡೇವಿಡ್ ವಾರ್ನರ್‌(ನಾಯಕ), ಪೃಥ್ವಿ ಶಾ, ರಿಲೇ ರುಸ್ಸೌ, ಫಿಲ್‌ ಸಾಲ್ಟ್‌, ಅಕ್ಷರ್‌ ಪಟೇಲ್, ಅಮನ್‌ ಖಾನ್, ಯಶ್‌ ಧುಳ್‌, ಕುಲ್ದೀಪ್‌ ಯಾದವ್, ಏನ್ರಿಚ್ ನೋಕಿಯ, ಮುಕೇಶ್‌ ಕುಮಾರ್, ಇಶಾಂತ್‌ ಶರ್ಮಾ, ಖಲೀಲ್‌ ಅಹಮ್ಮದ್.

ಪಂದ್ಯ: ಮಧ್ಯಾಹ್ನ 3.30ರಿಂದ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್/ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಈ ಆವೃತ್ತಿಯಲ್ಲಿ ದೆಹಲಿಯಲ್ಲಿ ಸರಾಸರಿ ಮೊದಲ ಇನ್ನಿಂಗ್‌್ಸ ಮೊತ್ತ 168 ರನ್‌. ಇಲ್ಲಿನ ಪಿಚ್‌ ಬ್ಯಾಟರ್‌ ಸ್ನೇಹಿಯಲ್ಲ ಎಂದು ಸ್ವತಃ ವಾರ್ನರ್‌ ಹೇಳಿದ್ದಾರೆ. 6 ಪಂದ್ಯಗಳಲ್ಲಿ ವೇಗಿಗಳು 40 ವಿಕೆಟ್‌ ಕಬಳಿಸಿದ್ದು, ಸ್ಪಿನ್ನರ್‌ಗಳು 32 ವಿಕೆಟ್‌ ಪಡೆದಿದ್ದಾರೆ.

Follow Us:
Download App:
  • android
  • ios