ಇಂದು ಚೆನ್ನೈ ಸೂಪರ್ ಕಿಂಗ್ಸ್‌-ಲಖನೌ ಸೂಪರ್ ಜೈಂಟ್ಸ್‌ ಕಾದಾಟಮೊದಲ ಗೆಲುವಿನ ನಿರೀಕ್ಷೆಯಲ್ಲಿ ಎಂ ಎಸ್ ಧೋನಿ ಪಡೆತವರಿನಲ್ಲಿ ಅಬ್ಬರಿಸಲು ರೆಡಿಯಾದ ಚೆನ್ನೈ ಸೂಪರ್ ಕಿಂಗ್ಸ್‌

ಚೆನ್ನೈ(ಏ.03): 2023ರ ಐಪಿಎಲ್‌ನಲ್ಲಿ ಸೋಲಿನ ಆರಂಭ ಕಂಡಿರುವ 4 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌, ಸೋಮವಾರ ತನ್ನ ಭದ್ರಕೋಟೆ, ಇಲ್ಲಿನ ಚಿದಂಬರಂ(ಚೆಪಾಕ್‌) ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಲಿದ್ದು, ಈ ಆವೃತ್ತಿಯಲ್ಲಿ ಮೊದಲ ಜಯಕ್ಕಾಗಿ ಎದುರು ನೋಡುತ್ತಿದೆ.

ಚೆಪಾಕ್‌ನಲ್ಲಿ ಆಡಿರುವ ಶೇ.70.91 ಪಂದ್ಯಗಳನ್ನು ಗೆದ್ದಿರುವ ಸಿಎಸ್‌ಕೆ, 3 ವರ್ಷ ಬಳಿಕ ತವರಿನ ಅಭಿಮಾನಿಗಳ ಎದುರು ಆಡಲಿದ್ದು ಸಹಜವಾಗಿಯೇ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಧೋನಿ ನಾಯಕತ್ವದ ತಂಡ ಬೌಲಿಂಗ್‌ ವಿಭಾಗದಲ್ಲಿ ಅಷ್ಟಾಗಿ ಬಲಿಷ್ಠವಾಗಿರುವಂತೆ ಕಾಣುತ್ತಿಲ್ಲ. ಜೊತೆಗೆ ಕೆಳ ಮಧ್ಯಮ ಕ್ರಮಾಂಕವೂ ಒತ್ತಡದ ಪರಿಸ್ಥಿತಿ ನಿಭಾಯಿಸುವಲ್ಲಿ ಎಡವಬಹುದು ಎನಿಸಿದೆ. ಹೀಗಾಗಿ ಮತ್ತೊಮ್ಮೆ ಅಗ್ರ ಬ್ಯಾಟರ್‌ಗಳ ಮೇಲೆಯೇ ಒತ್ತಡ ಬೀಳಲಿದೆ. 16.25 ಕೋಟಿ ರು.ಗೆ ತಂಡ ಸೇರಿರುವ ಬೆನ್‌ ಸ್ಟೋಕ್ಸ್‌ ಎಷ್ಟು ಪರಿಣಾಮಕಾರಿ ಆಗಲಿದ್ದಾರೆ ಎನ್ನುವ ಕುತೂಹಲವೂ ಇದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾ ಅವರಿಲ್ಲದೇ ಈ ಬಾರಿ ಸಿಎಸ್‌ಕೆ ತಂಡವು ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನು ಚೆನ್ನೈನ ಸ್ಪೋಟಕ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್, ಇದೇ ಮೊದಲ ಬಾರಿಗೆ ಸಿಎಸ್‌ಕೆ ಪರ ಕಣಕ್ಕಿಳಿಯುತ್ತಿದ್ದಾರೆ.

ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಲಖನೌ ಸೂಪರ್ ಜೈಂಟ್ಸ್‌, ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತಿದೆ. ಚೆಪಾಕ್‌ನ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ರವಿ ಬಿಷ್ಣೋಯ್‌, ಕೆ.ಗೌತಮ್‌, ದೀಪಕ್‌ ಹೂಡಾ ದೊಡ್ಡ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ. ಹಿರಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾರನ್ನು ಇಂಪ್ಯಾಕ್ಟ್ ಆಟಗಾರನಾಗಿ ಬಳಸಿದರೆ ಅಚ್ಚರಿಯಿಲ್ಲ.

IPL 2023 ಆರ್‌ಸಿಬಿ ಘರ್ಜನೆಗೆ ಮುಂಬೈ ಸೈಲೆಂಟ್, ಮೊದಲ ಪಂದ್ಯದಲ್ಲಿ ಬೆಂಗಳೂರಿಗೆ 8 ವಿಕೆಟ್ ಗೆಲುವು!

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗಿದ್ದು, ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ತಂಡವು ಗೆಲುವಿನ ನಗೆ ಬೀರಿದೆ. ಇದೀಗ ತವರಿನಲ್ಲಿ ಲಖನೌ ತಂಡವನ್ನು ಮಣಿಸಿ ಧೋನಿ ಪಡೆ ಗೆಲುವಿನ ಖಾತೆ ತೆರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್‌ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಮೋಯಿನ್ ಅಲಿ, ಬೆನ್‌ ಸ್ಟೋಕ್ಸ್‌, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ಮಿಚೆಲ್ ಸ್ಯಾಂಟ್ನರ್‌, ದೀಪಕ್‌ ಚಹರ್‌, ಹಂಗ್ರೇಕರ್‌.

ಲಖನೌ: ಕೆ ಎಲ್ ರಾಹುಲ್‌(ನಾಯಕ), ಕೈಲ್ ಮೇಯರ್ಸ್‌, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಆಯುಷ್ ಬದೋನಿ, ಆವೇಶ್‌ ಖಾನ್, ರವಿ ಬಿಷ್ಣೋಯ್‌, ಜಯದೇವ್ ಉನಾದ್ಕತ್‌, ಮಾರ್ಕ್ ವುಡ್‌.

ಪಂದ್ಯ: ಸಂಜೆ.7.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದು, ಇಲ್ಲಿ ಬೃಹತ್‌ ಮೊತ್ತ ದಾಖಲಾದ ಉದಾಹರಣೆ ಕಡಿಮೆ. 2019ರಲ್ಲಿ ಸರಾಸರಿ 7.6ರ ರನ್‌ರೇಟ್‌ನಲ್ಲಿ ತಂಡಗಳು ರನ್‌ ಕಲೆಹಾಕಿದ್ದವು. ಇಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಹೆಚ್ಚು ಪಂದ್ಯ ಗೆದ್ದಿದೆ.