* ಲಖನೌ ತಂಡಕ್ಕಿಂದು ಸನ್‌ರೈಸರ್ಸ್ ಹೈದರಾಬಾದ್ ಸವಾಲು* ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ ಕೇನ್ ವಿಲಿಯಮ್ಸನ್ ಪಡೆ* ಬಲಿಷ್ಠ ಲಖನೌ ಪಡೆಗೆ ಸೋಲುಣಿಸುತ್ತಾ ಸನ್‌ರೈಸರ್ಸ್ ಹೈದರಾಬಾದ್?
ಮುಂಬೈ(ಏ.04): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 15ನೇ ಪಂದ್ಯದಲ್ಲಿಂದು ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವು ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಸವಾಲು ಸ್ವೀಕರಿಸಲು ಸಜ್ಜಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ, ಇದೀಗ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ.
ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಏಯ್ಡನ್ ಮಾರ್ಕ್‌ರಮ್ ಅರ್ಧಶತಕದ ಮೂಲಕ ಗಮನ ಸೆಳೆದಿದ್ದರು. ಇನ್ನು ಬೌಲಿಂಗ್‌ನಲ್ಲಿ ಉಮ್ರಾನ್ ಮಲಿಕ್ ಕೂಡಾ ಮಿಂಚಿನ ಪ್ರದರ್ಶನದ ಹೈದರಾಬಾದ್ ತಂಡಕ್ಕೆ ಕೊಂಚ ಹುರುಪು ಮೂಡಿಸಿದ್ದರು. ಇನ್ನೊಂದೆಡೆ, ಕೆ.ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 200ಕ್ಕೂ ಅಧಿಕ ರನ್ ಗುರಿಯನ್ನು ರೋಚಕವಾಗಿ ತಲುಪುವ ಮೂಲಕ ತಾನೆಷ್ಟು ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದೇವೆ ಎನ್ನುವುದನ್ನು ಸಾಬೀತು ಮಾಡಿದೆ. ಕಳೆದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್, ಆಯುಷ್ ಬದೋನಿ ಹಾಗೂ ಎವಿನ್ ಲೆವಿಸ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದಿಟ್ಟಿದ್ದರು. ಇವರ ಜತೆ ಕೆ.ಎಲ್. ರಾಹುಲ್ ಕೂಡಾ ಸಿಡಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಪಾಯ ತಪ್ಪಿದ್ದಲ್ಲ.
ಪಿಚ್ ರಿಪೋರ್ಟ್:
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿನ ಮೂರು ಪಂದ್ಯಗಳಿಗೆ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಆತಿಥ್ಯವನ್ನು ವಹಿಸಿದ್ದು, ಸ್ಪರ್ಧಾತ್ಮಕ ಪಿಚ್ ಎನಿಸಿದೆ. ಒಂದು ಪಂದ್ಯದಲ್ಲಿ ಇದೇ ಪಿಚ್‌ನಲ್ಲಿ 200 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿದ್ದರೆ, ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 193 ರನ್‌ಗಳ ಗುರಿಯನ್ನು ಕಾಪಾಡಿಕೊಳ್ಳುವಲ್ಲಿ ಸಹ ಯಶಸ್ವಿಯಾಗಿದೆ. ಇದೆಲ್ಲದರ ಹೊರತಾಗಿಯೂ ಸಂಜೆಯ ವೇಳೆಗೆ ಇಬ್ಬನಿ ಬೀಳುವುದರಿಂದ ಟಾಸ್ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ. ಹೀಗಾಗಿ ಟಾಸ್ ಗೆದ್ದಂತಹ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.
IPL 2022: ಚೆನ್ನೈ ಸೂಪರ್ ಕಿಂಗ್ಸ್ ತಬ್ಬಿಬ್ಬು ಮಾಡಿದ ವೈಭವ್ ಅರೋರಾ ಯಾರು ಗೊತ್ತಾ..?
ಇಂದಿನ ಪಂದ್ಯವನ್ನು ಗೆಲ್ಲೋರು ಯಾರು..?
ಮೇಲ್ನೋಟಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಯಾವುದೇ ಕ್ಷಣದಲ್ಲಾದರೂ ಕಮ್‌ಬ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆಯಾದರೂ, ಕೆ.ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಸಾಕಷ್ಟು ಬಲಿಷ್ಠವಾಗಿರುವಂತೆ ಕಂಡು ಬರುತ್ತಿದೆ. ಪವರ್ ಪ್ಲೇನಲ್ಲೇ ಲಖನೌ ತಂಡವು 50+ ರನ್ ಕಲೆಹಾಕಿದರೆ, ಹೈದರಾಬಾದ್ ಎದುರು ಹಿಡಿತ ಸಾಧಿಸಬಹುದಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಲಖನೌ ತಂಡವು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಲಖನೌ ಸೂಪರ್ ಜೈಂಟ್ಸ್: ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಎವಿನ್ ಲೆವಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ದುಸ್ಮಂತ್ ಚಮೀರ, ಆ್ಯಂಡ್ರೂ ಟೈ, ರವಿ ಬಿಷ್ಣೋಯ್, ಆವೇಶ್ ಖಾನ್.
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್(ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಏಯ್ಡನ್ ಮಾರ್ಕ್ರಮ್, ಅಬ್ದುಲ್ ಸಮದ್, ರೊಮ್ಯಾರಿಯೊ ಶೆಫರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.
ಸ್ಥಳ: ನವಿ ಮುಂಬೈಡಿ.ವೈ.ಪಾಟೀಲ್ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
