* ಪಂಜಾಬ್ ಕಿಂಗ್ಸ್ ತಂಡದ ಪರ ಮೊದಲ ಪಂದ್ಯದಲ್ಲೇ ಅಮೋಘ ಪ್ರದರ್ಶನ ತೋರಿದ ವೈಭವ್ ಅರೋರಾ* ಪವರ್‌ ಪ್ಲೇನಲ್ಲೇ ಉತ್ತಪ್ಪ, ಮೋಯಿನ್ ಅಲಿ ವಿಕೆಟ್ ಕಬಳಿಸಿ ಮಿಂಚಿದ ಬಲಗೈ ವೇಗಿ* 2 ಕೋಟಿ ರುಪಾಯಿಗೆ ಪಂಜಾಬ್ ಪಾಲಾಗಿರುವ ವೈಭವ್ ಅರೋರಾ ಕಮಾಲ್

ಬೆಂಗಳೂರು(ಏ.04): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಎದುರು ಮಯಾಂಕ್ ಅಗರ್‌ವಾಲ್ (Mayank Agarwal) ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 54 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್ ತಂಡವು ನೀಡಿದ್ದ 181 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೇವಲ 126 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿದೆ. ಇದೇ ವೇಳೆ ಪಂಜಾಬ್ ಕಿಂಗ್ಸ್ (Punjab Kings) ತಂಡದ ಪರ ಯುವ ವೇಗಿ ವೈಭವ್ ಅರೋರಾ ಅಮೋಘ ಪ್ರದರ್ಶನ ತೋರುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್‌ ವೈಭವ್ ಅರೋರಾ (Vaibhav Arora) ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದು, ಹಲವರ ಪಾಲಿಗೆ ಹುಬ್ಬೇರಿಸುವಂತೆ ಮಾಡಿತ್ತು. ಯಾಕೆಂದರೆ ಐಪಿಎಲ್‌ನಲ್ಲಿ ಅಪಾರ ಅನುಭವ ಹೊಂದಿರುವ ವೇಗಿ ಸಂದೀಪ್ ಶರ್ಮಾ ಅವರನ್ನು ಹೊರಗಿಟ್ಟು, ವೈಭವ್ ಅರೋರಾ ಅವರಿಗೆ ಮಣೆ ಹಾಕಲಾಗಿತ್ತು. ಆದರೆ ಯುವ ವೇಗಿ ತಮ್ಮ ಮೇಲೆ ತಂಡದ ಮ್ಯಾನೇಜ್‌ಮೆಂಟ್ ಇಟ್ಟಂತಹ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್‌ಗಳಾದ ರಾಬಿನ್ ಉತ್ತಪ್ಪ ಹಾಗೂ ಮೋಯಿನ್ ಅಲಿಯವರನ್ನು ಬಲಿ ಪಡೆಯುವ ಮೂಲಕ ಮ್ಯಾನೇಜ್‌ಮೆಂಟ್ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪವರ್‌ ಪ್ಲೇ ನಲ್ಲೇ ಈ ಇಬ್ಬರು ತಾರಾ ಆಟಗಾರರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಸಿಎಸ್‌ಕೆ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿಯುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ವೈಭವ್ ಅರೋರಾ ನಿಗದಿತ 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 2 ವಿಕೆಟ್ ಪಡೆದು ಗಮನ ಸೆಳೆದರು. ಅಷ್ಟಕ್ಕೂ ಯಾರು ಈ ವೈಭವ್ ಅರೋರಾ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Scroll to load tweet…

* ವೈಭವ್ ಅರೋರಾ ಡಿಸೆಂಬರ್ 14, 1994ರಲ್ಲಿ ಜನಿಸಿದ್ದಾರೆ. ಬಲಗೈ ವೇಗಿ ವೈಭವ್ ಅವರಿಗೀಗ 24 ವರ್ಷ ವಯಸ್ಸಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ವೈಭವ್ ಅರೋರಾ ಹಿಮಾಚಲ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವೈಭವ್ 2019ರಲ್ಲಿ ಸೌರಾಷ್ಟ್ರ ವಿರುದ್ದ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು

* ಹಿಮಾಚಲ ಪ್ರದೇಶ ಮೂಲದ ವೇಗಿ ವೈಭವ್ ಅರೋರಾ 2021ರಲ್ಲಿ ಛತ್ತೀಸ್‌ಘಡದ ಎದುರು ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2020ರ ಐಪಿಎಲ್ ವೇಳೆಗೆ ಪಂಜಾಬ್ ಕಿಂಗ್ಸ್ ತಂಡವು ವೈಭವ್ ಅವರನ್ನು ನೆಟ್ ಬೌಲರ್‌ ಆಗಿ ನೇಮಕ ಮಾಡಿಕೊಂಡಿತ್ತು.

IPL 2022 ಕೆಎಲ್ ರಾಹುಲ್ ಆಯ್ತು, ಮಯಾಂಕ್ ಟೀಮ್ ಮೇಲೂ ಸೋತ ಚೆನ್ನೈ ಸೂಪರ್ ಕಿಂಗ್ಸ್!

* ಈ ಮೊದಲು ವೈಭವ್ ಅರೋರಾ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡವು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ವೈಭವ್ ಕೆಕೆಆರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.

* ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ವೈಭವ್ ಅರೋರಾ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ಫ್ರಾಂಚೈಸಿಗಳ ನಡುವೆ ಸಾಕಷ್ಟು ಪೈಪೋಟಿ ವ್ಯಕ್ತವಾಯಿತು. ಆದರೆ ಅಂತಿಮವಾಗಿ 2 ಕೋಟಿ ರುಪಾಯಿ ನೀಡಿ ವೈಭವ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯಶಸ್ವಿಯಾಗಿದೆ.

* ವೈಭವ್ ಅರೋರಾ ಒಂದು ಹಂತದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕ್ರಿಕೆಟ್‌ನಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದರು. ಆದರೆ ಅವರ ಕೋಚ್ ರವಿ ವರ್ಮಾ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿದ್ದರಿಂದ ಕ್ರಿಕೆಟ್‌ನಲ್ಲೇ ಮುಂದುವರೆದಿದ್ದರು.