* ರಾಜಸ್ಥಾನ ರಾಯಲ್ಸ್‌ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ರಿಟೈರ್ಡ್ ಔಟ್‌* ಅಪರೂಪದ ಸನ್ನಿವೇಷಕ್ಕೆ ಸಾಕ್ಷಿಯಾದ ರಾಜಸ್ಥಾನ-ಲಖನೌ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯ* ಐಪಿಎಲ್‌ ಇತಿಹಾಸದಲ್ಲಿ ರಿಟೈರ್ಡ್‌ ಔಟ್ ಆದ ಮೊದಲ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

ಮುಂಬೈ(ಏ.11): ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ರವಿಚಂದ್ರನ್ ಅಶ್ವಿನ್‌ (Ravichandran Ashwin), ಭಾನುವಾರ ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧದ ಪಂದ್ಯದಲ್ಲಿ ರಿಟೈರ್‌-ಔಟ್‌ ಆದರು. ಐಪಿಎಲ್‌ನಲ್ಲಿ (IPL) ಇತಿಹಾಸದಲ್ಲಿ ಬ್ಯಾಟರ್‌ ಒಬ್ಬ ಈ ರೀತಿ ಸ್ವಯಂ ಪ್ರೇರಣೆ ಯಿಂದ ಔಟಾಗಿ ಹೊರನಡೆದಿದ್ದು ಇದೇ ಮೊದಲು. 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಅಶ್ವಿನ್‌, 23 ಎಸೆತದಲ್ಲಿ 28 ರನ್‌ ಗಳಿಸಿ ಇನ್ನಿಂಗ್ಸ್‌ನ 19ನೇ ಓವರ್‌ನ 2ನೇ ಎಸೆತದಲ್ಲಿ ಹೊರನಡೆದರು. ಫ್ರಾಂಚೈಸಿ ಟಿ20ಯಲ್ಲಿ ರಿಟೈರ್‌ ಔಟ್‌ ಆಗಿದ್ದು 2ನೇ ಬಾರಿ. 2019ರ ಬಾಂಗ್ಲಾ ಲೀಗ್‌ನಲ್ಲಿ ಸುನ್ಜುಮುಲ್‌ ಇಸ್ಲಾಂ ರಿಟೈರ್‌ ಔಟ್‌ ಆಗಿದ್ದರು.

ಈ ರೀತಿ ಸ್ವಯಂ ಪ್ರೇರಣೆ ಯಿಂದ ಔಟಾಗಿ ಪೆವಿಲಿಯನ್ ಸೇರುವುದು ಕ್ರಿಕೆಟ್‌ನಲ್ಲಿ ಅಪರೂಪದಲ್ಲೇ ಅಪರೂಪ ಎನ್ನಬಹುದು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಅಶ್ವಿನ್, ರಾಜಸ್ಥಾನ ರಾಯಲ್ಸ್ ಇನಿಂಗ್ಸ್‌ ಮುಕ್ತಾಯಕ್ಕೆ ಇನ್ನೂ 10 ಎಸೆತಗಳು ಬಾಕಿ ಇದ್ದಾಗಲೇ ದಿಢೀರ್ ಎನ್ನುವಂತೆ ರಿಟೈರ್ ಔಟ್ ಆಗಿ ಪೆವಿಲಿಯನ್ ಸೇರಿದ್ದು, ಹಲವು ಅಭಿಮಾನಿಗಳ ಪಾಲಿಗೆ ಸಾಕಷ್ಟು ಅಚ್ಚರಿ ಹಾಗೂ ಗೊಂದಲವನ್ನುಂಟು ಮಾಡಿತ್ತು. ಅಶ್ವಿನ್ ರಿಟೈರ್ ಔಟ್ ಆಗಿದ್ದರಿಂದ ರಯಾನ್ ಪರಾಗ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗಿಳಿದಿದ್ದರು.

ರಿಟೈರ್ ಔಟ್ (Tactically Retired Out) ಆಗುವುದು ಏಕಾಂಗಿಯಾಗಿ ರವಿಚಂದ್ರನ್ ಅಶ್ವಿನ್ ತೆಗೆದುಕೊಂಡ ತೀರ್ಮಾನವೇ ಎನ್ನುವುದು ತಕ್ಷಣಕ್ಕೆ ಅರಿವಿಗೆ ಬಂದಿರಲಿಲ್ಲ. ಆದರೆ ಆ ಬಳಿಕ ತಿಳಿದುಬಂದ ಸಂಗತಿಯೆಂದರೆ, ಇದು ಕೇವಲ ಅಶ್ವಿನ್ ವೈಯುಕ್ತಿಕ ನಿರ್ಧಾರವಾಗಿರಲಿಲ್ಲ, ಬದಲಾಗಿ ರಾಜಸ್ಥಾನ ರಾಯಲ್ಸ್ ತಂಡದ ನಿರ್ಧಾರವಾಗಿತ್ತು ಎನ್ನುವ ಸತ್ಯ ಬಯಲಾಗಿತ್ತು. ಈ ರೀತಿ ರಿಟೈರ್ ಔಟ್ ತೆಗೆದುಕೊಳ್ಳುವ ಉದ್ದೇಶವೆಂದರೆ, ಇವರ ನಂತರ ಬರುವ ಆಟಗಾರ ಇವರಿಗಿಂತ ಹೆಚ್ಚು ಚುರುಕಾಗಿ ರನ್ ಗಳಿಸಲಿ ಎನ್ನುವುದಾಗಿರುತ್ತದೆ. ಅಥವಾ ಮುಂದೆ ಬರುವ ಆಟಗಾರ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾನೆ ಎನ್ನುವ ಕಾರಣಕ್ಕೆ ಆಟಗಾರ ರಿಟೈರ್ ಔಟ್ ಪಡೆಯುತ್ತಾನೆ.

ರಿಟೈರ್ ಔಟ್ ಕುರಿತಂತೆ ಐಸಿಸಿ ನಿಯಮ ಏನು ಹೇಳುತ್ತದೆ..?

ಒಬ್ಬ ಬ್ಯಾಟರ್‌ ಅಂಪೈರ್ ಅನುಮತಿ ಪಡೆಯದೇ ಅಥವಾ ಎದುರಾಳಿ ತಂಡದ ನಾಯಕ ಅನುಮತಿ ಪಡೆಯದೇ ರಿಟೈರ್ ಔಟ್ ಆಗಿ ಪೆವಿಲಿಯನ್ ಸೇರಿದರೆ, ಆತನನ್ನು ಆ ಇನಿಂಗ್ಸ್‌ನಲ್ಲಿ ಔಟ್ ಎಂದೇ ಪರಿಗಣಿಸಲಾಗುತ್ತದೆ. ಆತ ಆ ಇನಿಂಗ್ಸ್‌ನಲ್ಲಿ ಮತ್ತೆ ಮೈದಾನಕ್ಕೆ ಬ್ಯಾಟಿಂಗ್‌ ಮಾಡಲಿಳಿಯಲು ಸಾಧ್ಯವಿಲ್ಲ. ಆತ ಉದ್ದೇಶಪೂರ್ವಕವಾಗಿಯೇ ಬ್ಯಾಟಿಂಗ್ ಸರಾಸರಿಯನ್ನು ಲೆಕ್ಕಾಚಾರ ಮಾಡಿಯೇ ಕ್ರೀಸ್ ತೊರೆದಿದ್ದಾನೆ ಎಂದು ಭಾವಿಸುವುದರಿಂದ ಆತನನ್ನು ಔಟ್ ಎಂದು ತೀರ್ಮಾನಿಸಲಾಗುತ್ತದೆ. 

IPL 2022 ರಾಜಸ್ಥಾನ ರಾಯಲ್ಸ್ ವಿರುದ್ಧ ಮುಗ್ಗರಿಸಿದ ಲಖನೌ ಸೂಪರ್ ಜೈಂಟ್ಸ್

ರವಿಚಂದ್ರನ್ ಅಶ್ವಿನ್ ಅವರ ರಿಟೈರ್ ಔಟ್ ಕುರಿತಂತೆ ಸಾಕಷ್ಟು ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದೆ. ಇದು ಅಶ್ವಿನ್ ಅವರ ಜಾಣ್ಮೆಯ ನಡೆ ಎಂದು ಬಣ್ಣಿಸಿದ್ದಾರೆ. ಇನ್ನು ಕೆಲವರು ಇದು ಕ್ರೀಡಾಸ್ಪೂರ್ತಿಗೆ ವಿರುದ್ದದವಾದದ್ದು ಎಂದಿದ್ದಾರೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡವು ತೆಗೆದುಕೊಂಡು ಈ ತೀರ್ಮಾನಕ್ಕೆ ಬೆಲೆ ತೆರುವಂತಾಯಿತು. ರಯಾನ್ ಪರಾಗ್ 4 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು. ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡವು 5 ವಿಕೆಟ್ ಕಳೆದುಕೊಂಡು 165 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಲಖನೌ ಸೂಪರ್ ಜೈಂಟ್ಸ್ ತಂಡವು 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು. ಯುಜುವೇಂದ್ರ ಚಹಲ್ ಮಿಂಚಿನ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು 3 ರನ್‌ಗಳ ರೋಚಕ ಜಯ ಸಾಧಿಸಿತು.