* ಪುಣೆಯಲ್ಲಿಂದು ಮುಂಬೈ ಇಂಡಿಯನ್ಸ್‌ಗೆ ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್ ಸವಾಲು* ಟೂರ್ನಿಯಲ್ಲಿ ಮೊದಲ ಗೆಲುವಿನ ಕನವರಿಕೆಯಲ್ಲಿದೆ ಮುಂಬೈ ಇಂಡಿಯನ್ಸ್* ಮುಂಬೈ ಎದುರು ಸವಾರಿ ಮಾಡಲು ಕೆಕೆಆರ್ ಪಡೆ ರೆಡಿ
ಪುಣೆ(ಏ.06): 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಗೆಲುವಿನ ಖಾತೆ ತೆರೆಯಲು ತುದಿಗಾಲಲ್ಲಿ ನಿಂತಿರುವ ಮುಂಬೈ ಇಂಡಿಯನ್ಸ್ (Mumbai Indians) ಬುಧವಾರ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್)ನ ಸವಾಲು ಎದುರಿಸಲು ಸಜ್ಜಾಗಿದೆ. 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ. ಆದರೆ ಕೆಕೆಆರ್ (KKR) ಹಾಲಿ ಚಾಂಪಿಯನ್ ಚೆನ್ನೈ ಹಾಗೂ ಪಂಜಾಬ್ ವಿರುದ್ಧ ಗೆದ್ದಿದ್ದು, ಅದೇ ಹುಮ್ಮಸ್ಸಿನಲ್ಲಿ ಮುಂಬೈ ವಿರುದ್ಧ ಕಣಕ್ಕಿಳಿಯಲಿದೆ.
ಸೋಲಿನ ಸುಳಿಯಲ್ಲಿ ಸಿಲುಕಿರುವ ತಂಡವನ್ನು ಗೆಲುವಿನ ಹಾದಿಗೆ ತರಬೇಕಾದ ಸವಾಲು ನಾಯಕ ರೋಹಿತ್ ಶರ್ಮಾ (Rohit Sharma) ಮುಂದಿದೆ. ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ (Ishan Kishan) ಮಿಂಚುತ್ತಿದ್ದು, ರೋಹಿತ್, ತಿಲಕ್ ವರ್ಮಾ ಸ್ಥಿರ ಪ್ರದರ್ಶನ ನೀಡುತ್ತಿರುವುದು ಕೊಂಚ ಸಮಾಧಾನಕರ ಸಂಗತಿ. ಸೂರ್ಯಕುಮಾರ್ ಯಾದವ್ ಲಭ್ಯತೆ ಇನ್ನೂ ಖಚಿತಗೊಂಡಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಟಿಮ್ ಡೇವಿಡ್ ಹಾಗೂ ಕೀರನ್ ಪೊಲ್ಲಾರ್ಡ್ ಅವರಿಂದ ನಿರೀಕ್ಷಿತ ಪ್ರದರ್ಶನವನ್ನು ಎದುರು ನೋಡುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಟೈಮಲ್ ಮಿಲ್ಸ್ ಹಾಗೂ ಡೇನಿಯಲ್ ಸ್ಯಾಮ್ಸ್ ಉತ್ತಮ ಸಾಥ್ ನೀಡಿದರೆ, ಕೆಕೆಆರ್ ತಂಡವು ಮುಂಬೈ ಅಲ್ಪ ಮೊತ್ತಕ್ಕೆ ಕಟ್ಟಿಹಾಕಬಹುದಾಗಿದೆ.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಹುರುಪಿನೊಂದಿಗೆ ಭರ್ಜರಿ ಪ್ರದರ್ಶನ ತೋರುತ್ತಿದೆ. ಶುಭ್‌ಮನ್ ಗಿಲ್, ಆಂಡ್ರೆ ರಸೆಲ್ ಅವರ ಬ್ಯಾಟಿಂದ ಅನಾಯಾಸವಾಗಿ ರನ್ ಹರಿದು ಬರುತ್ತಿವೆ. ಇನ್ನೊಂದೆಡೆ ಉಮೇಶ್ ಯಾದವ್ ಪವರ್ ಪ್ಲೇ ನಲ್ಲೇ ಎದುರಾಳಿ ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನುಳಿದಂತೆ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಹಾಗೂ ನಿತೀಶ್ ರಾಣಾ ಕೂಡಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೆ, ಮುಂಬೈ ಮೇಲೆ ಕೆಕೆಆರ್ ಸವಾರಿ ಮಾಡುವುದು ಕಷ್ಟವೇನಲ್ಲ.
IPL 2022 ಆರ್ ಸಿಬಿಗೆ ರಾಯಲ್ ಗೆಲುವು ನೀಡಿದ ದಿನೇಶ್ ಕಾರ್ತಿಕ್, ಶಾಬಾಜ್ ಅಹ್ಮದ್!
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡಗಳು ಒಟ್ಟು 29 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 29 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 22 ಬಾರಿ ಗೆಲುವು ದಾಖಲಿಸಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡವು 7 ಪಂದ್ಯಗಳಲ್ಲಿ ಮಾತ್ರ ಗೆಲುವಿನ ಕೇಕೆ ಹಾಕಿದೆ. ಆದರೆ ಪ್ರಸ್ತುತ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಐದು ಬಾರಿಯ ಐಪಿಎಲ್ ಚಾಂಪಿಯನ್ ರೋಹಿತ್ ಶರ್ಮಾ ಪಡೆಗೆ ಶಾಕ್ ನೀಡಲು ಸಜ್ಜಾಗಿದೆ.
ಸಂಭವನೀಯ ಆಟಗಾರರ ಪಟ್ಟಿ:
ಕೆಕೆಆರ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಮುಂಬೈ: ಇಶಾನ್ ಕಿಶನ್, ರೋಹಿತ್ ಶರ್ಮಾ(ನಾಯಕ), ಅನ್ಮೋಲ್‌ಪ್ರೀತ್ ಸಿಂಗ್, ತಿಲಕ್ ವರ್ಮಾ, ಕೀರನ್ ಪೊಲ್ಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್, ಬಾಸಿಲ್ ಥಂಪಿ, ಜಸ್‌ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಮುರುಗನ್ ಅಶ್ವಿನ್
ಸ್ಥಳ: ಎಂಸಿಎ ಕ್ರೀಡಾಂಗಣ ಪುಣೆ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ್: ಸ್ಟಾರ್ ಸ್ಪೋರ್ಟ್ಸ್
