* ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ* ರನ್ ಬೇಟೆಗಾರ, ಈಗ ಒಂದೊಂದು ರನ್ ಬಾರಿಸಲು ಪರದಾಟ* 71ನೇ ಶತಕಕ್ಕಾಗಿ ಎರಡುವರೆ ವರ್ಷಗಳಿಂದ ಕಾಯುತ್ತಿರುವ ಕಿಂಗ್ ಕೊಹ್ಲಿ
ಬೆಂಗಳೂರು(ಮೇ11): ಎಂಥಾ ಆಟಗಾರನಿಗೆ ಅದೆಂಥಾ ದುಸ್ಥಿತಿ. ಭಾರತೀಯ ಕ್ರಿಕೆಟ್ ಕಂಡ ಪ್ರಚಂಡ ಬ್ಯಾಟ್ಸ್ಮನ್, ಅಪ್ರತಿಮ ಮ್ಯಾಚ್ ವಿನ್ನರ್, ಚೇಸ್ ಮಾಸ್ಟರ್, ಬ್ಯಾಟ್ ಹಿಡಿದು ನಿಂತ್ರೆ ಬೌಲರ್ಗಳನ್ನು ಬೆಂಡೆತ್ತಿ ಹುರಿದು ಮುಕ್ಕಿ ಬಿಡುತ್ತಿದ್ದ ರಣ ಬೇಟೆಗಾರ, ರನ್ ಬೇಟೆಗಾರ. ಅದೇ ಬೇಟೆಗಾರನೀಗ ಒಂದೊಂದು ರನ್ಗೂ ಪರದಾಡುತ್ತಿದ್ದಾನೆ.
ಕ್ರಿಕೆಟ್ ಮೈದಾನದಲ್ಲಿ ಪ್ರಚಂಡನ ಘೋರ ವೈಫಲ್ಯ!:
ಯೆಸ್, ಇದು ಗ್ರಹಣವಲ್ಲದೆ ಮತ್ತಿನ್ನೇನೂ ಅಲ್ಲ. ಶರವೇಗದಲ್ಲಿ 70 ಅಂತಾರಾಷ್ಟ್ರೀಯ ಶತಕಗಳನ್ನು ಚಚ್ಚಿ ಬಿಸಾಕಿದ್ದ ಬ್ಯಾಟಿಂಗ್ ಮಾಸ್ಟರ್, 71ನೇ ಶತಕಕ್ಕಾಗಿ ಎರಡುವರೆ ವರ್ಷಗಳಿಂದ ಕಾಯುತ್ತಲೇ ಇದ್ದಾನೆ. ನಾಯಕತ್ವವನ್ನು ಬಿಟ್ಟು, ಒತ್ತಡಗಳನ್ನೆಲ್ಲಾ ಬದಿಗಿಟ್ಟು ಆಡಿದ್ರೂ ವಿರಾಟ್ ಕೊಹ್ಲಿಗೆ ರನ್ ಗಳಿಸಲಾಗುತ್ತಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಅಬ್ಬರ ಕಾದಿದೆ ಅಂತ ಕಾದು ಕುಳಿತವರಿಗೆ ವಿರಾಟ್ ಕೊಹ್ಲಿ (Virat Kohli) ನಿರಾಸೆ ಮಾಡಿ ಬಿಟ್ಟಿದ್ದಾನೆ.
ಈ ಸೀಸನ್ ಐಪಿಎಲ್ನಲ್ಲಿ ಆಡಿರೋ 12 ಇನ್ನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರೋದು ಕೇವಲ 216 ರನ್. ಸರಾಸರಿ 19.63, ಸ್ಟ್ರೈರ್ರೇಟ್ 11.34. ಇದು ಕೊಹ್ಲಿ ಆಟ ಅಲ್ಲವೇ ಇಲ್ಲ. ಕೊಹ್ಲಿಗೆ ಎದುರಾಗಿರೋ ದುಸ್ಥಿತಿಯನ್ನು ನೆನೆದು ಆತನ ಅಭಿಮಾನಿಗಳು ಮರುಗುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಯಾರದ್ದೋ ಕೃಪೆಯಿಂದ ಆಡಿದವನೂ ಅಲ್ಲ, ಯಾವುದೋ ಲಾಬಿಯಿಂದ ಇಲ್ಲಿಯವರೆಗೆ ಬಂದವನೂ ಅಲ್ಲ. ಆತನದ್ದು pure, pure, merit. ಆತ ಯಾರೋ ಚಿಲ್ಚು-ಪಲ್ಟುಗಳನ್ನು ಹೊಡೆದು ಸ್ಟಾರ್ ಆದವನಲ್ಲ. ಮದ್ದಾನೆಗಳ ಮದವನ್ನು ಕರಗಿಸಿದ ಭುಜಬಲವದು. ಕೂಕಬುರ ಚೆಂಡು ಭುಜದೆತ್ತರಕ್ಕೆ ನುಗ್ಗಿ ಬರುವ ಆಸ್ಟ್ರೇಲಿಯಾದಲ್ಲಿ, ಡ್ಯೂಕ್ ಬಾಲ್ ಯರ್ರಾಬಿರ್ರಿ ಸ್ವಿಂಗ್ ಆಗುವ ಇಂಗ್ಲೆಂಡ್ನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ನಾಲ್ಕು ನಾಲ್ಕು ಸೆಂಚುರಿ..! That is ವಿರಾಟ್ ಕೊಹ್ಲಿ.
ಈ 3 ಕಾರಣಕ್ಕಾಗಿಯಾದರೂ ಲೆಜೆಂಡ್ ಧೋನಿಯ IPL ನಿವೃತ್ತಿ ಚಿಂತೆ ಬಿಟ್ಟುಬಿಡಿ..!
ದಾಖಲೆಗಳನ್ನು ಮುರಿಯುತ್ತಾ ಮುನ್ನಗ್ಗುತ್ತಿದ್ದ ಆಧುನಿಕ ಕ್ರಿಕೆಟ್ನ ದಿಗ್ಗಜ ಆಟಗಾರನೀಗ ದಿಕ್ಕೇ ತೋಚದಂತೆ ನಿಂತು ಬಿಟ್ಟಿದ್ದಾನೆ. ವಿರಾಟ್ ಕೊಹ್ಲಿ ಇವತ್ತು ಸೆಂಚುರಿ ಹೊಡೀತಾನೆ, ನಾಳೆ ಹೊಡೀತಾನೆ. ಕೊಹ್ಲಿ ಬ್ಯಾಟ್ನಿಂದ ರನ್ ಪ್ರವಾಹ ಹರಿಯತ್ತೆ ಅಂತ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದ್ರೆ ಆ ದಿನ ಮಾತ್ರ ಬರ್ತಾನೇ ಇಲ್ಲ. ಹಾಗಾದ್ರೆ ಅಪ್ರತಿಮ ಆಟಗಾರನ ಕಥೆ ಮುಗಿದೇ ಹೋಯ್ತಾ..? ಖಂಡಿತಾ ಇಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಈಗ ಕವಿದಿರೋದು ಒಂದು ಗ್ರಹಣ ಅಷ್ಟೇ. ಜಗತ್ತಿಗೆ ಬೆಳಕು ಕೊಡುವ ಸೂರ್ಯನನ್ನೇ ಬಿಡದ ಗ್ರಹಣ, ವಿರಾಟ್ ಕೊಹ್ಲಿಯನ್ನು ಬಿಟ್ಟೀತೇ..? One bad season does not define years of legacy. Come Back Stronger Champ King Kohli.
