* ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಲು ಸಜ್ಜಾದ ಯುಜುವೇಂದ್ರ ಚಹಲ್* ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಮೌನ ಮುರಿದ ಲೆಗ್ ಸ್ಪಿನ್ನರ್* ಬೆಂಗಳೂರಿನ ಅಭಿಮಾನಿಗಳಿಗೆ ನಾನು ಯಾವತ್ತೂ ನಿಷ್ಠೆಯಿಂದ ಇರುತ್ತೇನೆಂದ ಚಹಲ್

ಮುಂಬೈ(ಮಾ.29): ಐಪಿಎಲ್‌ ಹರಾಜಿನಲ್ಲಿ (IPL Auction) ರಾಜಸ್ಥಾನ ರಾಯಲ್ಸ್‌ (Rajasthan Royals) ಪಾಲಾಗಿದ್ದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ (Yuzvendra Chahal), ತಮ್ಮ ಹಳೆಯ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) (Royal Challengers Bangalore) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2014ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಯುಜುವೇಂದ್ರ ಚಹಲ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ರಾಯಲ್ಸ್‌ ಪರ ಕಣಕ್ಕಿಳಿಯುವ ಮುನ್ನ ಯುಜುವೇಂದ್ರ ಚಹಲ್, ಆರ್‌ಸಿಬಿ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. 

ಕಳೆದ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 31 ವರ್ಷದ ಲೆಗ್ ಸ್ಪಿನ್ನರ್ ಚಹಲ್‌ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಮನಸ್ಸು ಮಾಡಿರಲಿಲ್ಲ. ಆರ್‌ಸಿಬಿ ತಂಡದ ಪರ ಚಹಲ್ 113 ಪಂದ್ಯಗಳನ್ನಾಡಿ 139 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಚಹಲ್‌ 139 ವಿಕೆಟ್ ಗಳಿಸಿದ್ದಾರೆ. ಮೆಗಾ ಹರಾಜಿನಲ್ಲಿ ಚಹಲ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 6.5 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಸೋಮವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ರೀಟೈನ್‌ ಮಾಡಿಕೊಳ್ಳುವ ಬಗ್ಗೆ ನನ್ನನ್ನು ಯಾರೂ ಕೇಳಲೇ ಇಲ್ಲ. ಹರಾಜಿನಲ್ಲಿ ಮತ್ತೆ ಖರೀದಿಸುತ್ತೇವೆ ಎಂದಷ್ಟೇ ತಂಡದ ಕ್ರಿಕೆಟ್‌ ಚಟುವಟಿಕೆಗಳ ನಿರ್ದೇಶಕ ಮೈಕ್‌ ಹೆಸನ್‌ ಹೇಳಿದರು. ರೀಟೈನ್‌ ಮಾಡುವುದಾ? ಎಂದು ಕೇಳಿದ್ದರೆ ಖಂಡಿತಾ ಒಪ್ಪುತ್ತಿದ್ದೆ. ಆರ್‌ಸಿಬಿ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಹಣ ಮುಖ್ಯವಲ್ಲ. ನಾನು ಹೆಚ್ಚು ವೇತನಕ್ಕೆ ಬೇಡಿಕೆಯಿಟ್ಟಿದ್ದೆ ಎಂದು ಸುದ್ದಿಯಾಗಿತ್ತು. ಅದೆಲ್ಲಾ ಸುಳ್ಳು. ಆರ್‌ಸಿಬಿಯೊಂದಿಗೆ ನನಗೆ ಭಾವನಾತ್ಮಕ ನಂಟಿದೆ. ಬೆಂಗಳೂರಿನ ಅಭಿಮಾನಿಗಳಿಗೆ ನಾನು ಯಾವತ್ತೂ ನಿಷ್ಠೆಯಿಂದ ಇರುತ್ತೇನೆ ಎಂದಿದ್ದಾರೆ. 

ಆರ್‌ಸಿಬಿ ಫ್ರಾಂಚೈಸಿಯು ಆಟಗಾರರ ರೀಟೈನ್ ಮಾಡಿಕೊಳ್ಳುವ ಮುನ್ನ ತಂಡದ ಕ್ರಿಕೆಟ್‌ ಚಟುವಟಿಕೆಗಳ ನಿರ್ದೇಶಕ ಮೈಕ್‌ ಹೆಸನ್‌ ನನಗೆ ಕರೆ ಮಾಡಿ, ಯುಜಿ ನಾವು ಈ ಬಾರಿ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಿಮ್ಮನ್ನು ನಾವು ಹರಾಜಿನಲ್ಲಿ ಖರೀದಿಸುತ್ತೇವೆ ಎಂದಷ್ಟೇ ಹೇಳಿದ್ದರು ಎಂದು ಚಹಲ್ ಹೇಳಿದ್ದಾರೆ. ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರನ್ನು ರೀಟೈನ್ ಮಾಡಿಕೊಂಡಿತ್ತು.

IPL 2022: ಸನ್‌ರೈಸರ್ಸ್‌ ಸವಾಲು ಗೆಲ್ಲುತ್ತಾ ರಾಜಸ್ಥಾನ ರಾಯಲ್ಸ್‌..?

ನಾನು ಎಲ್ಲಿಂದ ಐಪಿಎಲ್ ಪಯಣ ಆರಂಭಿಸಿದ್ದೆನೋ ಅಲ್ಲಿಗೆ ವಾಪಾಸ್ಸಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಚಹಲ್ ಹೇಳಿದ್ದಾರೆ. 2010ರಲ್ಲಿ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿಯು ಯುಜುವೇಂದ್ರ ಚಹಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಆ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಹಲ್ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ಇನ್ನು 2013ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಚಹಲ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಮರು ವರ್ಷ ಆರ್‌ಸಿಬಿ ಕೂಡಿಕೊಂಡ ಚಹಲ್, ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು

ಇದೀಗ ರಾಜಸ್ಥಾನ ರಾಯಲ್ಸ್ ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಲು ಸಜ್ಜಾಗಿದ್ದು, ಪುಣೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಕಣಕ್ಕಿಳಿಯುವ ಮೂಲಕ ರಾಯಲ್ಸ್ ತನ್ನ ಅಭಿಯಾನವನ್ನು ಆರಂಭಿಸಲಿದೆ. ಯುಜುವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್ ಜೋಡಿ, ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.