* ಕೋಲ್ಕತಾ ನೈಟ್ ರೈಡರ್ಸ್‌ಗಿಂದು ಮುಂಬೈ ಇಂಡಿಯನ್ಸ್‌ ಸವಾಲು* ಅಂಕಪಟ್ಟಿಯಲ್ಲಿ ಕೊನೆಯ 2 ಸ್ಥಾನದಲ್ಲಿರುವ ತಂಡಗಳ ನಡುವಿನ ಪೈಪೋಟಿ* ಕಳೆದ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಕೋಲ್ಕತಾ ನೈಟ್ ರೈಡರ್ಸ್

ನವಿ ಮುಂಬೈ(ಮೇ.09): ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಬಹುತೇಕ ಹೊರಬಿದ್ದಿರುವ ಕೋಲ್ಕತಾ ನೈಟ್‌ರೈಡ​ರ್ಸ್‌ (Kolkata Knight Riders) ಸೋಮವಾರ ಮುಖಾಮುಖಿಯಾಗಲಿವೆ. ಈ ಪಂದ್ಯ ಹೆಚ್ಚೇನೂ ಮಹತ್ವ ಪಡೆದಿಲ್ಲ. ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ತಂಡಗಳ ನಡುವಿನ ಹೋರಾಟಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಸಾಕ್ಷಿಯಾಗಲಿದೆ. 

ಕಳೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ 5 ರನ್‌ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿದ್ದ ಮುಂಬೈ ಇಂಡಿಯನ್ಸ್‌, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ತಂಡ ತನ್ನ ಬೆಂಚ್‌ ಶಕ್ತಿಯನ್ನು ಪರೀಕ್ಷಿಸಲು ಈ ಪಂದ್ಯವನ್ನು ಉಪಯೋಗಿಸಿಕೊಳ್ಳಬಹುದು. ಮತ್ತೊಂದೆಡೆ ಲಖನೌ ಸೂಪರ್‌ ಜೈಂಟ್‌ ವಿರುದ್ಧ 75 ರನ್‌ ಹೀನಾಯ ಸೋಲು ಅನುಭವಿಸಿ ಆಘಾತಕ್ಕೊಳಗಾಗಿರುವ ಕೆಕೆಆರ್‌, ಪುಟಿದೇಳಬೇಕಾದ ಒತ್ತಡದಲ್ಲಿದೆ. ತಂಡದ ಬಹುತೇಕ ಪ್ರಯೋಗಗಳು ಕೈಕೊಡುತ್ತಿದ್ದು ನಾಯಕ ಶ್ರೇಯಸ್‌ ಅಯ್ಯರ್‌ಗೆ ತಲೆಬಿಸಿ ಉಂಟು ಮಾಡಿದೆ.

ರೋಹಿತ್ ಶರ್ಮಾ (Rohit Sharma) ನೇತೃತ್ವದ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು 10 ಪಂದ್ಯಗಳನ್ನಾಡಿ ಕೇವಲ 2 ಗೆಲುವು ಹಾಗೂ 8 ಸೋಲುಗಳೊಂದಿಗೆ ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನುಳಿದ ಕೆಲ ಪಂದ್ಯಗಳನ್ನು ಗೆದ್ದು ತಮ್ಮ ಅಭಿಮಾನಿಗಳನ್ನು ರಂಜಿಸುವ ಲೆಕ್ಕಾಚಾರದಲ್ಲಿ ಮುಂಬೈ ಇಂಡಿಯನ್ಸ್‌. ಇನ್ನೊಂದೆಡೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು 11 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಪ್ರತಿಷ್ಠೆಗಾಗಿ ಕಾದಾಡಲು ಸಜ್ಜಾಗಿದೆ. 

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೀನಾಯ ಸೋಲು

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೂ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ಎದುರು ಸ್ಪಷ್ಟ ಮೇಲುಗೈ ಸಾಧಿಸಿದೆ. 30 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 22 ಬಾರಿ ಗೆಲುವು ದಾಖಲಿಸಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡವು 8 ಬಾರಿ ಗೆಲುವಿನ ನಗೆ ಬೀರಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರನ್ ಪೊಲ್ಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್‌, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ರೀಲೆ ಮೆರಿಡಿತ್.

ಕೋಲ್ಕತಾ ನೈಟ್ ರೈಡರ್ಸ್
ಆರೋನ್ ಫಿಂಚ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್‌ ಜಾಕ್ಸನ್, ಆಂಡ್ರೆ ರಸೆಲ್, ಅನ್ಕೂಲ್ ರಾಯ್, ಸುನಿಲ್ ನರೇನ್, ಟಿಮ್ ಸೌಥಿ, ಉಮೇಶ್ ಯಾದವ್, ಹರ್ಷಿತ್ ರಾಣಾ

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂ, 
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌