* ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌* ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಮಹೇಂದ್ರ ಸಿಂಗ್ ಧೋನಿ ಪಡೆ* ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ ಆಫ್‌ ಹಾದಿ ಮತ್ತಷ್ಟು ದುರ್ಗಮ

ನವಿ ಮುಂಬೈ(ಮೇ.08): ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು, ಡೆಲ್ಲಿ ಕ್ಯಾಪಿಟಲ್ಸ್‌ ಎದುರು 91 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಭಾರೀ ಅಂತರದ ಗೆಲುವಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇ ಆಫ್‌ ಕನಸು ಮತ್ತೊಮ್ಮೆ ಚಿಗುರೊಡೆಯಲಾರಂಭಿಸಿದೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್‌ ನೀಡಿದ್ದ 209 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಲು ಮತ್ತೊಮ್ಮೆ ವಿಫಲವಾಯಿತು. ಪೃಥ್ವಿ ಶಾ ಅನುಸ್ಥಿತಿಯಲ್ಲಿ ಮನ್ದೀಪ್ ಸಿಂಗ್ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಕೆ.ಎಸ್ ಭರತ್ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ಭರತ್ 8 ರನ್ ಬಾರಿಸಿ ಸಿಮರ್‌ಜಿತ್‌ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್‌ ಕೊಂಚ ಪ್ರತಿರೋಧ ತೋರಲು ಪ್ರಯತ್ನಿಸಿದರು. ವಾರ್ನರ್‌ 19 ರನ್ ಬಾರಿಸಿ ಮಹೀಶ್ ತೀಕ್ಷಣಗೆ ವಿಕೆಟ್ ಒಪ್ಪಿಸಿದರೆ, ಮಿಚೆಲ್ ಮಾರ್ಷ್ ಬ್ಯಾಟಿಂಗ್ 25 ರನ್‌ಗಳಿಗೆ ಸೀಮಿತವಾಯಿತು. ನಾಯಕ ರಿಷಭ್ ಪಂತ್ ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಲು ವಿಫಲರಾದರು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮದಲ್ಲಿ ರೋಮನ್ ಪೊವೆಲ್, ರಿಪಾಲ್ ಪಟೇಲ್ ಹಾಗೂ ಅಕ್ಷರ್ ಪಟೇಲ್‌ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಶಾರ್ದೂಲ್ ಠಾಕೂರ್ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 24 ರನ್ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗೆಲುವಿನ ಆಸೆ ಕೈಚೆಲ್ಲಿತು.