ಮುಂಬೈ ಇಂಡಿಯನ್ಸ್ ತಂಡದ ಸೋಲುಗಳ ಸರಮಾಲೆ ಕೊನೆಯೇ ಆಗುತ್ತಿಲ್ಲ. ಡೆವಾಲ್ಡ್ ಬ್ರೇವಿಸ್ ಹಾಗೂ ಸೂರ್ಯಕುಮಾರ್ ಯಾದವ್ ಸಾಹಸಿಕ ಆಟದ ನಡುವೆಯೂ ಪಂದ್ಯದ ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಾಯಾಂಕ್ ಅಗರ್ವಾಲ್ ಮಾಡಿದ ಕೆಲ ಚಾಣಾಕ್ಷ ನಿರ್ಧಾರಗಳು ತಂಡದ ಗೆಲುವಿಗೆ ಕಾರಣವಾಯಿತು.
ಪುಣೆ (ಏ.13): ಕೊನೇ ಓವರ್ ಗಳಲ್ಲಿ ನಾಯಕ ಮಾಯಾಂಕ್ ಅಗರ್ವಾಲ್ (Mayank Agarwal) ಅವರ ಚಾಣಾಕ್ಷ ಬೌಲಿಂಗ್ ಆಯ್ಕೆಯ ನೆರವಿನಿಂದ ಪಂಜಾಬ್ ಕಿಂಗ್ಸ್ (unjab Kings) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು 12 ರನ್ ಗಳಿಂದ ಮಣಿಸಿ ಮೂರನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ (MI), ಐದು ಸೋಲುಗಳನ್ನು ಕಂಡಂತಾಗಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (PBKS) ತಂಡ, ಶಿಖರ್ ಧವನ್ (70ರನ್, 50 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಮಯಾಂಕ್ ಅಗರ್ವಾಲ್ (52ರನ್, 32 ಎಸೆತ, 6 ಬೌಂಡರಿ, 2 ಸಿಕ್ಸರ್) ಆಕರ್ಷಕ ಅರ್ಧಶತಕದಿಂದ 5 ವಿಕೆಟ್ ಗೆ 198 ರನ್ ಪೇರಿಸಿತ್ತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್, ಡೆವಾಲ್ಡ್ ಬ್ರೇವಿಸ್ (49 ರನ್, 25 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (43 ರನ್, 30 ಎಸೆತ, 1 ಬೌಂಡರಿ, 4 ಸಿಕ್ಸರ್) ನಿರ್ವಹಣೆಯಿಂದ ಹೋರಾಟ ತೋರಿದರೂ ಕೊನೆಗೆ 9 ವಿಕೆಟ್ ಗೆ 186 ರನ್ ಪೇರಿಸಿ ಸೋಲು ಕಂಡಿತು.
ಮುಂಬೈ ತಂಡದ ಚೇಸಿಂಗ್ ಉತ್ತಮವಾಗಿರಲಿಲ್ಲ. ಹಾಲಿ ಆವೃತ್ತಿಯಲ್ಲಿ ಕಳಪೆ ಆರಂಭಿಕ ಜೊತೆಯಾಟದ ಕಾರಣದಿಂದಾಗಿ ಮುಂಬೈ ಹಿನ್ನಡೆ ಕಂಡಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಅದೇ ಪುನರಾವರ್ತನೆಯಾಯಿತು. ರೋಹಿತ್ ಶರ್ಮ (28 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಇಶಾನ್ ಕಿಶನ್ (3) ಮೊದಲ ವಿಕೆಟ್ ಗೆ 22 ಎಸೆತಗಳಲ್ಲಿ 31 ರನ್ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಹೆಚ್ಚಿನ ಪಾಲು ನೀಡಿದ್ದ ರೋಹಿತ್ ಶರ್ಮ, ರಬಾಡ ಎಸೆದ ನಾಲ್ಕನೇ ಓವರ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಕ್ಕೂ ಮುನ್ನ ಎರಡು ಮನಮೋಹಕ ಸಿಕ್ಸರ್ ಗಳು ಅವರ ಬ್ಯಾಟ್ ನಿಂದ ಬಂದಿದ್ದವು. ಇನ್ನೊಂದೆಡೆ ರನ್ ಗಳಿಸಲು ಪರದಾಟ ನಡೆಸುತ್ತಿರುವ ಇಶಾನ್ ಕಿಶನ್, ರೋಹಿತ್ ಶರ್ಮ ಔಟಾದ ಮೊತ್ತಕ್ಕೆ 1 ರನ್ ಸೇರಿಸುವ ವೇಳೆಗೆ ನಿರ್ಗಮಿಸಿದರು.
32 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ (49ರನ್, 25 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ತಿಲಕ್ ವರ್ಮ (36 ರನ್, 20 ಎಸೆತ, 3 ಬೌಂಡರಿ, 2 ಸಿಕ್ಸರ್) 2ನೇ ವಿಕೆಟ್ ಗೆ ಆಕರ್ಷಕ 84 ರನ್ ಜೊತೆಯಾಟವಾಡಿ ಮುಂಬೈ ತಂಡಕ್ಕೆ ಗೆಲುವಿನ ಮುನ್ಸೂಚನೆ ನೀಡಿದ್ದರು. ತಮ್ಮ 19ನೇ ವರ್ಷದ ಜನ್ಮದಿನಕ್ಕೆ ಇನ್ನೂ ಎರಡು ವಾರಗಳನ್ನು ಹೊಂದಿರುವ ಬ್ರೇವಿಸ್, ರಾಹುಲ್ ಚಹರ್ ಎಸೆದ ಒಂದೇ ಓವರ್ ನಲ್ಲಿ ಸತತ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ಮುಂಬೈ ಹೋರಾಟಕ್ಕೆ ಜೀವ ತುಂಬಿದ್ದರು. ಅಲ್ಲಿಯವರೆಗೂ ಪಂದ್ಯದ ಫಲಿತಾಂಶ ಏನಾಗಬಹುದೋ ಎನ್ನುವ ಚಿಂತೆಯಲ್ಲಿದ್ದ ಮುಂಬೈ, ಆ ಬಳಿಕ ವಿಜಯದ ವಿಶ್ವಾಸ ಪಡೆದುಕೊಂಡಿತ್ತು.
IPL 2022 ಧವನ್, ಮಾಯಾಂಕ್ ಸೂಪರ್ ಫಿಪ್ಟಿ, ಮುಂಬೈಗೆ 199 ರನ್ ಟಾರ್ಗೆಟ್
ಬ್ರೇವಿಸ್ ಅಬ್ಬರಿಸಿದ ಎರಡು ಓವರ್ ಗಳ ಬಳಿಕ, ತಿಲಕ್ ವರ್ಮ ಹಾಗೂ ಬ್ರೇವಿಸ್ ಜೋಡಿ ಒಡಿಯನ್ ಸ್ಮಿತ್ ಅವರ ಒಂದೇ ಓವರ್ ನಲ್ಲಿ 23 ರನ್ ದೋಚಿತು. ಆದರೆ, ಈ ಓವರ್ ನ ಕೊನೆಯಲ್ಲಿ ಬ್ರೇವಿಸ್ 1 ರನ್ ನಿಂದ ಅರ್ಧಶತಕ ವಂಚಿತರಾಗಿ ಹೊರನಡೆದರು. ಈ ಮೊತ್ತಕ್ಕೆ 15 ರನ್ ಸೇರಿಸುವ ವೇಳೆಗೆ ತಿಲಕ್ ವರ್ಮ ಹಾಗೂ ಸೂರ್ಯಕುಮಾರ್ ಯಾದವ್, ವೇಗದ ಸಿಂಗಲ್ ರನ್ ತೆಗೆಯುವ ಯತ್ನದಲ್ಲಿ ತಿಲಕ್ ವರ್ಮ ಡಗ್ ಔಟ್ ಸೇರಿಕೊಂಡರು. 11 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 10 ರನ್ ಬಾರಿಸಿದ ಕೈರಾನ್ ಪೊಲ್ಲಾರ್ಡ್ ತಂಡದ ಮೊತ್ತ 150ರ ಗಡಿ ದಾಟಿದ ಬಳಿಕ ಔಟಾಗಿ ಹೊರನಡೆದರು.
IPL 2022: ಮುಂಬೈ ಇಂಡಿಯನ್ಸ್ಗೂ ಮೆಗಾ ಹರಾಜಿಗೂ ಆಗಿ ಬರಲ್ವಾ..?
ಟಿ20 ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ರೋಹಿತ್ ಶರ್ಮ: ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ವಿಶ್ವದ 7ನೇ ಹಾಗೂ ಭಾರತದ 2ನೇ ಆಟಗಾರ ರೋಹಿತ್ ಶರ್ಮ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಈ ಮೈಲಿಗಲ್ಲು ಕ್ರಮಿಸಿದ್ದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (14562), ಶೋಯೆಬ್ ಮಲೀಕ್ (11698), ಕೈರಾನ್ ಪೊಲ್ಲಾರ್ಡ್ (11485), ಆರನ್ ಫಿಂಚ್ (10499), ವಿರಾಟ್ ಕೊಹ್ಲಿ (10379) ಹಾಗೂ ಡೇವಿಡ್ ವಾರ್ನರ್ (10373) ರೋಹಿತ್ ಶರ್ಮ (10003) ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.
