ಹಾಲಿ ಐಪಿಎಲ್ ನಲ್ಲಿ ಮಾಯಾಂಕ್ ಅಗರ್ವಾಲ್ ಬಾರಿಸಿದ ಮೊದಲ ಅರ್ಧಶತಕ ಹಾಗೂ ಅನುಭವಿ ಶಿಖರ್ ಧವನ್ ಬಾರಿಸಿದ ಫಿಫ್ಟಿ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಗೆಲುವಿಗೆ ಬೃಹತ್ ಮೊತ್ತದ ಗುರಿ ನೀಡಿದೆ.

ಪುಣೆ (ಏ. 13): ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ (Shikhar Dhawan) ಹಾಗೂ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಮೊದಲ ವಿಕೆಟ್ ಗೆ ಆಡಿದ ಅದ್ಭುತ ಜೊತೆಯಾಟ ಹಾಗೂ ವೈಯಕ್ತಿಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮುಂಬೈ ಇಂಡಿಯನ್ಸ್ (Mumbai Indians)ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ (PBKS) ತಂಡ, ಶಿಖರ್ ಧವನ್ (70ರನ್, 50 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಮಯಾಂಕ್ ಅಗರ್ವಾಲ್ (52ರನ್, 32 ಎಸೆತ, 6 ಬೌಂಡರಿ, 2 ಸಿಕ್ಸರ್) ಬಾರಿಸಿದ ಅರ್ಧಶತಕಗಳ ಕಾಣಿಕೆಯ ನೆರವಿನಿಂದ 5 ವಿಕೆಟ್ ಗೆ 198 ರನ್ ಕಲೆಹಾಕಿತು. ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈ (MI) ತಂಡ ಗೆಲುವಿಗಾಗಿ 199 ರನ್ ಪೇರಿಸಬೇಕಿದೆ.

17ನೇ ಓವರ್ ನ ಕೊನೆಯ ಎಸೆತದಲ್ಲಿ ಧವನ್ ವಿಕೆಟ್ ಕಳೆದುಕೊಂಡ ಪಂಜಾಬ್ ತಂಡಕ್ಕೆ ಜಿತೇಶ್ ಶರ್ಮ (30ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಶಾರುಖ್ ಖಾನ್ (15 ರನ್, 6 ಎಸೆತ, 2 ಸಿಕ್ಸರ್) 5ನೇ ವಿಕೆಟ್ ಗೆ 16 ಎಸೆತಗಳಲ್ಲಿ 46 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 195ರ ಗಡಿ ದಾಟಿಸಲು ನೆರವಾದರು.

ಹಾಲಿ ಆವೃತ್ತಿಯಲ್ಲಿ ಈವರೆಗೂ 32, 1, 4 ಹಾಗೂ 5 ರನ್ ಬಾರಿಸಿದ್ದ ಮಾಯಾಂಕ್ ಅಗರ್ವಾಲ್, 30 ಎಸೆತಗಳ ಅರ್ಧಶತಕ ಸಿಡಿಸುವ ಮೂಲಕ ಈ ಬಾರಿ ಅಬ್ಬರಿಸಿದರು. ಪ್ರತಿ ಬಾರಿಯೂ ಆಕ್ರಮಣಕಾರಿ ಆಟವಾಡುವ ಪ್ರಯತ್ನದ ವೇಳೆ ಔಟಾಗುತ್ತಿದ್ದ ಮಾಯಾಂಕ್ ಅಗರ್ವಾಲ್ ಗೆ ಈ ಬಾರಿ ಹಾಗಾಗಲಿಲ್ಲ. ಬಸಿಲ್ ಥಂಪಿ ಹಾಗೂ ಜಸ್ ಪ್ರೀತ್ ಬುಮ್ರಾ ಅವರ ಓವರ್ ಗಳಿಂದ ಆತಂಕ ಎದುರಿಸಿದರೂ, ಪಂಜಾಬ್ ತಂಡ ಮೊದಲ ಮೂರು ಓವರ್ ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಲು ಯಶ ಕಂಡಿತ್ತು.

ಐದನೇ ಓವರ್ ಎಸೆಯಲು ಬಂದ ಮುರುಗನ್ ಅಶ್ವಿನ್ ಗೆ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಮಾಯಾಂಕ್ ಅಗರ್ವಾಲ್ ಅಬ್ಬರಿಸುವ ಸೂಚನೆ ನೀಡಿದ್ದರು. ಮುರುಗನ್ ಅಶ್ವಿನ್ ಓವರ್ ನಲ್ಲಿ ಪಂಜಾಬ್ ತಂಡ 17 ರನ್ ಗಳಿಸಿತು. ಟೈಮಲ್ ಮಿಲ್ಸ್ ಎಸೆದ 6ನೇ ಓವರ್ ನಲ್ಲಿ 12 ರನ್ ದೋಚುವುದರೊಂದಿಗೆ ಪವರ್ ಪ್ಲೇ ಅವಧಿಯಲ್ಲಿ 65 ರನ್ ಬಾರಿಸಿತು. ಇದು ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಪವರ್ ಪ್ಲೇ ಅವಧಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತ ಎನಿಸಿದೆ. ಮಿಲ್ಸ್ ಎಸೆದ 9ನೇ ಓವರ್ ನಲ್ಲಿ ಲಾಂಗ್ ಅಫ್ ನಲ್ಲಿ ಆಕರ್ಷಕ ಸಿಕ್ಸರ್ ಸಿಡಿಸಿದ ಮಾಯಾಂಕ್ ಅಗರ್ವಾಲ್, 2022 ಐಪಿಎಲ್ ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಕೇವಲ 30 ಎಸೆತಗಳಲ್ಲಿ ಪೂರೈಸಿದರು. ಆದರೆ, ತಾವು ಎಸೆದ ಮರು ಎಸೆತದಲ್ಲಿಯೇ, ಸೂರ್ಯಕುಮಾರ್ ಯಾದವ್ ಗೆ ಕ್ಯಾಚ್ ನೀಡಿ ಹೊರನಡೆದರು. ಈ ಜೋಡಿ ಮೊದಲ ವಿಕೆಟ್ ಗೆ 57 ಎಸೆತಗಳಲ್ಲಿ 97 ರನ್ ಜೊತೆಯಾಟವಾಡಿತ್ತು

IPL 2022 ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈಗೆ ಒಲಿದ ಟಾಸ್!

ಕೆಲ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡ ಪಂಜಾಬ್:
ಮಯಾಂಕ್ ನಿರ್ಗಮನದ ಬಳಿಕ ಪಂಜಾಬ್ ಕೆಲ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತು. 13 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 12 ರನ್ ಬಾರಿಸಿದ್ದ ಜಾನಿ ಬೇರ್ ಸ್ಟೋ, ಉನಾದ್ಕತ್ ಗೆ ಬೌಲ್ಡ್ ಆದರೆ, ಪಂಜಾಬ್ ಪರವಾಗಿ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಲಿಯಾಮ್ ಲಿವಿಂಗ್ ಸ್ಟೋನ್ (2) ಮುಂಬೈ ವಿರುದ್ಧ ಗಮನಸೆಳೆಯಲು ವಿಫಲವಾಗಿ ಬುಮ್ರಾಗೆ ಬೌಲ್ಡ್ ಆದರು. ಒಂದು ಹಂತದಲ್ಲಿ 18 ಎಸೆತಗಳಲ್ಲಿ 20 ರನ್ ಬಾರಿಸಿದ ಶಿಖರ್ ಧವನ್ ನಂತರದ 19 ಎಸೆತಗಳಲ್ಲಿ 30 ರನ್ ಸಿಡಿಸಿ, 37 ಎಸೆತಗಳಲ್ಲಿ ತಮ್ಮ 45ನೇ ಅರ್ಧಶತಕ ಪೂರೈಸಿದರು. ಆ ಬಳಿಕ ಕೆಲ ಆಕರ್ಷಕ ಬೌಂಡರಿಗಳನ್ನು ಬಾರಿಸಿ ತಂಡದ ಮೊತ್ತವನ್ನು ಏರಿಸಲು ನೆರವಾದರು.

Kuldeep Yadav: ಇದು ಅವಮಾನ ಮೆಟ್ಟಿನಿಂತ ಛಲಗಾರ ಸ್ಟೋರಿ

47ನೇ ಅರ್ಧಶತಕ ಸಿಡಿಸಿದ ಧವನ್: ಐಪಿಎಲ್ ನಲ್ಲಿ ಶಿಖರ್ ಧವನ್ 47ನೇ ಅರ್ಧಶತಕ ಪೂರೈಸಿದರು. ಆ ಮೂಲಕ ಐಪಿಎಲ್ ನಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಜಂಟಿ 2ನೇ ಸ್ಥಾನ ಪಡೆದುಕೊಂಡರು. 55 ಅರ್ಧಶತಕ ಬಾರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ.