IPL 2022 ಗೆಲುವಿನೊಂದಿಗೆ ಪಂಜಾಬ್ ವಿದಾಯ, 8ನೇ ಸ್ಥಾನಕ್ಕೆ ತೃಪ್ತಿಪಟ್ಟ ಹೈದರಾಬಾದ್!
- ಗೆಲುವಿನೊಂದಿಗೆ ಟೂರ್ನಿಗೆ ಪಂಜಾಬ್ ವಿದಾಯ
- ಕೊನೆ ಲೀಗ್ ಪಂದ್ಯದಲ್ಲಿ ಹೈದರಾಬಾದ್‌ಗೆ ಸೋಲು
- ಹೈದರಾಬಾದ್ ವಿರುದ್ಧ ಪಂಜಾಬ್ 5 ವಿಕೆಟ್ ಗೆಲುವು
ಮುಂಬೈ(ಮೇ.22): ಐಪಿಎಲ್ 2022 ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವಿನ ನಗೆ ಬೀರಿದೆ. ಈ ಮೂಲಕ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಪಂಜಾಬ್ ವಿರುದ್ಧ ಮುಗ್ಗರಿಸಿದ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಐಪಿಎಲ್ 2022 ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 7ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿದಿದೆ. 6ನೇ ಸ್ಥಾನದಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ 7ನೇ ಸ್ಥಾನಕ್ಕೆ ಕುಸಿದಿದೆ.
ಗೆಲುವಿಗೆ 158 ರನ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ 28 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಜಾನಿ ಬೈರ್‌ಸ್ಟೋ 23 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶಾರೂಖ್ ಖಾನ್ 19 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನ್ ಹೋರಾಟ ಮುಂದುವರಿಸಿದರು.
RCB Playoff ಧನ್ಯವಾದ ಮುಂಬೈ, ಈ ಉಪಕಾರ ಮರೆಯಲ್ಲ ಎಂದ ಕೊಹ್ಲಿ ಅಂಡ್ ಬಾಯ್ಸ್!
ನಾಯಕ ಮಯಾಂಕ್ ಅಗರ್ವಾಲ್ ಕೊನೆಯ ಪಂದ್ಯದಲ್ಲಿ ಅಬ್ಬರಿಸಲು ವಿಫಲರಾದರು. ಮಯಾಂಕ್ ಕೇವಲ 1 ರನ್ ಸಿಡಿಸಿ ಔಟಾದರು. 71 ರನ್‌ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ದಿಟ್ಟ ಹೋರಾಟ ನೀಡುವ ಪ್ರಯತ್ನ ಮಾಡಿತು.
ಶಿಖರ್ ಧವನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆಯಾಟ ಆರಂಭಗೊಂಡಿತು. ಅಷ್ಟರಲ್ಲೇ ಧವನ್ 39 ರನ್ ಸಿಡಿಸಿ ಔಟಾದರು. ಲಿವಿಂಗ್‌ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಪಂಜಾಬ್ ತಂಡದ ಗೆಲುವು ಖಚಿತಪಜಿಸಿತು. ಇತ್ತ ಜಿತೇಶ್ ಶರ್ಮಾ 19ರನ್ ಕಾಣಿಕೆ ನೀಡಿ ಔಟಾದರು.
ಆದರೆ ಲಿವಿಂಗ್‌ಸ್ಟೋನ್ 22 ಎಸೆತದಲ್ಲಿ ಅಜೇಯ 49 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ 15.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
IPL 2022: ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಸಂಭ್ರಮಾಚರಣೆ..! ವಿಡಿಯೋ ವೈರಲ್
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ 2022 ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಮಾರ್ಚ್ 26 ರಂದ ಐಪಿಎಲ್ 2022 ಲೀಗ್ ಟೂರ್ನಿ ಆರಂಭಗೊಂಡಿತ್ತು. ಇದೀಗ 70ನೇ ಪಂದ್ಯದೊಂದಿಗೆ ಲೀಗ್ ಹಂತ ಅಂತ್ಯಗೊಂಡಿದೆ.
ಮೇ 24 ರಿಂದ ಪ್ಲೇ ಆಫ್ ಪಂದ್ಯಗಳು ಆರಂಭಗೊಳ್ಳುತ್ತಿದೆ. ಇಷ್ಟು ದಿನ ಮುಂಬೈನಲ್ಲಿ ನಡೆಯುತ್ತಿದ ಪಂದ್ಯ ಇದೀಗ ಕೋಲ್ಕತಾಗೆ ಸ್ಥಳಾಂತರಗೊಳ್ಳುತ್ತಿದೆ. ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಇನ್ನು ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ಲೇ ಆಫ್ ತಂಡಗಳು
ಪ್ಲೇ ಆಫ್ ಹಂತಕ್ಕೆ ನಾಲ್ಕು ತಂಡಗಳು ಈಗಾಗಲೇ ಪ್ರವೇಶ ಪಡೆದಿದೆ. ಗುಜರಾತ್ ಟೈಟಾನ್ಸ್ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನು ಎರಡನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡವಿದೆ. ಹೀಗಾಗಿ ಮೇ 24 ರಂದು ನಡೆಯಲಿರುವ ಮೊದಲ ಕ್ವಾಲಿಫಿಯರ್ ಪಂದ್ಯದಲ್ಲಿ ಆರಂಭಿಕ 2 ಸ್ಥಾನದಲ್ಲಿರುವ ಗುಜರಾತ್ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ನಡೆಸಲಿದೆ. ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶವಿದೆ.
ಇನ್ನು 3 ಮತ್ತು ನಾಲ್ಕನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇ.25ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯ ಆಡಲಿದೆ. ಇಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡ ಮೇ. 27 ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಇನ್ನು ಮೇ29 ರಂದು ಫೈನಲ್ ಪಂದ್ಯ ನಡೆಯಲಿದೆ.