ಡೇನಿಯಲ್ ಸ್ಯಾಮ್ಸ್ ಎಸೆದ 16ನೇ ಓವರ್ ನಲ್ಲಿ 4 ಸಿಕ್ಸರ್ , 2 ಬೌಂಡರಿಗಳೊಂದಿಗೆ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪ್ಯಾಟ್ಸ್ ಕಮ್ಮಿನ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡದ 5 ವಿಕೆಟ್ ಗೆಲುವಿಗೆ ಕಾರಣರಾಗಿದ್ದಾರೆ. ಅದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ (14 ಎಸೆತ) ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಜೊತೆ ಜಂಟಿ ಅಗ್ರಸ್ಥಾನ ಪಡೆದರು.
ಪುಣೆ (ಏ.6): ಡೇನಿಯಲ್ ಸ್ಯಾಮ್ಸ್ ಎಸೆದ 16ನೇ ಓವರ್ ನಲ್ಲಿ ಭರ್ಜರಿ ಸಿಕ್ಸರ್, ಬೌಂಡರಿಗಳ ಅಬ್ಬರ ತೋರಿದ ಪ್ಯಾಟ್ ಕಮ್ಮಿನ್ಸ್, 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಕೆಕೆಆರ್ (KKR) ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದಾರೆ. ಡೇನಿಯಲ್ ಸ್ಯಾಮ್ಸ್ (Daniel Sams) ಎಸೆದ ಓವರ್ ನಲ್ಲಿ 4 ಸಿಕ್ಸರ್, 2 ಬೌಂಡರಿಯೊಂದಿಗೆ ಬರೋಬ್ಬರಿ 35 ರನ್ ಚಚ್ಚಿದ ಪ್ಯಾಟ್ ಕಮ್ಮಿನ್ಸ್ (Pat Cummins) ತಂಡದ ಮಹೋನ್ನತ ಗೆಲುವು ತಂದಿದ್ದಾರೆ. ಅದರೊಂದಿಗೆ ಐಪಿಎಲ್ (IPL) ಇತಿಹಾಸದಲ್ಲಿ ಅತಿವೇಗದ ಅರ್ಧಶತಕ (14 ಎಸೆತ) ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ (KL Rahul) ಜೊತೆ ಜಂಟಿ ಅಗ್ರಸ್ಥಾನ ಪಡೆದರು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ (Mumbai Indians) ತಂಡ 4 ವಿಕೆಟ್ ಗೆ 161 ರನ್ ಬಾರಿಸಿದರೆ, ಪ್ರತಿಯಾಗಿ ಪ್ಯಾಟ್ ಕಮ್ಮಿನ್ಸ್ 56 ರನ್ (15 ಎಸೆತ, 4 ಬೌಂಡರಿ, 6 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೆಕೆಆರ್( Kolkata Knight Riders) ತಂಡ 16 ಓವರ್ ಗಳಲ್ಲಿ 5 ವಿಕೆಟ್ ಗೆ 162 ರನ್ ಬಾರಿಸಿ ಭರ್ಜರಿ ವಿಜಯ ಕಂಡಿತು.
ಮೊತ್ತ ಬೆನ್ನಟ್ಟಲು ಆರಂಭಿಸಿದ ಕೆಕೆಆರ್ ತಂಡಕ್ಕೆ ಅಜಿಂಕ್ಯ ರಹಾನೆ ಹಾಗೂ ವೆಂಕಟೇಶ್ ಅಯ್ಯರ್ (Venkatesh Iyer) ಎಚ್ಚರಿಕೆಯ ಆರಂಭ ನೀಡಿದರು. ಡೇನಿಯಲ್ ಸ್ಯಾಮ್ಸ್ ಹಾಗೂ ಬಸಿಲ್ ಥಂಪಿ ಓವರ್ ಗಳನ್ನು ಎರಡು ಓವರ್ ಗಳ ಕಾಲ ಎಚ್ಚರಿಕೆಯಿಂದ ಎದುರಿಸಿತು. ಇದರಿಂದಾಗಿ ಎರಡು ಓವರ್ ಗಳ ಅಂತ್ಯಕ್ಕೆ ಕೆಕೆಆರ್ ವಿಕೆಟ್ ನಷ್ಟವಿಲ್ಲದೆ 9 ರನ್ ಬಾರಿಸಿತ್ತು. ಆದರೆ, ಈ ಎಚ್ಚರಿಕೆಯ ಆರಂಭ ಹೆಚ್ಚು ಹೊತ್ತು ಉಳಿಯಲಿಲ್ಲ. 5ನೇ ಓವರ್ ಎಸೆಯಲು ಬಂದ ಟೈಮಲ್ ಮಿಲ್ಸ್ ಅವರ ಮೊದಲ ಎಸೆತವನ್ನು ಹುಕ್ ಮಾಡಲು ಯತ್ನಿಸಿದ ಅಜಿಂಕ್ಯ ರಹಾನೆ ಕ್ಯಾಚ್ ನೀಡಿ ಹೊರನಡೆದರು. ಆ ನಂತರ ವೆಂಕಟೇಶ್ ಅಯ್ಯರ್ ಗೆ (50 ರನ್, 41 ಎಸತೆ, 6 ಬೌಂಡರಿ, 1 ಸಿಕ್ಸರ್) ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್, ಎದುರಿಸಿದ 6 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 10 ರನ್ ಬಾರಿಸಿ ಔಟದರು. ಡೇನಿಯಲ್ ಸ್ಯಾಮ್ಸ್ ಎಸೆತದಲ್ಲಿ ತಿಲಕ್ ವರ್ಮಗೆ ಕ್ಯಾಚ್ ನೀಡಿದಾಗ ಕೆಕೆಆರ್ ಪವರ್ ಪ್ಲೇ ಮುಕ್ತಾಯಕ್ಕೆ 35 ರನ್ ಬಾರಿಸಿತ್ತು.
ಶ್ರೇಯಸ್ ಅಯ್ಯರ್ ಬಳಿಕ ಕ್ರೀಸ್ ಗಿಳಿಸಿ ಸ್ಯಾಮ್ ಬಿಲ್ಲಿಂಗ್ಸ್ ಮೊದಲ ಎಸೆತದಿಂದಲೇ ವಿಶ್ವಾಸದ ಆಟವಾಡಿದರು. ಎದುರಿಸಿದ ಮೊದಲ 11 ಎಸೆತಗಳಲ್ಲೇ 2 ಸಿಕ್ಸರ್ ಸಿಡಿಸಿ ಗಮನಸೆಳೆದಿದ್ದರೆ, ಇದರಲ್ಲಿ ಒಂದು ಸಿಕ್ಸರ್ ಅನ್ನು ಎಂ.ಅಶ್ವಿನ್ ಹಾಗೂ ಇನ್ನೊಂದು ಸಿಕ್ಸರ್ ಅನ್ನು ಬಸಿಲ್ ಥಂಪಿಗೆ ಬಾರಿಸಿದ್ದರು. ಎಂ.ಅಶ್ವಿನ್ ಗೆ ಅದೇ ರೀತಿಯ ಮತ್ತೊಂದು ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಫಲವಾದ ಬಿಲ್ಲಿಂಗ್ಸ್ , ಬಸಿಲ್ ಥಂಪಿಗೆ ಕ್ಯಾಚ್ ನೀಡಿ ಹೊರನಡೆದಾಗ, ಕೆಕೆಆರ್ ತಂಡಕ್ಕೆ ಕೊನೆಯ 10 ಓವರ್ ಗಳಲ್ಲಿ ಗೆಲುವಿಗೆ 95 ರನ್ ಬೇಕಿದ್ದವು. ಕೆಕೆಆರ್ ಪಾಲಿನ ಆಪದ್ಬಾಂದವ ಎನಿಸಿಕೊಂಡಿದ್ದ ನಿತೇಶ್ ರಾಣಾ (8) ಹಾಗೂ ಆಂಡ್ರೆ ರಸೆಲ್ (11) ವಿಫಲರಾದಾಗ ಕೆಕೆಆರ್ ತಂಡ ಸೋಲಿನ ಎಚ್ಚರಿಕೆ ಎದುರಿಸಿತ್ತು. ಆದರೆ, ಇದಕ್ಕೆ ಪ್ಯಾಟ್ ಕಮ್ಮಿನ್ಸ್ ಅವಕಾಶ ನೀಡಲಿಲ್ಲ.
IPL 2022 ಸೂರ್ಯಕುಮಾರ್ ಯಾದವ್ ಅರ್ಧಶತಕ, ಕೆಕೆಆರ್ ಗೆ ಸವಾಲಿನ ಗುರಿ ನೀಡಿದ ಮುಂಬೈ
ಐಪಿಎಲ್ ನ ಇತಿಹಾಸದ 2ನೇ ಅತ್ಯಂತ ದುಬಾರಿ ಓವರ್: ಡೇನಿಯಲ್ ಸ್ಯಾಮ್ಸ್ ಅವರು ಐಪಿಎಲ್ ಇತಿಹಾಸದ 2ನೇ ಅತ್ಯಂತ ದುಬಾರಿ ಓವರ್ ಎಸೆದರು. 2011ರಲ್ಲಿ ಪ್ರಶಾಂತ್ ಪರಮೇಶ್ವರನ್ ಆರ್ ಸಿಬಿ ವಿರುದ್ಧ 37 ರನ್ ನೀಡಿದ್ದು ಹಾಗೂ 2021ರಲ್ಲಿ ಮುಂಬೈನಲ್ಲಿ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿಯ ಹರ್ಷಲ್ ಪಟೇಲ್ 37 ರನ್ ನೀಡಿದ್ದು ಜಂಟಿ ಮೊದಲ ಸ್ಥಾನದಲ್ಲಿದೆ. ಡೇನಿಯಲ್ ಸ್ಯಾಮ್ಸ್ 35 ರನ್ ನೀಡುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
10 IPL ಟ್ರೋಫಿ ಗೆದ್ದಿರುವ 3 ತಂಡಗಳು ಒಂದೂ ಪಂದ್ಯ ಗೆದ್ದಿಲ್ಲ..!
ಐಪಿಎಲ್ ನ ಅತೀವೇಗದ ಅರ್ಧಶತಕ ಜಂಟಿ ದಾಖಲೆ: ಪ್ಯಾಟ್ ಕಮ್ಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧಶತಕದ ಜಂಟಿ ಅಗ್ರಸ್ಥಾನ ಸಂಪಾದಿಸಿದರು. 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಎಲ್ ರಾಹುಲ್ ಕೂಡ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
