* ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈಗೆ ಸೋಲುಣಿಸಿದ ಕೋಲ್ಕತಾ ನೈಟ್ ರೈಡರ್ಸ್* ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದ ಶೆಲ್ಡನ್ ಜಾಕ್ಸನ್* ಕೀಪಿಂಗ್ ಮಾಡುವ ವೇಳೆಯಲ್ಲಿ ಜಾಕ್ಸನ್‌ಗೆ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡಿದ ಯುವಿ

ನವದೆಹಲಿ(ಮಾ.27): 15ನೇ ಅವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೆ ಶನಿವಾರ ಅಧಿಕೃತ ಚಾಲನೆ ಸಿಕ್ಕಿದ್ದು, ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್ (Chennai Super Kings) ಎದುರು ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ಕೆಕೆಆರ್ ತಂಡದ ವಿಕೆಟ್ ಕೀಪರ್ ಶೆಲ್ಡನ್‌ ಜಾಕ್ಸನ್‌ (Sheldon Jackson) ಮಾಡಿದ ಸ್ಟಂಪಿಂಗ್‌ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. 

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದ ಶೆಲ್ಡನ್ ಜಾಕ್ಸನ್‌ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಉಪಯುಕ್ತ ಸಲಹೆ ನೀಡಿದ್ದಾರೆ. ತಂಡದಲ್ಲಿ ಸ್ಯಾಮ್ ಬಿಲ್ಲಿಂಗ್ಸ್‌ ಇದ್ದರೂ ಸಹಾ ಶೆಲ್ಡನ್ ಜಾಕ್ಸನ್ ಅವರನ್ನು ಕೆಕೆಆರ್ ತಂಡವು ವಿಕೆಟ್‌ ಕೀಪರ್ ಆಗಿ ಕಣಕ್ಕಿಳಿಸುವ ಮೂಲಕ ದಿಟ್ಟ ನಿರ್ಧಾರವನ್ನೇ ತೆಗೆದುಕೊಂಡಿತ್ತು. ಆದರೆ ಮಿಂಚಿನ ವೇಗದಲ್ಲಿ ರಾಬಿನ್ ಉತ್ತಪ್ಪ ಅವರನ್ನು ಸ್ಟಂಪೌಟ್ ಮಾಡುವ ಮೂಲಕ ತಂಡದ ಮ್ಯಾನೇಜ್‌ಮೆಂಟ್ ನಂಬಿಕೆ ಉಳಿಸಿಕೊಳ್ಳುವಂತಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. 

ಚೆನ್ನೈ ಸೂಪರ್ ಕಿಂಗ್ಸ್‌ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆದ ಚೆಂಡನ್ನು ಬೌಂಡರಿಗಟ್ಟುವ ಭರದಲ್ಲಿ ರಾಬಿನ್ ಉತ್ತಪ್ಪ ಮುನ್ನುಗ್ಗಿ ಬಾರಿಸಲು ಯತ್ನಿಸಿದಾಗ ಕಣ್ಮಿಟುಕಿಸಿ ಬಿಡುವಷ್ಟರಲ್ಲಿ ಸ್ಟಂಪಿಂಗ್ ಮಾಡುವಲ್ಲಿ ಶೆಲ್ಡನ್ ಜಾಕ್ಸನ್ ಯಶಸ್ವಿಯಾಗಿದ್ದರು. ಐಪಿಎಲ್ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh), ಹೆಲ್ಮೆಟ್ ಧರಿಸದೇ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಶೆಲ್ಡನ್ ಜಾಕ್ಸನ್ ಅವರನ್ನು ಗಮನಿಸಿದ್ದಾರೆ. ಪಂದ್ಯ ಮಕ್ತಾಯದ ಬಳಿಕ ಜಾಕ್ಸನ್‌ಗೆ ಯುವಿ ಟ್ವೀಟ್‌ ಮೂಲಕ ಸಮಯೋಚಿತ ಸಲಹೆ ನೀಡಿದ್ದಾರೆ.

Scroll to load tweet…

ಪ್ರೀತಿಯ ಶೆಲ್ಡನ್ ಜಾಕ್ಸನ್, ಸ್ಪಿನ್ನರ್‌ಗಳು ಬೌಲಿಂಗ್ ಮಾಡುವಾಗ ದಯವಿಟ್ಟು ಹೆಲ್ಮೆಟ್ ಧರಿಸಿ. ನೀವೊಬ್ಬ ಪ್ರತಿಭಾನ್ವಿತ ಆಟಗಾರರಾಗಿದ್ದೀರ ಹಾಗೂ ನಿಮಗೆ ದೀರ್ಘಕಾಲದವರೆಗೆ ಸುವರ್ಣಾವಕಾಶವಿದೆ. ಸುರಕ್ಷಿತವಾಗಿರಿ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಯುವಿ ಸಲಹೆಯ ಟ್ವೀಟ್‌ ಅನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿರುವ ಶೆಲ್ಡನ್ ಜಾಕ್ಸನ್, ಧನ್ಯವಾದಗಳು ಅಣ್ಣ ಎಂದು ರೀಟ್ವೀಟ್ ಮಾಡಿದ್ದಾರೆ.

Scroll to load tweet…

ಶೆಲ್ಡನ್ ಜಾಕ್ಸನ್ ಅವರ ವಿಕೆಟ್ ಕೀಪಿಂಗ್ ಸ್ಕಿಲ್ ಕುರಿತಂತೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕೂಡಾ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೊಂದು ಅದ್ಭುತವಾದ ಸ್ಟಂಪಿಂಗ್. ಶೆಲ್ಡನ್ ಜಾಕ್ಸನ್ ಅವರು ಮಾಡಿದ ಸ್ಟಂಪಿಂಗ್ ವೇಗ ಧೋನಿಯನ್ನು ನೆನಪಿಸುವಂತಿತ್ತು. ಮಿಂಚಿನ ವೇಗ ಎಂದು ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಾರಿಸಿದ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 131 ರನ್‌ ಕಲೆಹಾಕಿತ್ತು. ಅಗ್ರಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್ ಹಾಗೂ ಡೆವೊನ್‌ ಕಾನ್‌ವೇ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಸಿಎಸ್‌ಕೆ ಬೃಹತ್ ಮೊತ್ತ ಗಳಿಸುವ ಕನಸಿಗೆ ಹಿನ್ನೆಡೆಯಾಯಿತು. 

IPL 2022 CSK vs KKR ಹಾಲಿ ಚಾಂಪಿಯನ್ ತಂಡಕ್ಕೆ ಮಣ್ಣುಮುಕ್ಕಿಸಿದ ಕೆಕೆಆರ್!

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟರ್ ಅಜಿಂಕ್ಯ ರಹಾನೆ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 44 ರನ್ ಬಾರಿಸುವ ಮೂಲಕ ಕೆಕೆಆರ್ ಗೆಲುವನ್ನು ಸುಗಮಗೊಳಿಸಿದರು.