ಚನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೆಕೆಆರ್ ಗೆ ಗೆಲುವುಅದ್ಭುತ ಆಟವಾಡಿದ ಅನುಭವಿ ಅಜಿಂಕ್ಯ ರಹಾನೆಸಾಂಘಿಕ ಪ್ರದರ್ಶನ ನೀಡಿದ ಕೋಲ್ಕತ ನೈಟ್ ರೈಡರ್ಸ್

ಮುಂಬೈ (ಮಾ.26): ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Defending Champion chennai super kings ) ತಂಡವನ್ನು 6 ವಿಕೆಟ್ ಗಳಿಂದ ಮಣಿಸಿ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಶುಭಾರಂಭ ಮಾಡಿದೆ. ಅಂದಾಜು ಮೂರು ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಬಾರಿಸಿದ ಅರ್ಧಶತಕಕ್ಕೆ ಗೆಲುವಿನ ಶ್ರೇಯ ಸಿಗಲಿಲ್ಲ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕೆಕೆಆರ್ (KKR) ತಂಡ ಭರ್ಜರಿ ಬೌಲಿಂಗ್ ದಾಳಿಯ ಮುಂದೆ 5 ವಿಕೆಟ್ ಗೆ 131 ರನ್ ಗಳ ಸಾಧಾರಣ ಮೊತ್ತ ಪೇರಿಸಲಷ್ಟೇ ಯಶ ಕಂಡಿತು. ಮಾಜಿ ನಾಯಕ ಎಂಎಸ್ ಧೋನಿ (50*ರನ್, 38 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿ ತಂಡ ಸಾಧಾರಣ ಮೊತ್ತ ಪೇರಿಸಲು ನೆರವಾಗಿದ್ದರು. ಈ ಮೊತ್ತ ಬೆನ್ನಟ್ಟಿದ್ದ ಕೆಕೆಆರ್ ತಂಡ 18.3 ಓವರ್ ಗಳಲ್ಲಿ 4 ವಿಕೆಟ್ ಗೆ 133 ರನ್ ಪೇರಿಸಿ ಗೆಲುವು ಕಂಡಿತು.

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಮೊತ್ತವನ್ನು ವಿಶ್ವಾಸದಿಂದಲೇ ಬೆನ್ನಟ್ಟಲು ಆರಂಭಿಸಿದ ಕೆಕೆಆರ್ ತಂಡಕ್ಕೆ ಮೊದಲ ವಿಕೆಟ್ ಗೆ ಉತ್ತಮ ಆರಂಭ ಸಿಕ್ಕಿತು. ವೆಂಕಟೇಶ್ ಅಯ್ಯರ್ ಹಾಗೂ ಅನುಭವಿ ಅಜಿಂಕ್ಯ ರಹಾನೆ ಜೋಡಿ ಮೊದಲ ವಿಕೆಟ್ ಗೆ 38 ಎಸೆತಗಳಲ್ಲಿ ಆಕರ್ಷಕ 43 ರನ್ ಕೂಡಿಸಿದರು. ಬೌಲರ್ ಗಳ ಸಾಹಸದಿಂದ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಮೇಲೆ ಕಡಿವಾಣ ಹೇರಲು ಯಶಸ್ವಿಯಾಗಿದ್ದರಿಂದ, ಕೆಕೆಆರ್ ಕೂಡ ಬ್ಯಾಟಿಂಗ್ ನಲ್ಲಿ ಅಪಾಯಕಾರಿ ಶಾಟ್ ಗಳನ್ನು ಬಾರಿಸುವ ಗೋಜಿಗೆ ಹೋಗಲಿಲ್ಲ.

16 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 16 ರನ್ ಬಾರಿಸಿದ್ದ ವೆಂಕಟೇಶ್ ಅಯ್ಯರ್, ಡ್ವೇನ್ ಬ್ರಾವೋ ಎಸೆತದ 7ನೇ ಓವರ್ ನಲ್ಲಿ ವಿಕೆಟ್ ಕೀಪರ್ ಎಂಎಸ್ ಧೋನಿಗೆ ಕ್ಯಾಚ್ ನೀಡಿ ಹೊರನಡೆದಿದ್ದರು. ಆ ನಂತರ ರಹಾನೆಗೆ ಜೊತೆಯಾದ ನಿತೀಶ್ ರಾಣಾ 2ನೇ ವಿಕೆಟ್ ಗೆ 33 ರನ್ ಜೊತೆಯಾಟವಾಡಿ ಸುಲಭವಾಗಿ ಮೊತ್ತ ಬೆನ್ನಟ್ಟುವ ಭರವಸೆ ನೀಡಿದ್ದರು. 17 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸಿಡಿಸಿ ಗಮನಸೆಳೆದಿದ್ದ ನಿತೀಶ್ ರಾಣಾ 10ನೇ ಓವರ್ ನ ಕೊನೇ ಎಸೆತದಲ್ಲಿ ರಾಯುಡುಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವಿಕೆಟ್ ಅನ್ನು ಕೂಡ ಬ್ರಾವೋ ಪಡೆದುಕೊಂಡರು. ಅಲ್ಲಿಯವರೆಗೂ ಕೆಕೆಆರ್ ತಂಡ ಬಾರಿಸಿದ ಅರ್ಧ ರನ್ ಗಳನ್ನು ತಾವೊಬ್ಬರೇ ಬಾರಿಸಿದ್ದ ಅಜಿಂಕ್ಯ ರಹಾನೆ, ರಾಣಾ ಔಟಾದ ಮೊತ್ತಕ್ಕೆ 11 ರನ್ ಸೇರಿಸುವ ವೇಳೆ ನಿರ್ಗಮಿಸಿದರು. ಕೊನೆಯಲ್ಲಿ ಶ್ರೇಯಸ್ ಅಯ್ಯರ್ (20*) ಹಾಗೂ ಸ್ಯಾಮ್ ಬಿಲ್ಲಿಂಗ್ಸ್ (25ರನ್, 22 ಎಸೆತ, 1 ಬೌಂಡರಿ, 1 ಸಿಕ್ಸರ್) 4ನೇ ವಿಕೆಟ್ ಗೆ 36 ರನ್ ಜೊತೆಯಾಟವಾಡಿ ಗೆಲುವನ್ನು ಖಚಿತಪಡಿಸಿದ್ದರು.

ಏಪ್ರಿಲ್​ನಲ್ಲಿ ಎರಡು KGFಗಳು ರಿಲೀಸ್: ಅಷ್ಟಕ್ಕೂ ಇನ್ನೊಂದು 'ಕೆಜಿಎಫ್' ಯಾವ್ದು ಗೊತ್ತಾ?

ಅಗ್ರ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಎಡಗೈ-ಬಲಗೈ ಬ್ಯಾಟ್ಸ್ ಮನ್ ಗಳ ಸಂಯೋಜನೆಗೆ ಮುಂದಾಗುವ ಮೂಲಕ ಯೋಜನೆ ರೂಪಿಸಿದ್ದ ಕೆಕೆಆರ್ ತಂಡ ಅದರಲ್ಲಿ ಬಹುತೇಕವಾಗಿ ಯಶಸ್ಸು ಕಂಡಿತು. ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಫಿಕ್ಸ್ ಆದ ಸ್ಥಾನವನ್ನು ನೀಡದೇ ಇರುವ ಮೂಲಕ ಚೆನ್ನೈ ತಂಡವನ್ನು ಮಣಿಸುವ ತಂತ್ರ ರೂಪಿಸಿ ಅದರಲ್ಲಿ ಯಶಸ್ಸು ಕಂಡಿತು.

IPL 2022 CSK vs KKR ಎಂಎಸ್ ಧೋನಿ ಅರ್ಧಶತಕ, ಚೆನ್ನೈ ಸಾಧಾರಣ ಮೊತ್ತ

ಚೆನ್ನೈ ಸೂಪರ್ ಕಿಂಗ್ಸ್: 5 ವಿಕೆಟ್ ಗೆ 131
(ಎಂಎಸ್ ಧೋನಿ 50*, ರವೀಂದ್ರ ಜಡೇಜಾ 26*, ರಾಬಿನ್ ಉತ್ತಪ್ಪ 28, ಅಂಬಟಿ ರಾಯುಡು 15, ಉಮೇಶ್ ಯಾದವ್ 20ಕ್ಕೆ 2, ವರುಣ್ ಚಕ್ರವರ್ತಿ 23ಕ್ಕೆ1, ರಸೆಲ್ 38ಕ್ಕೆ 1), ಕೋಲ್ಕತ ನೈಟ್ ರೈಡರ್ಸ್: 18.3 ಓವರ್ ಗಳಲ್ಲಿ 4 ವಿಕೆಟ್ ಗೆ 133 ( ಅಜಿಂಕ್ಯ ರಹಾನೆ 44, ನಿತೀಶ್ ರಾಣಾ 21, ವೆಂಕಟೇಶ್ ಅಯ್ಯರ್ 16, ಶ್ರೇಯಸ್ ಅಯ್ಯರ್ 20*, ಸ್ಯಾಮ್ ಬಿಲ್ಲಿಂಗ್ಸ್ 25, ಡ್ವೇನ್ ಬ್ರಾವೋ 20ಕ್ಕೆ 3).