83 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಆಡಿದ 35 ಎಸೆತಗಳಲ್ಲಿ 62 ರನ್ ಗಳ ಜೊತೆಯಾಟ ಕೆಕೆಆರ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸವಾಲಿನ ಮೊತ್ತ ಪೇರಿಸಲು ನೆರವಾದರು.
ಮುಂಬೈ (ಏ.28): ಕುಲದೀಪ್ ಯಾದವ್ (Kuldeep Yadav) ಮಾರಕ ಬೌಲಿಂಗ್ ದಾಳಿಯ ನಡುವೆಯೂ ನಿತೀಶ್ ರಾಣಾ (Nitish Rana) ಬಾರಿಸಿದ ಆಕರ್ಷಕ ಅರ್ಧಶತಕದ ಸಹಾಯದಿಂದ ಕೆಕೆಆರ್ (KKR) ತಂಡ 15ನೇ ಆವೃತ್ತಿಯ ಐಪಿಎಲ್ (IPL 2022)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಗೆಲುವಿಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ನೈಟ್ ರೈಡರ್ಸ್ (Kolkata Knight Riders ) ತಂಡ, ಕುಲದೀಪ್ ಯಾದವ್ (14ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನಡುವೆಯೂ ನಿತೀಶ್ ರಾಣಾ (57ರನ್, 34 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಪೋಟಕ ಅರ್ಧಶತಕದಿಂದ 9 ವಿಕೆಟ್ ಗೆ 146 ರನ್ ಪೇರಿಸಿದೆ.
ಸತತ ನಾಲ್ಕನೇ ಪಂದ್ಯದಲ್ಲಿ ಆರಂಭಿಕ ಜೋಡಿಯನ್ನು ಬದಲಾವಣೆ ಮಾಡಿದ ಕೋಲ್ಕತ ನೈಟ್ ರೈಡರ್ಸ್ ತಂಡ ಅದರಲ್ಲೂ ಯಶ ಕಾಣಲಿಲ್ಲ. ವೆಂಕಟೇಶ್ ಅಯ್ಯರ್ ಹಾಗೂ ಆರನ್ ಫಿಂಚ್ ಜೋಡಿ ಕೇವಲ 9 ಎಸೆತಗಳಿಗೆ ಬೇರ್ಪಟ್ಟಿತು. 7 ಎಸೆತಗಳಲ್ಲಿ 3 ರನ್ ಬಾರಿಸಿದ ಆರನ್ ಫಿಂಚ್ ಅವರನ್ನು ಬೌಲ್ಡ್ ಮಾಡುವ ಮೂಲಕ ಚೇತನ್ ಸಕಾರಿಯಾ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅದ್ಭುತ ಪಾದಾರ್ಪಣೆ ಮಾಡಿದರು. ಅ ಬಳಿಕ ವೆಂಕಟೇಶ್ ಅಯ್ಯರ್ ಗೆ ಜೊತೆಯಾದ ಶ್ರೇಯಸ್ ಅಯ್ಯರ್ 18 ರನ್ ಗಳ ಜೊತೆಯಾಟವಾಡಿದರು.
12 ಎಸೆತಗಳಲ್ಲಿ 6 ರನ್ ಬಾರಿಸಿ ತಡಕಾಡುತ್ತಿದ್ದ ವೆಂಕಟೇಶ್ ಅಯ್ಯರ್, ಅಕ್ಸರ್ ಪಟೇಲ್ ಎಸೆತದಲ್ಲಿ ಚೇತನ್ ಸಕಾರಿಯಾಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲಿಯೇ ಕೆಕೆಆರ್ ತಂಡದ ವಿಕೆಟ್ ಗಳು ಇಸ್ಪೀಟ್ ನ ಎಲೆಗಳ ಹಾಗೆ ಉದುರಲು ಆರಂಭಿಸಿದವು. ಇನ್ನೊಂದೆಡೆ ನಿಂತಿದ್ದ ನಾಯಕ ಶ್ರೇಯಸ್ ಅಯ್ಯರ್ ಸಿಕ್ಕಿದ ಅವಕಾಶಗಳಲ್ಲಿ ರನ್ ಪೇರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದರು. ವೆಂಕಟೇಶ್ ಅಯ್ಯರ್ ನಿರ್ಗಮನದ ಬಳಿಕ ಬಂದ ಬಾಬಾ ಇಂದ್ರಜಿತ್ (6) ನಿರಾಸೆ ಮೂಡಿಸಿದರೆ, ಸುನೀಲ್ ನಾರಾಯಣ್ ಮೊದಲ ಎಸೆತದಲ್ಲಿಯೇ ಡಕ್ ಔಟ್ ಆದರು. 8ನೇ ಓವರ್ ನ 2 ಹಾಗೂ 3ನೇ ಎಸೆತದಲ್ಲಿ ಕುಲದೀಪ್ ಯಾದವ್ ಈ ವಿಕೆಟ್ ಉರುಳಿಸಿದರೆ, ನಿತೀಶ್ ರಾಣಾ ಹ್ಯಾಟ್ರಿಕ್ ಎಸೆತವನ್ನು ತಡೆದರು.
IPL 2022 ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
35 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ತಂಡಕ್ಕೆ ನಾಲ್ಕನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ 48 ರನ್ ಜೊತೆಯಟವಾಡಿ ಆಧರಿಸಿದರು. ಇನ್ನೇನು ತಂಡ ಚೇತರಿಸಿಕೊಳ್ಳುತ್ತಿದೆ ಎನ್ನುವ ಹಂತದಲ್ಲಿ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಅನ್ನು ಕುಲದೀಪ್ ಯಾದವ್ ಉರುಳಿಸಿದರೆ, ಅದೇ ಓವರ್ ನಲ್ಲಿ ಅಪಾಯಕಾರಿ ಆಂಡ್ರೆ ರಸೆಲ್ ಕೂಡ ಶೂನ್ಯಕ್ಕೆ ನಿರ್ಗಮಿಸಿದರು.
ಸಮಂತಾ 'ಊ ಅಂಟಾವಾ..' ಹಾಡಿಗೆ ಕಿಂಗ್ ಕೊಹ್ಲಿ ಸಖತ್ ಸ್ಟೆಪ್ಸ್!
ಫಾರ್ಮ್ ಗೆ ಮರಳಿದ ಕುಲದೀಪ್ ಯಾದವ್: ಕೆಕೆಆರ್ ತಂಡದಲ್ಲಿದ್ದ ಕಳೆದ ಎರಡು ವರ್ಷದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡದೇ ಬಹುತೇಕ ಬೆಂಚ್ ಕಾಯಿಸಿದ್ದ ಕುಲದೀಪ್ ಯಾದವ್, ಕೆಕೆಆರ್ ವಿರುದ್ಧವೇ ಈ ಬಾರಿ ಭರ್ಜರಿ ಫಾರ್ಮ್ ಗೆ ಮರಳಿದ್ದಾರೆ. 2019 ಹಾಗೂ 2021ರ ಋತುವಿನಲ್ಲಿ ಕೆಕೆಆರ್ ಪರ ಆಡಿದ 14 ಪಂದ್ಯಗಳಿಂದ 5 ವಿಕೆಟ್ ಉರುಳಿಸಿದ್ದ ಕುಲದೀಪ್ ಯಾದವ್, ಈ ಬಾರಿ ಕೆಕೆಆರ್ ವಿರುದ್ಧ ಆಡಿದ 2 ಪಂದ್ಯಗಳಲ್ಲಿ ಎಸೆದ 4.3 ಓವರ್ ಗಳಿಂದ 6 ವಿಕೆಟ್ ಉರುಳಿಸಿದ್ದಾರೆ.
