ಕುಲದೀಪ್ ಯಾದವ್ ಅವರ ಆಕರ್ಷಕ ಬೌಲಿಂಗ್ ಹಾಗೂ ಸಂಘಟಿತ ಬ್ಯಾಟಿಂಗ್ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ 4ನೇ ಗೆಲುವು ಕಂಡಿದೆ. ಇನ್ನೊಂದೆಡೆ, ಕೆಕೆಆರ್ ತಂಡ ಲೀಗ್ ನಲ್ಲಿ ಸತತ ಐದನೇ ಹಾಗೂ ಒಟ್ಟಾರೆ 6ನೇ ಸೋಲು ಕಂಡಿದ್ದು ಪ್ಲೇ ಆಫ್ ರೇಸ್ ನಿಂದ ಬಹುತೇಕವಾಗಿ ಹೊರಬಿದ್ದಿದೆ.
ಮುಂಬೈ (ಏ.28): ಕುಲದೀಪ್ ಯಾದವ್ (Kuldeep Yadav ) ಅವರ ಸಾಹಸಿಕ ಬೌಲಿಂಗ್ ನಿರ್ವಹಣೆ ಮತ್ತು ಬ್ಯಾಟಿಂಗ್ ವಿಭಾಗದ ಎಚ್ಚರಿಕೆಯ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಜಯದ ಲಯಕ್ಕೆ ಮರಳಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ನ ತನ್ನ 8ನೇ ಪಂದ್ಯದಲ್ಲಿ ಕೆಕೆಆರ್ (KKR) ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 4ನೇ ಗೆಲುವು ದಾಖಲಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ನೈಟ್ ರೈಡರ್ಸ್ (Kolkata Knight Riders ) ತಂಡ, ಕುಲದೀಪ್ ಯಾದವ್ (14ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನಡುವೆಯೂ ನಿತೀಶ್ ರಾಣಾ (57ರನ್, 34 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಪೋಟಕ ಅರ್ಧಶತಕದಿಂದ 9 ವಿಕೆಟ್ ಗೆ 146 ರನ್ ಪೇರಿಸಿತ್ತು. ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ 19 ಓವರ್ ಗಳಲ್ಲಿ 6 ವಿಕೆಟ್ ಗೆ 150 ರನ್ ಬಾರಿಸಿ ಗೆಲುವು ಕಂಡಿತು.
ಚೇಸಿಂಗ್ ಮಾಡಲು ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಎಸೆತದಲ್ಲಿಯೇ ಆಘಾತ ಎದುರಾಯಿತು. ಕಳೆದ ಕೆಲ ಪಂದ್ಯಗಳಿಂದ ಅದ್ಭುತ ನಿರ್ವಹಣೆ ತೋರುತ್ತಿದ್ದ ಪೃಥ್ವಿ ಶಾ, ಉಮೇಶ್ ಯಾದವ್ ಎಸೆದ ಮೊದಲ ಓವರ್ ನ ಮೊದಲ ಎಸೆತದಲ್ಲಿ ಅವರಿಗೆ ರಿಟರ್ನ್ ಕ್ಯಾಚ್ ನೀಡಿದಾಗ ಡೆಲ್ಲಿ ಹಿನ್ನಡೆ ಕಂಡಿತ್ತು. ಕೋವಿಡ್ ನಿಂದಾಗಿ ಚೇತರಿಸಿಕೊಂಡು ಮರಳಿದ ಮಿಚೆಲ್ ಮಾರ್ಷ್ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು. 7 ಎಸೆತಗಳನ್ನು ಆಡಿದ ಮಿಚೆಲ್ ಮಾರ್ಷ್ 2 ಬೌಂಡರಿ ಸಿಡಿಸಿ ಹರ್ಷತ್ ರಾಣಾಗೆ ವಿಕೆಟ್ ನೀಡಿದಾಗ ಡೆಲ್ಲಿ ತಂಡ 17 ರನ್ ಬಾರಿಸಿತ್ತು.
IPL 2022 ನಾಲ್ಕು ವಿಕೆಟ್ ಉರುಳಿಸಿ ಮಿಂಚಿದ ಕುಲದೀಪ್, ನಿತೀಶ್ ರಾಣಾ ಅರ್ಧಶತಕ
17 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ಅನುಭವಿ ಡೇವಿಡ್ ವಾರ್ನರ್ (42 ರನ್, 26 ಎಸೆತ, 8 ಬೌಂಡರಿ) ಹಾಗೂ ಲಲಿತ್ ಯಾದವ್ (22 ರನ್, 29 ಎಸೆತ,1 ಬೌಂಡರಿ, 1 ಸಿಕ್ಸರ್) 3ನೇ ವಿಕೆಟ್ ಗೆ ಅಮೂಲ್ಯ 65 ರನ್ ಗಳ ಜೊತೆಯಾಟವಾಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದರು. ಒಂದು ಹಂತದಲ್ಲಿ 2 ವಿಕೆಟ್ ಗೆ 82 ರನ್ ಬಾರಿಸಿ ಸುಲಭ ಗೆಲುವಿನ ಹಾದಿಯಲ್ಲಿದ್ದ ಡೆಲ್ಲಿ ತಂಡ ಕೇವಲ 2 ರನ್ ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಕಂಡಿತು.
ಈ ಬಾರಿಯ ಐಪಿಎಲ್ ಅನ್ನು ಅರ್ಧದಲ್ಲೇ ತ್ಯಜಿಸ್ತಾರಾ ವಿರಾಟ್ ಕೊಹ್ಲಿ?
42 ರನ್ ಬಾರಿಸಿದ ಡೇವಿಡ್ ವಾರ್ನರ್, ಉಮೇಶ್ ಯಾದವ್ ಗೆ ವಿಕೆಟ್ ನೀಡಿದರೆ, ವಾರ್ನರ್ ಜೊತೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದ ಲಲಿತ್ ಯಾದವ್ ಸುನೀಲ್ ನಾರಾಯಣ್ ಗೆ ವಿಕೆಟ್ ನೀಡಿದರು. ನಾಯಕ ರಿಷಭ್ ಪಂತ್ 5 ಎಸೆತಗಳಲ್ಲಿ 2 ರನ್ ಬಾರಿಸಿ ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದಾಗ ಕೆಕೆಆರ್ ತಂಡ ಕೂಡ ಜಯದ ಹೋರಾಟಕ್ಕೆ ಇಳಿದಿತ್ತು.
84 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಅಕ್ಸರ್ ಪಟೇಲ್ (24ರನ್, 17 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ರೋವ್ ಮನ್ ಪಾವೆಲ್ 29 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿ ತಂಡದ ಗೆಲುವನ್ನು ಸುಲಭ ಮಾಡಿದ್ದರು. ಕೊನೆಗೆ ರೋಮ್ ಮನ್ ಪಾವೆಲ್ (33* ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ತಂಡಕ್ಕೆ ಭರ್ಜರಿ ಗೆಲುವು ನೀಡಲು ನೆರವಾದರು.
