* ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ * ಧೋನಿ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನ ತೋರಿದ ಸಿಎಸ್‌ಕೆ* ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಋತುರಾಜ್ ಗಾಯಕ್ವಾಡ್
ಪುಣೆ(ಮೇ.02): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 46ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಿದ್ದವು. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಿತ್ತು. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಬಳಿಕ ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ನಾಯಕರಾಗಿ ನೇಮಕವಾಗಿದ್ದರು. ಆದರೆ ಜಡೇಜಾ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ 8 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಇದರ ಬೆನ್ನಲ್ಲೇ ತಮ್ಮ ಆಟದತ್ತ ಗಮನ ಹರಿಸುವ ಉದ್ದೇಶದಿಂದ ರವೀಂದ್ರ ಜಡೇಜಾ ಮತ್ತೆ ತಮ್ಮ ನಾಯಕತ್ವವನ್ನು ಧೋನಿಗೆ ವರ್ಗಾಯಿಸಿದ್ದರು. ಧೋನಿ ನಾಯಕತ್ವ ತೆಗೆದುಕೊಂಡ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಮೋಘ ಪ್ರದರ್ಶನ ತೋರುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 13 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಚೆನ್ನೈ 2 ವಿಕೆಟ್ ಕಳೆದುಕೊಂಡು 202 ರನ್ ಕಲೆ ಹಾಕಿತು. ಋುತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್‌ವೇ(ಔಟಾಗದೆ 85) ಮೊದಲ ವಿಕೆಟ್‌ಗೆ 182 ರನ್ ಜೊತೆಯಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಗಾಯಕ್ವಾಡ್(99) ಶತಕದ ಅಂಚಿನಲ್ಲಿ ಎಡವಿದರು. ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ 6 ವಿಕೆಟ್‌ಗೆ 189 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಿಕೋಲಸ್ ಪೂರನ್(64) ಹೋರಾಟ ತಂಡಕ್ಕೆ ಗೆಲುವು ತಂದು ಕೊಡಲಿಲ್ಲ. ಮುಖೇಶ್ 4 ವಿಕೆಟ್ ಪಡೆದರು.
IPL 2022 ನಾಯಕತ್ವ ಬದಲಾದ ಬೆನ್ನಲ್ಲೇ ತೆರೆಯಿತು ಗೆಲುವಿನ ಬಾಗಿಲು, SRH ಮಣಿಸಿದ ಧೋನಿ ಪಡೆ!
ರವೀಂದ್ರ ಜಡೇಜಾ ನಾಯಕತ್ವದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ, ಋತುರಾಜ್ ಗಾಯಕ್ವಾಡ್, ಧೋನಿ ನಾಯಕರಾಗುತ್ತಿದ್ದಂತೆಯೇ ಮೈ ಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಮಿಂಚಿದ್ದಾರೆ. ಇನ್ನು ಡೆವೊನ್ ಕಾನ್‌ವೇ ಕೂಡಾ ಅನಾಯಾಸವಾಗಿ ರನ್‌ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಧೋನಿ ನಾಯಕರಾಗುತ್ತಿದ್ದಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಳೆಯ ಖದರ್‌ಗೆ ಮರಳಿದೆ ಎಂದು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಗೆಲುವು ಸಾಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್‌ಗಳು ವೈರಲ್ ಆಗಿವೆ.
