* ಕೆಕೆಆರ್‌ ವರ್ಸಸ್‌ ಆರ್‌ಸಿಬಿ ಪಂದ್ಯಕ್ಕೆ ಕ್ಷಣಗಣನೆ ಆರಂಭ* ಗೆಲುವಿನೊಂದಿಗೆ ಯುಎಇ ಚರಣ ಆರಂಭಿಸುವ ಉತ್ಸಾಹದಲ್ಲಿದೆ ವಿರಾಟ್ ಪಡೆ* ಕೆಕೆಆರ್‌ ಪಾಲಿಗಿದು ಒಂದು ರೀತಿ ಮಾಡು ಇಲ್ಲವೇ ಮಡಿ ರೀತಿಯ ಪಂದ್ಯ

ಅಬುಧಾಬಿ(ಸೆ.20): ಮೊದಲ ಭಾಗದಲ್ಲಿ ಉತ್ತಮ ಆಟವಾಡಿದ್ದ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ತಂಡ, ಐಪಿಎಲ್‌ 14ನೇ ಆವೃತ್ತಿಯ ಭಾಗ-2ರಲ್ಲೂ ಲಯ ಉಳಿಸಿಕೊಂಡು ಯಾವುದೇ ಅಡ್ಡಿ-ಆತಂಕವಿಲ್ಲದೆ ಪ್ಲೇ-ಆಫ್‌ಗೇರಲು ಎದುರು ನೋಡುತ್ತಿದೆ. ಭಾಗ-2ರ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡ​ರ್ಸ್‌ ಸವಾಲು ಎದುರಿಸಲಿರುವ ಆರ್‌ಸಿಬಿ, ಗೆಲುವಿನ ನಿರೀಕ್ಷೆಯಲ್ಲಿದೆ.

ಆರ್‌ಸಿಬಿ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದೆ. ಪ್ಲೇ-ಆಫ್‌ಗೇರಲು ಆರ್‌ಸಿಬಿ ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 3ರಲ್ಲಿ ಗೆಲ್ಲಬೇಕು. ಮತ್ತೊಂದೆಡೆ ಕೆಕೆಆರ್‌ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು 7ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಇನ್ನುಳಿದಿರುವ 7 ಪಂದ್ಯಗಳಲ್ಲಿ ಕನಿಷ್ಠ 5 ಗೆಲುವುಗಳನ್ನು ಸಾಧಿಸಬೇಕಿದೆ. ತಂಡದ ಪಾಲಿಗೆ ಇದೊಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ.

IPL 2021 ಒಂದೊಳ್ಳೆಯ ಕಾರ್ಯಕ್ಕೆ ಬ್ಲೂ ಜೆರ್ಸಿ ಹರಾಜು ಹಾಕಲಿದೆ ಆರ್‌ಸಿಬಿ..!

ಬಲಿಷ್ಠವಾಗಿದೆ ಆರ್‌ಸಿಬಿ: ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಆರ್‌ಸಿಬಿ ಬಲಿಷ್ಠವಾಗಿದೆ. ನಾಯಕ ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಎಬಿ ಡಿ ವಿಲಿಯ​ರ್ಸ್‌ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದು, ಕೈಲ್‌ ಜೇಮಿಸನ್‌ ಆಲ್ರೌಂಡ್‌ ಆಟ ತಂಡಕ್ಕೆ ಬಹು ಮುಖ್ಯವೆನಿಸಲಿದೆ. ಹರ್ಷಲ್‌ ಪಟೇಲ್‌, ಮೊಹಮದ್‌ ಸಿರಾಜ್‌, ನವ್‌ದೀಪ್‌ ಸೈನಿ, ಯಜುವೇಂದ್ರ ಚಹಲ್‌ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಶ್ರೀಲಂಕಾದ ಆಲ್ರೌಂಡರ್‌ ವನಿಂದು ಹಸರಂಗ, ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಯುಎಇ ಪಿಚ್‌ಗಳಿಗೆ ಲೆಗ್‌ ಸ್ಪಿನ್ನರ್‌ ಹಸರಂಗ ಹೇಳಿ ಮಾಡಿಸಿದ ಬೌಲರ್‌ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಿಂಗಾಪುರ ಮೂಲದ ಬ್ಯಾಟ್ಸ್‌ಮನ್‌ ಟಿಮ್‌ ಡೇವಿಡ್‌ ಸಹ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

Scroll to load tweet…

ಒತ್ತಡದಲ್ಲಿ ಕೆಕೆಆರ್‌: ಇಯಾನ್‌ ಮೊರ್ಗನ್‌ ನೇತೃತ್ವದ ಕೋಲ್ಕತಾ ತಂಡ ಭಾರೀ ಒತ್ತಡದಲ್ಲಿದೆ. ಮೊದಲ ಭಾಗದಲ್ಲಿ ಶುಭ್‌ಮನ್‌ ಗಿಲ್‌ ಹಾಗೂ ನಿತೀಶ್‌ ರಾಣಾ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಈ ಇಬ್ಬರೂ ಪ್ರಮುಖ ಪಾತ್ರ ವಹಿಸಬೇಕಿದೆ. ಮೊರ್ಗನ್‌ ಸಹ ಲಯ ಕಂಡುಕೊಳ್ಳಬೇಕಿದೆ. ತಂಡ ಗೆಲ್ಲಬೇಕೆಂದರೆ ದಿನೇಶ್‌ ಕಾರ್ತಿಕ್‌, ಆ್ಯಂಡ್ರೆ ರಸೆಲ್‌, ರಾಹುಲ್‌ ತ್ರಿಪಾಠಿ ಹಾಗೂ ಶಕೀಬ್‌ ಅಲ್‌ ಹಸನ್‌ ಉತ್ತಮ ಆಟವಾಡಬೇಕಿದೆ. ಪ್ಯಾಟ್‌ ಕಮಿನ್ಸ್‌ ಗೈರಾಗಲಿರುವ ಕಾರಣ ಟಿಮ್‌ ಸೌಥಿ ಅವರ ಸ್ಥಾನ ತುಂಬಲಿದ್ದಾರೆ.

ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ 38 ರನ್‌ಗಳ ಗೆಲುವು ಸಾಧಿಸಿತ್ತು. ಮತ್ತೊಮ್ಮೆ ಮೇಲುಗೈ ಸಾಧಿಸಿ ಟೂರ್ನಿಯಲ್ಲಿ ಮುನ್ನಡೆಯಲು ವಿರಾಟ್‌ ಪಡೆ ಕಾತರಿಸುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಡಿಕ್ಕಲ್‌, ಕೊಹ್ಲಿ(ನಾಯಕ), ವಿಲಿಯ​ರ್ಸ್‌, ಮ್ಯಾಕ್ಸ್‌ವೆಲ್‌, ರಜತ್‌, ಹಸರಂಗ, ಶಾಬಾಜ್‌, ಜೇಮಿಸನ್‌, ಹರ್ಷಲ್‌, ಸಿರಾಜ್‌, ಚಹಲ್‌.

ಕೆಕೆಆರ್‌: ಗಿಲ್‌, ರಾಣಾ, ತ್ರಿಪಾಠಿ, ಮೊರ್ಗನ್‌(ನಾಯಕ), ಕಾರ್ತಿಕ್‌, ರಸೆಲ್‌, ಶಕೀಬ್‌, ವರುಣ್‌, ಪ್ರಸಿದ್ಧ್ ಕೃಷ್ಣ, ಫರ್ಗೂನಸ್‌/ಸೌಥಿ, ವಾರಿಯರ್‌.

ಸ್ಥಳ: ಅಬು ಧಾಬಿ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌

ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿರಲಿದ್ದು, ವೇಗಿಗಳಿಗೂ ಹೆಚ್ಚಿನ ನೆರವು ಸಿಗುವ ಸಂಭವವಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬೌಲ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು. ಮೊದಲು ಬ್ಯಾಟ್‌ ಮಾಡುವ ತಂಡ 160-170 ರನ್‌ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ.